ADVERTISEMENT

ಭಾರತದ ಕೋವಿಶೀಲ್ಡ್ ಲಸಿಕೆಗೆ ಆಸ್ಟ್ರೇಲಿಯಾದ ಔಷಧ ನಿಯಂತ್ರಕ ಅನುಮೋದನೆ

ಪಿಟಿಐ
Published 1 ಅಕ್ಟೋಬರ್ 2021, 10:49 IST
Last Updated 1 ಅಕ್ಟೋಬರ್ 2021, 10:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಒಳಬರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಗೆ ಆಸ್ಟ್ರೇಲಿಯಾದ ಉನ್ನತ ವೈದ್ಯಕೀಯ ನಿಯಂತ್ರಕ ಶುಕ್ರವಾರ ಅನುಮೋದನೆ ನೀಡಿದೆ. ಇದರಿಂದಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಆ ದೇಶಕ್ಕೆ ಮರಳಲು ಅನುಕೂಲವಾಗುವ ನಿರೀಕ್ಷೆಯಿದೆ.

'ಚಿಕಿತ್ಸಾ ಸರಕುಗಳ ಆಡಳಿತವು (TGA) ಕೊರೊನಾವ್ಯಾಕ್ (ಸಿನೋವ್ಯಾಕ್) ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು 'ಮಾನ್ಯತೆ ಪಡೆದ ಲಸಿಕೆಗಳು' ಎಂದು ಪರಿಗಣಿಸಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರು ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ನಿರ್ಧರಿಸುವಂತೆ ಸೂಚಿಸಲಾಗಿದೆ' ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರ ಕಚೇರಿ ತಿಳಿಸಿದೆ.

'ಅಂತರರಾಷ್ಟ್ರೀಯ ಗಡಿಯಲ್ಲಿ ಬದಲಾವಣೆ ತರುವುದರೊಂದಿಗೆ ವಿಶ್ವಕ್ಕೆ ಸುರಕ್ಷಿತವಾಗಿ ಪುನಃ ತೆರೆದುಕೊಳ್ಳಲು ಆಸ್ಟ್ರೇಲಿಯಾ ತನ್ನ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ. ಅಂತರರಾಷ್ಟ್ರೀಯ ಪ್ರಯಾಣ ಹೇಗಿರಬೇಕು ಎನ್ನುವ ಕುರಿತು ಮುಂಬರುವ ತಿಂಗಳಲ್ಲಿ ನಮ್ಮ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸುತ್ತಿದೆ' ಎಂದು ಅದು ಹೇಳಿದೆ.

ADVERTISEMENT

ಕೋವಿಶೀಲ್ಡ್‌ ಲಸಿಕೆಗೆ ಟಿಜಿಎ ನೀಡಿರುವ ಅನುಮೋದನೆಯಿಂದ ಆಸ್ಟ್ರೇಲಿಯಾಕ್ಕೆ ಮರಳಲು ಕಾಯುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ತಕ್ಷಣದ ಪ್ರಯಾಣಕ್ಕೆ ಅನುಕೂಲವಾಗುತ್ತದೆಯೇ ಅಥವಾ ವಿದೇಶಿ ಪ್ರಜೆಗಳು ದೇಶಕ್ಕೆ ಪ್ರವೇಶಿಸಲು ಈಗಿರುವ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೇ ಎಂಬುದು ಸದ್ಯ ಸ್ಪಷ್ಟವಾಗಿಲ್ಲ.

ಟಿಜಿಎ ಎನ್ನುವುದು ಆಸ್ಟ್ರೇಲಿಯಾದ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ನಿಯಂತ್ರಕವಾಗಿದೆ.

ಇಂದು, ಕೋವಿಡ್ ವಿರುದ್ಧ ಕೊರೊನಾವ್ಯಾಕ್ (ಸಿನೋವ್ಯಾಕ್) ಮತ್ತು ಕೋವಿಶೀಲ್ಡ್ (ಆಸ್ಟ್ರಾಜೆನೆಕಾ/ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ) ಲಸಿಕೆಗಳು ನೀಡುವ ರಕ್ಷಣೆಯ ದತ್ತಾಂಶದ ಆರಂಭಿಕ ಮೌಲ್ಯಮಾಪನವನ್ನು ಆರಂಭಿಸಿ ಟಿಜಿಎ ಅನುಮೋದನೆ ನೀಡಿದೆ ಮತ್ತು ಈ ಲಸಿಕೆಗಳನ್ನು 'ಮಾನ್ಯತೆ ಪಡೆದ ಲಸಿಕೆಗಳು' ಎಂದು ಪರಿಗಣಿಸಬೇಕು ಎಂದು ಸಲಹೆ ನೀಡಿದೆ' ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಕಚೇರಿ(ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.

'ಈ ಎರಡು ಹೆಚ್ಚುವರಿ ಲಸಿಕೆಗಳನ್ನು ಗುರುತಿಸುವುದು ವಿದೇಶದಲ್ಲಿ ಲಸಿಕೆ ಪಡೆದ ಹೆಚ್ಚಿನ ಆಸ್ಟ್ರೇಲಿಯನ್ನರು ಬೇಗನೆ ರಾಷ್ಟ್ರಕ್ಕೆ ಮರಳಲು ನೆರವಾಗುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಟಿಜಿಎಯಿಂದ ಮಾನ್ಯತೆ ಪಡೆದ ಲಸಿಕೆಯನ್ನು ಜನರು ಪಡೆದಿದ್ದರೆ ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ತೋರಿಸುವ ಪ್ರಕ್ರಿಯೆಗಳನ್ನು ಮುಂಬರುವ ವಾರಗಳಲ್ಲಿ ಸರ್ಕಾರ ಅಂತಿಮಗೊಳಿಸಲಿದೆ ಎಂದು ಆಸ್ಟ್ರೇಲಿಯಾದ ಪಿಎಂಒ ಹೇಳಿದೆ.

ಟಿಜಿಎಯಿಂದ ಮಾನ್ಯತೆ ಪಡೆಯದ ಲಸಿಕೆಗಳನ್ನು ಪಡೆದ ಅಥವಾ ಲಸಿಕೆ ಹಾಕಿಸದ ಜನರು ದೇಶಕ್ಕೆ ಬಂದ ಮೇಲೆ 14 ದಿನಗಳ ನಿರ್ವಹಣಾ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ' ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.