ADVERTISEMENT

ಮನೆಯಿಂದಲೇ ಕೆಲಸ; ಮಕ್ಕಳ ಮೇಲಿರಲಿ ಕಾಳಜಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ವರ್ಕ್‌ ಫ್ರಂ ಹೋಮ್ ಆರಂಭವಾದಾಗಿನಿಂದ ಮನೆಗೆಲಸ, ಕಚೇರಿ ಕೆಲಸ ಹಾಗೂ ಅಡುಗೆ ಮಾಡುವುದು ಇದರಲ್ಲೇ ಸಮಯ ಹೋಗುತ್ತಿದೆ. ಹೊತ್ತು ಹೊತ್ತಿಗೆ ಸರಿಯಾಗಿ ಊಟ–ತಿಂಡಿ ಮಾಡಲು ಸಮಯವಿಲ್ಲ. ಅದರಲ್ಲೂ ನನ್ನ ಮಗಳ ಕತೆಯಂತೂ ಕೇಳುವುದೇ ಬೇಡ. ಶಾಲೆಯು ಇಲ್ಲ. ಮನೆಯಲ್ಲಿ ಅವಳಿಗೆ ಸಮಯ ನೀಡಲು ನಮ್ಮಿಂದಾಗುತ್ತಿಲ್ಲ. ಮೊದಲೆಲ್ಲಾ ಚೂಟಿಯಾಗಿ ಮನೆ ತುಂಬಾ ಓಡಾಡಿಕೊಂಡಿರುತ್ತಿದ್ದ ಆಕೆ ಈಗೀಗ ಸುಮ್ಮನೆ ಒಂದೆಡೆ ಕೂರುತ್ತಾಳೆ. ತನ್ನ ಪಾಡಿಗೆ ತಾನು ಟಿವಿ ನೋಡುವುದು, ಕಂಪ್ಯೂಟರ್‌ನಲ್ಲಿ ಗೇಮ್‌ ಆಡುವುದು ಮಾಡುತ್ತಾಳೆ. ಊಟ– ತಿಂಡಿಯ ಬಗ್ಗೆಯೂ ಆಸಕ್ತಿ ತೋರುವುದಿಲ್ಲ. ನನ್ನ ಮಗಳು ಯಾಕೆ ಈ ರೀತಿ ಆಡುತ್ತಿದ್ದಾಳೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಗೋಳು ತೋಡಿಕೊಂಡಳು ಗೆಳತಿ ದಿವ್ಯಾ.

ಲಾಕ್‌ಡೌನ್ ಕಾರಣದಿಂದ ಮನೆಯಲ್ಲೇ ಕೆಲಸ ಮಾಡಲು ಆರಂಭಿಸಿದಾಗಿನಿಂದ ಅನೇಕ ತಂದೆ–ತಾಯಿಯರ ಪರಿಸ್ಥಿತಿ ಇದೇ ಆಗಿದೆ. ಮೊದಲು ಕಚೇರಿಗೆ ಹೋಗುವಾಗ ಮಗುವನ್ನು ಶಾಲೆಗೆ ಬಿಡುತ್ತಿದ್ದರು. ಶಾಲೆ ಮುಗಿದ ಮೇಲೆ ಮಗು ಡೇ ಕೇರ್‌ನಲ್ಲಿ ಇರುತಿತ್ತು. ಕಚೇರಿ ಮುಗಿಸಿ ಬರುವಾಗ ಮನೆಗೆ ಕರೆ ತರುತ್ತಿದ್ದರು. ಕೆಲಸದವಳು ಮಾಡಿ ಹೋಗುತ್ತಿದ್ದ ರಾತ್ರಿ ಅಡುಗೆ ತಿಂದು ಹೋಮ್‌ ವರ್ಕ್‌, ಆಟ–ಪಾಠ ಎಂದು ಮಗುವಿನ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿತ್ತು. ಮಗು ಕೂಡ ಶಾಲೆ, ಡೇ ಕೇರ್‌ನಲ್ಲಿ ಒಂದಷ್ಟು ಸ್ನೇಹಿತರು ಹಾಗೂ ಶಿಕ್ಷಕರ ಜೊತೆ ಸಮಯ ಕಳೆಯುತ್ತಿತ್ತು. ಆದರೆ ಈ ಎಲ್ಲವೂ ಬದಲಾಗಿದೆ. ತಂದೆ–ತಾಯಿಯ ವರ್ಕ್ ಫ್ರಂ ಹೋಮ್, ತಾಯಿಯ ಕಚೇರಿ, ಮನೆಗೆಲಸ‌ ಹಾಗೂ ಶಾಲೆ ರಜೆಯ ನಡುವೆ ಮಗು ಹೈರಾಣಾಗುತ್ತಿದೆ. ಅದರಲ್ಲೂ ಮಗು ಸದಾ ತಾಯಿಯ ಸಾನಿಧ್ಯ ಬಯಸುತ್ತದೆ. ಆದರೆ ತಾಯಿಗೆ ಮಗುವಿಗೆ ಸಮಯ ನೀಡುವಷ್ಟು ವ್ಯವಧಾನವಿಲ್ಲ. ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ತಜ್ಞರು.

