ADVERTISEMENT

ಕರಗುತ್ತಿದೆ ಗ್ರೀನ್‌ಲ್ಯಾಂಡ್‌ ಹಿಮರಾಶಿ: ಏರುತ್ತಿದೆ ಸಾಗರ ಮಟ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2021, 6:01 IST
Last Updated 1 ಆಗಸ್ಟ್ 2021, 6:01 IST
ಗ್ರೀನ್‌ಲ್ಯಾಂಡ್‌ನ ಹಿಮರಾಶಿ ಕರಗುತ್ತಿರುವುದು–ಸಂಗ್ರಹ ಚಿತ್ರ
ಗ್ರೀನ್‌ಲ್ಯಾಂಡ್‌ನ ಹಿಮರಾಶಿ ಕರಗುತ್ತಿರುವುದು–ಸಂಗ್ರಹ ಚಿತ್ರ   

ಬ್ರಸೆಲ್ಸ್‌: ಗ್ರೀನ್‌ಲ್ಯಾಂಡ್‌ನ ಅತಿ ದೊಡ್ಡ ಹಿಮರಾಶಿಯು ಕರಗುತ್ತಿದೆ. 'ಫ್ಲೋರಿಡಾವನ್ನು ಎರಡು ಇಂಚುಗಳಷ್ಟು (5 ಸೆಂ.ಮೀ) ನೀರಿನಿಂದ ಆವರಿಸುವಷ್ಟು' ಹಿಮಗಡ್ಡೆ ಕರಗುತ್ತಿರುವುದಾಗಿ ಡೆನ್ಮಾರ್ಕ್‌ ಸರ್ಕಾರದ ಸಂಶೋಧಕರು ಹೇಳಿದ್ದಾರೆ.

ಹಿಮಕರಗುವಿಕೆ ಇತಿಹಾಸದಲ್ಲಿಯೇ ಬುಧವಾರ ಅತಿ ಹೆಚ್ಚು ಪ್ರಮಾಣದ ಹಿಮಗಡ್ಡೆಯು ಕರಗಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. 1950ರಿಂದ ಮೂರನೇ ಬಾರಿಗೆ ಭಾರೀ ಪ್ರಮಾಣದಲ್ಲಿ ಹಿಮಕರಗುವಿಕೆಗೆ ಗ್ರೀನ್‌ಲ್ಯಾಂಡ್‌ ಸಾಕ್ಷಿಯಾಗಿದೆ. ಪೋಲಾರ್‌ ಪೋರ್ಟಲ್‌ ವೆಬ್‌ಸೈಟ್‌ನಲ್ಲಿ ಸಂಶೋಧಕರು ಹಿಮಕರಗುವಿಕೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಹಂಚಿಕೊಂಡಿದ್ದಾರೆ. 2012 ಮತ್ತು 2019ರಲ್ಲೂ ದೊಡ್ಡ ಪ್ರಮಾಣದಲ್ಲಿ ಹಿಮಗಡ್ಡೆಯು ನೀರಾಗಿ ಹರಿದಿತ್ತು.

ಗ್ರೀನ್‌ಲ್ಯಾಂಡ್‌ನ ಹಿಮಪದರ ಕರುಗುತ್ತಿದೆ ಏಕೆ?

ADVERTISEMENT

ಸಂಶೋಧಕರ ಅಂದಾಜಿನ ಪ್ರಕಾರ, ಕಳೆದ ಬುಧವಾರ 22 ಗಿಗಾಟನ್‌ಗಳಷ್ಟು ಹಿಮಗಡ್ಡೆಯ ರಾಶಿ ಕರಗಿದೆ.

ಬೆಲ್ಜಿಯಂನ 'ಯೂನಿರ್ವಸಿಟಿ ಆಫ್‌ ಲೀಜ್‌ನ' ಹವಾಮಾನ ತಜ್ಞ ಎಕ್ಸವಿರ್‌ ಫೆಟ್ವಿಸ್‌ ಪ್ರಕಾರ, ಕರಗಿರುವ ಹಿಮರಾಶಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚು (ಸುಮಾರು 12 ಗಿಗಾಟನ್‌ಗಳಷ್ಟು) ಸಾಗರದತ್ತ ಹರಿದಿದೆ. ಮತ್ತೆ ಗ್ರೀನ್‌ಲ್ಯಾಂಡ್‌ನಲ್ಲಿ ಹಿಮಮಳೆ ಶುರುವಾಗಿದ್ದರಿಂದ ಉಳಿದ 10 ಗಿಗಾಟನ್‌ಗಳಷ್ಟು ಹಿಮಗಡ್ಡೆಯು ಹರಿದಲ್ಲಿಯೇ ಪುನಃ ಗಟ್ಟಿಯಾಗಿದೆ.

