ADVERTISEMENT

ಇಂಟೆಲ್‌ ಸಹ ಸಂಸ್ಥಾಪಕ ಗಾರ್ಡನ್‌ ಮೂರ್‌ ನಿಧನ

ಏಜೆನ್ಸೀಸ್
Published 25 ಮಾರ್ಚ್ 2023, 11:37 IST
Last Updated 25 ಮಾರ್ಚ್ 2023, 11:37 IST
ಗಾರ್ಡನ್‌ ಮೂರ್‌
ಗಾರ್ಡನ್‌ ಮೂರ್‌   

ಸ್ಯಾನ್‌ ಫ್ರಾನ್ಸಿಸ್ಕೊ: ಅಮೆರಿಕದ ಬಹುರಾಷ್ಟ್ರೀಯ ಕಂಪನಿ ‘ಇಂಟೆಲ್‌’ ಕಾರ್ಪೊರೇಷನ್‌ ಸಹ ಸಂಸ್ಥಾಪಕ ಗಾರ್ಡನ್‌ ಮೂರ್‌ (94) ಹವಾಯಿಯಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಇಂಟೆಲ್‌ ಹಾಗೂ ಗಾರ್ಡನ್‌ ಮತ್ತು ಬೆಟ್ಟಿ ಮೂರ್‌ ಫೌಂಡೇಷನ್‌ ತಿಳಿಸಿವೆ.

1920ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ್ದ ಮೂರ್‌, 1954ರಲ್ಲಿ ಇಲ್ಲಿನ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದಿದ್ದರು. ಜಾನ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದಲ್ಲಿ ಕೆಲ ಕಾಲ ಸಂಶೋಧಕರಾಗಿಯೂ ಕೆಲಸ ಮಾಡಿದ್ದರು.

1968ರಲ್ಲಿ ಎಂಟು ಮಂದಿ ಎಂಜಿನಿಯರ್‌ಗಳ ಜೊತೆ ಸೇರಿ ₹4.11 ಕೋಟಿ ಬಂಡವಾಳದಲ್ಲಿ ‘ಇಂಟೆಲ್‌’ ಸಂಸ್ಥೆಯನ್ನು ಸ್ಥಾಪಿಸಿದರು. ‘ಇಂಟಿಗ್ರೇಟೆಡ್‌’ ಮತ್ತು ‘ಎಲೆಕ್ಟ್ರಾನಿಕ್ಸ್‌’ ಎರಡೂ ಪದಗಳನ್ನು ಜೋಡಿಸಿ ‘ಇಂಟೆಲ್‌’ ಎಂದು ನಾಮಕರಣ ಮಾಡಿದ್ದರು. 1975ರಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿ 1987ರಲ್ಲಿ ನಿವೃತ್ತರಾದರು.

ADVERTISEMENT

ಮೂರ್ 1968ರಲ್ಲಿ ಇಂಟೆಲ್ ಆರಂಭಕ್ಕೂ ಮೂರು ವರ್ಷ ಮುನ್ನ ‘ಮೂರ್ಸ್‌ ಕಾನೂನು’ ಎಂಬ ಸಿದ್ಧಾಂತವನ್ನು ಮಂಡಿಸಿದ್ದರು.

ಆ ಸಮಯದಲ್ಲಿ ಕಂಪ್ಯೂಟರ್‌ ಚಿಪ್‌ ಬಳಸಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ತಮ್ಮ ಸಿದ್ಧಾಂತದಲ್ಲಿ ಗ್ರಾಫ್‌ ಮೂಲಕ ವಿವರಿಸಿದ್ದರು. ಇಂಟಿಗ್ರೇಟೆಡ್‌ ಸರ್ಕ್ಯೂಟ್‌ಗಳ ಸಾಮರ್ಥ್ಯ ಮತ್ತು ಸಂಕೀರ್ಣತೆಯು ಪ್ರತಿ ವರ್ಷ ದ್ವಿಗುಣಗೊಳ್ಳುತ್ತದೆ ಎಂದು ಅವರು ಪ್ರತಿಪಾದಿಸಿದ್ದರು. ಇದು ಡಿಜಿಟಲ್‌ ಯುಗದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತ್ತು.

ಗಾರ್ಡನ್ ಮತ್ತು ಬೆಟ್ಟಿ ಮೂರ್‌ ಫೌಂಡೇಷನ್‌ ಮೂಲಕ ಅವರು ಸಾಕಷ್ಟು ಪರೋಪಕಾರದ ಕೆಲಸಗಳನ್ನೂ ಮಾಡಿದ್ದಾರೆ. 2000ರಲ್ಲಿ ಫೌಂಡೇಷನ್‌ ಸ್ಥಾಪನೆಯಾದಾಗಿನಿಂದ ₹41,997 ಕೋಟಿ (5.1 ಬಿಲಿಯನ್‌ ಡಾಲರ್) ದಾನ ಮಾಡಿದ್ದರು.

ಇವರು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್‌ ಡಬ್ಲ್ಯು. ಬುಷ್‌ ಅವರು 1990ರಲ್ಲಿ ‘ನ್ಯಾಷನಲ್‌ ಮೆಡಲ್‌ ಫಾರ್‌ ಟೆಕ್ನಾಲಜಿ’ ಪ್ರಶಸ್ತಿ ಮತ್ತು 2002ರಲ್ಲಿ ‘ಪ್ರೆಸಿಡೆಂಶಿಯಲ್‌ ಮೆಡಲ್‌ ಆಫ್‌ ಫ್ರೀಡಂ’ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.