ಮನೆಯಿಂದಲೇ ಕಚೇರಿ ಕೆಲಸ ಹಾಗೂ ಮನೆಗೆಲಸದ ಒತ್ತಡದ ನಡುವೆ ತಾಯಿಗೆ ಮಗುವಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಮಗುವಿನ ಆಟ–ಪಾಠದಲ್ಲಿ ಸಂತೋಷಿಸುವಷ್ಟು ಸಮಯ– ವ್ಯವಧಾನವೂ ಆಕೆಗಿಲ್ಲ. ಆದರೆ ಈ ಎಲ್ಲದರ ಪರಿಣಾಮ ಮಗುವಿನ ಮೇಲೆ ಬೀರುತ್ತಿದೆ ಎಂಬುದನ್ನು ಮಾತ್ರ ಆಕೆ ಅರ್ಥ ಮಾಡಿಕೊಳ್ಳಬೇಕು. ಲಾಕ್‌ಡೌನ್‌ ಬೇಸರ, ಒತ್ತಡ ಕೇವಲ ತಮ್ಮ ಮನಸ್ಸಿನ ಮೇಲೆ ಮಾತ್ರವಲ್ಲ ಮಗುವಿನ ಮೇಲೂ ಪರಿಣಾಮ ಬೀರಿದೆ ಎಂಬುದನ್ನು ತಂದೆ–ತಾಯಿ ಅರ್ಥ ಮಾಡಿಕೊಳ್ಳಬೇಕು.

ADVERTISEMENT

ದಿನದಲ್ಲಿ ಒಂದಷ್ಟು ಹೊತ್ತನ್ನು ಮೀಸಲಿಡಿ
ಸಿಕ್ಕ ಸಮಯದಲ್ಲೇ ಮಗುವಿನ ಜೊತೆ ಕಾಲ ಕಳೆಯಬೇಕು. ಮಗುವಿಗಾಗಿ ದಿನದಲ್ಲಿ ಒಂದಷ್ಟು ಸಮಯವನ್ನು ಮೀಸಲಿಡಬೇಕು. ನಮ್ಮ ಕೆಲಸದ ನಡುವೆ ಮಗು ಒಂಟಿಯಾಗುತ್ತಿದೆ ಎಂಬುದನ್ನು ನೆನಪಿಸಿಕೊಳ್ಳುತ್ತಿರಬೇಕು. ಊಟ–ತಿಂಡಿಯ ಹೊತ್ತಿನಲ್ಲಿ ಮಗುವಿನೊಂದಿಗೆ ಸಮಯ ಕಳೆಯಬೇಕು. ಮನೆಗೆಲಸ ಮಾಡುವಾಗಲೂ ಸಣ್ಣ–ಪುಟ್ಟ ಕೆಲಸ ಹೇಳಿ ಕೊಡುತ್ತಾ ಮಗುವನ್ನು ಜೊತೆಯಲ್ಲೇ ಇರಿಸಿಕೊಳ್ಳಬೇಕು.

