ADVERTISEMENT

ಇಂಡೊ–ಪೆಸಿಫಿಕ್‌ ಪ್ರದೇಶದ ಭದ್ರತೆ ದೃಷ್ಟಿಯಿಂದ ‘ಔಕಸ್‌’ ಮೈತ್ರಿ: ಆಸ್ಟ್ರೇಲಿಯಾ

ಪಿಟಿಐ
Published 17 ಸೆಪ್ಟೆಂಬರ್ 2021, 12:00 IST
Last Updated 17 ಸೆಪ್ಟೆಂಬರ್ 2021, 12:00 IST

ನವದೆಹಲಿ: ‘ಇಂಡೊ– ಪೆಸಿಫಿಕ್‌ ಪ್ರದೇಶದ ಭದ್ರತೆ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಾವು ‘ಔಕಸ್‌’ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಸೇರಿದ್ದೇವೆ’ ಎಂದು ಆಸ್ಟ್ರೇಲಿಯಾ ಶುಕ್ರವಾರ ಹೇಳಿದೆ.

ಇಂಡೊ– ಪೆಸಿಫಿಕ್‌ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ಎದುರಿಸಲು ಅಮೆರಿಕ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾ ಭದ್ರತಾ ಮೈತ್ರಿಯನ್ನು ಮಾಡಿಕೊಂಡಿದೆ. ಈ ಮೈತ್ರಿಯಡಿ ಅಮೆರಿಕ, ಬ್ರಿಟನ್‌ ಪರಮಾಣು– ಚಾಲಿತ ಜಲಾಂತರ್ಗಾಮಿಗಳ ಅಭಿವೃದ್ಧಿಗೆ ಆಸ್ಟ್ರೇಲಿಯಾಗೆ ನೆರವು ನೀಡಲಿದೆ.

‘ಈ ಮೂಲಕ ಇಂಡೊ– ಪೆಸಿಫಿಕ್‌ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ನಡವಳಿಕೆಯನ್ನು ತಡೆಯಲು ಭಾರತ ಮತ್ತು ಇತರ ರಾಷ್ಟ್ರಗಳ ಜತೆಗೆ ಆಸ್ಟ್ರೇಲಿಯಾವು ಕೊಡುಗೆ ನೀಡಬಹುದು’ ಎಂದು ಆಸ್ಟ್ರೇಲಿಯಾ ತಿಳಿಸಿದೆ.

ADVERTISEMENT

‘ಪರಮಾಣು– ಚಾಲಿತ ಜಲಾಂತರ್ಗಾಮಿಯು ಸಮೃದ್ಧ ಮತ್ತು ಸುರಕ್ಷಿತ ಇಂಡೊ– ಪೆಸಿಫಿಕ್‌ ಪ್ರದೇಶಕ್ಕೆ ಆಸ್ಟ್ರೇಲಿಯಾ ನೀಡುತ್ತಿರುವ ಕೊಡುಗೆಯಾಗಿದೆ’ ಎಂದು ಭಾರತದಲ್ಲಿನ ಆಸ್ಟ್ರೇಲಿಯಾದ ಹೈ ಕಮಿಷನರ್‌ ಬೆರಿ ಒ‘ಫಾರೆಲ್ ಮಾಹಿತಿ ನೀಡಿದರು.

‘ಔಕಸ್‌’ ಪಾಲುದಾರಿಕೆಯನ್ನು ಘೋಷಿಸುವ ಮುನ್ನ ಆಸ್ಟ್ರೇಲಿಯಾದ ಪ್ರಧಾನಿ, ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರು ಭಾರತದ ಸಹವರ್ತಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದರು ಎಂದು ಅವರು ಹೇಳಿದರು.

‘ಗಂಭೀರ ಚಿಂತನೆಯ ಬಳಿಕ ಆಸ್ಟ್ರೇಲಿಯಾ ಈ ನಿರ್ಧಾರ ಕೈಗೊಂಡಿದೆ. ಇದು ಬದಲಾಗುತ್ತಿರುವ ಕಾರ್ಯತಂತ್ರದ ಸನ್ನಿವೇಶಗಳಿಗೆ ಪ್ರತಿಕ್ರಿಯೆಯಾಗಿದೆ. ಜತೆಗೆ, ಇದು ಈ ಪ್ರದೇಶದಲ್ಲಿನ ದ್ವಿಪಕ್ಷೀಯ, ತ್ರಿಪಕ್ಷೀಯ ಮತ್ತು ಚತುಷ್ಕೋನ ಸಂಬಂಧದ ಭಾಗವೂ ಆಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.