ADVERTISEMENT

ನಾಸಾದ ಉನ್ನತ ಹುದ್ದೆಗೆ ಭಾರತೀಯ–ಅಮೆರಿಕನ್‌ ಭವ್ಯಾ ಲಾಲ್‌ ನೇಮಕ

ಪಿಟಿಐ
Published 2 ಫೆಬ್ರುವರಿ 2021, 9:05 IST
Last Updated 2 ಫೆಬ್ರುವರಿ 2021, 9:05 IST
ನಾಸಾ
ನಾಸಾ   

ವಾಷಿಂಗ್ಟನ್‌: ಭಾರತೀಯ–ಅಮೆರಿಕನ್‌ ಭವ್ಯಾ ಲಾಲ್‌ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಹಂಗಾಮಿ ಕಾರ್ಯಕಾರಿ ಮುಖ್ಯಸ್ಥರಾಗಿ ಸೋಮವಾರ ನೇಮಕಗೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಿರ್ವಹಿಸಿರುವ 'ಏಜೆನ್ಸಿ ರಿವ್ಯೂ ಟೀಮ್‌ನಲ್ಲಿ' ಭವ್ಯಾ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.

'ಇನ್‌ಸ್ಟಿಟ್ಯೂಟ್‌ ಫಾರ್‌ ಡಿಫೆನ್ಸ್‌ ಅನಾಲಿಸಿಸ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನಲ್ಲಿ (ಎಸ್‌ಟಿಪಿಐ) ಸಂಶೋಧನಾ ಸಿಬ್ಬಂದಿ ಸದಸ್ಯೆಯಾಗಿ 2005ರಿಂದ 2020ರ ವರೆಗೂ ಕಾರ್ಯನಿರ್ವಹಿಸಿದ್ದಾರೆ. ಎಂಜೆನಿಯರಿಂಗ್‌ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಅವರು ಅನುಭವ ಪಡೆದಿದ್ದಾರೆ' ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT
ಭವ್ಯಾ ಲಾಲ್‌

ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಯೋಜನಾ ನೀತಿಯ ವಿಶ್ಲೇಷಣೆ ಕಾರ್ಯಗಳನ್ನು ಮುನ್ನಡೆಸಿದ್ದರು. ನಾಸಾ, ರಕ್ಷಣಾ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಭವ್ಯಾ ಅನುಭವ ಹೊಂದಿದ್ದಾರೆ.

ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಮಿತಿಗಳಲ್ಲಿ ಉನ್ನತ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಗಮನಿಸಿ ಅಂತರರಾಷ್ಟ್ರೀಯ ಗಗನಯಾತ್ರಿಗಳ ಅಕಾಡೆಮಿಗೆ ಗೌರವ ಸದಸ್ಯೆಯಾಗಿ ನೇಮಕ ಮಾಡಲಾಗಿದೆ.

ಭವ್ಯ ಲಾಲ್‌ ಅವರು ನ್ಯೂಕ್ಲಿಯರ್‌ ಎಂಜಿನಿಯರಿಂಗ್‌ ವಿಷಯದಲ್ಲಿ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಂಐಟಿಯಿಂದ ತಂತ್ರಜ್ಞಾನ ಮತ್ತು ಕಾರ್ಯನೀತಿಯಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಹಾಗೂ ಜಾರ್ಜ್‌ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ಆಡಳಿತ ವಿಷಯಗಳಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.