ಮಕ್ಕಳ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ
ಮಕ್ಕಳ ಮಾತು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಅವರು ಹೇಳುವುದನ್ನು ಸಮಾಧಾನದಿಂದ ಕೇಳಿಸಿಕೊಳ್ಳಿ. ಪರಿಸ್ಥಿತಿಯನ್ನು ಅವರಿಗೆ ಅರ್ಥ ಮಾಡಿಸಿ. ಮಕ್ಕಳನ್ನು ಸದಾ ಗಮನಿಸುತ್ತಿರಿ. ಅವರ ಏನನ್ನಾದರೂ ಹೇಳಲು ಬಯಸುತ್ತಿದ್ದಾರಾ ಎಂಬುದನ್ನು ತಿಳಿದುಕೊಳ್ಳಿ. ಕೆಲಸ ಮಧ್ಯೆ ಅವರ ಜೊತೆ ಆಟ ಆಡುವುದು, ತಮಾಷೆಯ ಪ್ರಶ್ನೆಗಳನ್ನು ಕೇಳುವುದು ಮಾಡುತ್ತಿರಿ.

ಇಷ್ಟದ ತಿನಿಸುಗಳನ್ನು ಮಾಡಿಕೊಡಿ
ಸಮಯ ಸಿಕ್ಕಾಗಲೆಲ್ಲಾ ಮಕ್ಕಳು ಕೇಳುವ ಇಷ್ಟದ ತಿನಿಸುಗಳನ್ನು ಮಾಡಿ ಕೊಡಿ. ವಾರದ ದಿನಗಳಲ್ಲಿ ಸಾಧ್ಯವಾಗದಿದ್ದರೆ ವಾರಾಂತ್ಯಗಳಲ್ಲಿ ಮಕ್ಕಳು ಕೇಳುವ ತಿಂಡಿಗಳನ್ನು ಮಾಡಿ ಕೊಡಿ. ಈಗ ಹೊರಗಡೆ ತಿನ್ನುವುದು ಸೂಕ್ತವಲ್ಲ. ಅಲ್ಲದೇ ಹೊರಗಡೆ ಹೋಗುವುದು ಅಪಾಯ. ಆ ಕಾರಣಕ್ಕೆ ಸಂಪ್ರದಾಯಿಕ ತಿನಿಸುಗಳ ರುಚಿಯನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ. ಬಿಸ್ಕತ್ತು, ಕೇಕ್‌ಗಳನ್ನು ಮನೆಯಲ್ಲೇ ಮಾಡಿ ತಿನ್ನಲು ಕೊಡಿ. ಆರೋಗ್ಯಕ್ಕೆ ಹಿತ ಎನ್ನಿಸುವ ತಿನಿಸುಗಳನ್ನು ರುಚಿಯಾಗಿ ಮಾಡಿಕೊಟ್ಟರೆ ಯಾವ ಮಕ್ಕಳು ಬೇಡ ಎನ್ನಲು ಸಾಧ್ಯವಿಲ್ಲ.

