ADVERTISEMENT

ಕಂಪ್ಯೂಟಿಂಗ್‌ ಅನ್ವೇಷಕ ಕ್ಲೈವ್ ಸಿಂಕ್ಲೇರ್ ನಿಧನ

ಏಜೆನ್ಸೀಸ್
Published 17 ಸೆಪ್ಟೆಂಬರ್ 2021, 12:48 IST
Last Updated 17 ಸೆಪ್ಟೆಂಬರ್ 2021, 12:48 IST
ತಾವು ಅನ್ವೇಷಿಸಿದ್ದ ಎ–ಬೈಕ್‌ ಅನಾವರಣದ ವೇಳೆ ಸರ್ ಕ್ಲೈವ್ ಸಿಂಕ್ಲೇರ್ (ಸಂಗ್ರಹ ಚಿತ್ರ).
ತಾವು ಅನ್ವೇಷಿಸಿದ್ದ ಎ–ಬೈಕ್‌ ಅನಾವರಣದ ವೇಳೆ ಸರ್ ಕ್ಲೈವ್ ಸಿಂಕ್ಲೇರ್ (ಸಂಗ್ರಹ ಚಿತ್ರ).   

ಲಂಡನ್‌: ಕಂಪ್ಯೂಟರ್‌ನ ಹೊಸತನದ ಅನ್ವೇಷಣೆ ಕುರಿತಂತೆ ಅತೀವ ಒಲವು ಹೊಂದಿದ್ದ ಬ್ರಿಟಿಷ್‌ನ ಅನ್ವೇಷಕ ಮತ್ತು ಉದ್ಯಮಿ ಕ್ಲೈವ್ ಸಿಂಕ್ಲೇರ್ ಗುರುವಾರ ನಿಧನರಾದರು. ಅವರಿಗೆ 81 ವರ್ಷವಾಗಿತ್ತು.

ಸುದೀರ್ಘ ಅವಧಿಯಿಂದ ಇವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರ ಪುತ್ರಿ ಬೆಲಿಂದಾ ಸಿಂಕ್ಲೇರ್, ‘ಕ್ಲೈವ್ ಅವರು ಕಳೆದ ವಾರವೂ ಕಂಪ್ಯೂಟರ್‌ನ ಹೊಸ ಅನ್ವೇಷಣೆಯಲ್ಲಿ ತೊಡಗಿಕೊಂಡಿದ್ದರು’ ಎಂದು ತಿಳಿಸಿದರು.

ಹೊಸತರ ಅನ್ವೇಷಣೆ ಎಂದಿಗೂ ಅವರಿಗೆ ಉತ್ಸಾಹ, ಸಾಹಸದ ಅನುಭವವಾಗಿತ್ತು ಎಂದರು. ಒಂದು ಪೀಳಿಗೆಯು ಕಂಪ್ಯೂಟರ್ ಮತ್ತು ಗೇಮಿಂಗ್ ಕುರಿತು ಒಲವು ಬೆಳೆಸಿಕೊಳ್ಳುವಲ್ಲಿ ಇವರು ಅತೀವ ಪ್ರಭಾವ ಬೀರಿದ್ದರು ಎಂದು ಹೇಳಲಾಗಿದೆ.

ADVERTISEMENT

1980ರ ದಶಕದಲ್ಲಿ ಕೈಗೆಟುಕುವ ದರದ ಕಂಪ್ಯೂಟರ್‌‌ಗಳ ಸರಣಿಯನ್ನು ಮನೆಬಳಕೆಗೆ ಪರಿಚಯಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಇದು, ಅಸಂಖ್ಯ ಜನರಿಗೆ ಕಂಪ್ಯೂಟರ್‌ನ ಪ್ರಥಮ ಅನುಭವದ ಜೊತೆಗೆ ಕೋಡಿಂಗ್ ಜಗತ್ತನ್ನು ಪರಿಚಯಿಸಿತ್ತು.

ಲಂಡನ್‌ನ ರಿಚ್ಮಂಡ್‌ ಉಪನಗರದಲ್ಲಿ 1940ರಲ್ಲಿ ಜನಿಸಿದ್ದ ಅವರು 17ನೇ ವರ್ಷಕ್ಕೆ ಶಾಲೆ ತೊರೆದಿದ್ದು, ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಆರಂಭಿಸಿದ್ದರು. 22ನೇ ವಯಸ್ಸಿನಲ್ಲಿ ಸಿಂಕ್ಲೇರ್‌ ರೇಡಿಯಾನಿಕ್ಸ್ ಕಂಪನಿ ಸ್ಥಾಪಿಸಿದ್ದರು. ಮೇಲ್ ಆರ್ಡರ್ ರೇಡಿಯೊ ಕಿಟ್ಸ್ ಮತ್ತು ಅತಿ ಕಿರಿದಾದ ಟ್ರಾನ್‌ಸಿಸ್ಟರ್‌ ರೇಡಿಯೊ ಅನ್ವೇಷಣೆಯಿಂದಾಗಿ ಜಗತ್ತಿನ ಗಮನಸೆಳೆದಿದ್ದರು.

1973ರಲ್ಲಿ ಜಗತ್ತಿನ ಮೊದಲ ಪಾಕೆಟ್‌ ಕ್ಯಾಲ್ಕುಲೇಟರ್ ಪರಿಚಯಿಸಿದ್ದ ಹಿರಿಮೆಯೂ ಅವರದು. ಆ ನಂತರ ಅವರು ಕಂಪ್ಯೂಟರ್‌ನ ಹೊಸತನದ ಅನ್ವೇಷಣೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.