ಸದಾ ಕೋಣೆಯೊಳಗೆ ಬಾಗಿಲು ಹಾಕಿಕೊಂಡಿರಬೇಡಿ‌
ಅನೇಕ ಪೋಷಕರು ಕೆಲಸದ ವೇಳೆಯಲ್ಲಿ ಮಕ್ಕಳು ತೊಂದರೆ ನೀಡುತ್ತಾರೆ ಎಂಬ ಕಾರಣಕ್ಕೆ ಕೊಠಡಿ ಬಾಗಿಲು ಮುಚ್ಚಿಕೊಂಡಿರುತ್ತಾರೆ. ಇದು ತುಂಬಾ ಅಪಾಯಕಾರಿ. ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯದಲ್ಲಿ ಕೊಠಡಿ ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿದ್ದರೆ ಮಕ್ಕಳು ಹೊರಗಿನಿಂದ ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಅರಿವಾಗುವುದಿಲ್ಲ. ಅಡುಗೆಕೋಣೆಗೆ ಹೋಗಿ ಗ್ಯಾಸ್‌ ಆನ್‌ ಮಾಡುವುದು, ಚಾಕುವಿನೊಂದಿಗೆ ಆಟವಾಡುವುದು ಮುಂತಾದ ಅಪಾಯಕಾರಿ ಕೆಲಸಗಳನ್ನು ಮಾಡಬಹುದು. ಆ ಕಾರಣಕ್ಕೆ ಕಾನ್ಫರೆನ್ಸ್ ಕರೆ ಇರುವ ಸಮಯದಲ್ಲಿ ಮಾತ್ರ ಕೊಠಡಿ ಬಾಗಿಲು ಹಾಕಿಕೊಳ್ಳಿ. ಉಳಿದ ಸಮಯದಲ್ಲಿ ಅವರು ನಿಮ್ಮ ಕೊಠಡಿಗೆ ಬರಲು ಅನುವು ಮಾಡಿಕೊಡಿ. ಕೆಲಸದ ಮಹತ್ವವನ್ನು ತಿಳಿಸಿ ಹೇಳಿ. ಸುಮ್ಮನೆ ಪಕ್ಕದಲ್ಲಿ ಕುಳಿತಿರಬೇಕು, ತೊಂದರೆ ಮಾಡಬಾರದು ಎಂಬುದನ್ನು ಅವರಿಗೆ ಅರಿವಾಗುವಂತೆ ತಿಳಿಸಿ.

ಸದಾ ಬಯ್ಯುವುದು ಹೊಡೆಯುವುದು ಮಾಡಬೇಡಿ
ಮೊದಲೆಲ್ಲಾ ಶಾಲೆ ಹಾಗೂ ಹೊರಗಡೆ ಆಟವಾಡಲು ಹೋಗುವ ಮಕ್ಕಳಿಗೆ ಈಗ ಮನೆಯೊಳಗೆ ಬಂಧಿಸಿದಂತಾಗಿದೆ. ಆ ಕಾರಣಕ್ಕೆ ಹೊರಗೆ ಹೋಗಲು ಹಟ ಮಾಡುವುದು, ಜೊತೆಯಲ್ಲಿ ಆಟವಾಡುವಂತೆ ಕೇಳುವುದು ಮಾಡುತ್ತಾರೆ. ಆಗ ನನಗೆ ಸಮಯವಿಲ್ಲ ಎಂದು ಹೊಡೆಯುವುದು, ಬಯ್ಯುವುದು ಮಾಡುವುದಕ್ಕಿಂತ ಕೆಲಸ ಮುಗಿದ ಮೇಲೆ ನಿನ್ನೊಂದಿಗೆ ಆಟವಾಡುತ್ತೇನೆ. ಅಲ್ಲಿಯವರೆಗೆ ನೀನು ಒಬ್ಬನೇ ಅಥವಾ ಒಬ್ಬಳೇ ಆಟವಾಡು ಎಂದು ಸಮಾಧಾನ ಪಡಿಸಿ. ಮಕ್ಕಳು ಹಟ ಮಾಡುತ್ತಾರೆಂದು ಪದೇ ಪದೇ ಬಯ್ಯುವುದು. ಹೊಡೆಯುವುದು ಮಾಡಬೇಡಿ. ಇದರಿಂದ ಅವರು ಮಾನಸಿಕವಾಗಿ ಕುಗ್ಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.