ಒಂದು ಗಿಗಾಟನ್‌ಗೆ 100 ಕೋಟಿ ಟನ್‌ಗಳು ಸಮ.

ಆರ್ಕ್ಟಿಕ್‌ ಪ್ರದೇಶದ ವಾತಾವರಣದಲ್ಲಿ ಬಂಧಿಯಾಗಿರುವ ಬಿಸಿ ಗಾಳಿಯಿಂದಾಗಿ ಹಿಮ ಕರಗುವಿಕೆ ಪ್ರಕ್ರಿಯೆ ಹೆಚ್ಚಳವಾಗಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಉತ್ತರ ಗ್ರೀನ್‌ಲ್ಯಾಂಡ್‌ನಲ್ಲಿ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಮೀರಿರುವುದಾಗಿ ಡೆನ್ಮಾರ್ಕ್‌ನ ಹವಾಮಾನ ಸಂಸ್ಥೆಯು ವರದಿ ಮಾಡಿದೆ. ಅದು ಬೇಸಿಗೆಯಲ್ಲಿ ದಾಖಲಾಗುವ ಸರಾಸರಿ ಉಷ್ಣಾಂಶಕ್ಕಿಂತಲೂ ದುಪ್ಪಟ್ಟು. ಗುರುವಾರ ಅಲ್ಲಿನ ತಾಪಮಾನ 23.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಗ್ರೀನ್‌ಲ್ಯಾಂಡ್‌ನಲ್ಲಿ ಹಿಮರಾಶಿ ಕರಗಿ ಹರಿಯುತ್ತಿರುವುದು–ಉಪಗ್ರಹದ ಚಿತ್ರ

ಹಿಮಗಡ್ಡೆ ಮುಂದುವರಿದರೆ ಮುಂದೇನು?

ವಾತಾವರಣದಲ್ಲಿ ಬಿಸಿಗಾಳಿಯು ಮುಂದುವರಿದರೆ, ಗ್ರೀನ್‌ಲ್ಯಾಂಡ್‌ನಲ್ಲಿ ಹಿಮರಾಶಿ ಮತ್ತಷ್ಟು ಕರಗಲಿದೆ. ಹಿಮಗಡ್ಡೆ ಕರಗುವಿಕೆಯಿಂದಾಗಿ ಸೂರ್ಯನ ಕಿರಣಗಳನ್ನು ಭೂಮಿಯ ಭಾಗವು ಹೆಚ್ಚು ಹೀರಿಕೊಳ್ಳುವ ಪ್ರಕ್ರಿಯೆಗೆ ಒಳಗಾಗುತ್ತದೆ. ಹಿಮರಾಶಿಯು ಹೊದ್ದಿರುವ ಭೂಭಾಗವು ಸೂರ್ಯನ ಕಿರಣಗಳನ್ನು ಪ್ರತಿಫಲಿಸುವುದರಿಂದ ಹೆಚ್ಚು ಶಾಖವು ಭೂಮಿಗೆ ತಲುಪುವುದನ್ನು ತಡೆಯುತ್ತದೆ.

1990ರಿಂದಲೂ ಹಿಮರಾಶಿಯ ಕರಗುವಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಿಮಗಡ್ಡೆ ಕರಗುವಿಕೆಯು 2000 ಇಸವಿಗಿಂತ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಂಟಾರ್ಕ್ಟಿಕಾ ಹೊರತು ಪಡಿಸಿದರೆ, ಭೂಮಿಯಲ್ಲಿ ಸದಾ ಹಿಮರಾಶಿಯನ್ನು ಹೊದ್ದಿರುವ ಮತ್ತೊಂದು ಪ್ರದೇಶ ಗ್ರೀನ್‌ಲ್ಯಾಂಡ್‌. ಗ್ರೀನ್‌ಲ್ಯಾಂಡ್‌ ಮತ್ತು ಅಂಟಾರ್ಕ್ಟಿಕಾ ಜಗತ್ತಿನ ಶೇ 70ರಷ್ಟು ಸಿಹಿ ನೀರಿನ ಸಂಗ್ರಹವನ್ನು ಹೊಂದಿವೆ.

ಈ ಭಾಗದ ಹಿಮರಾಶಿಯ ಕರಗುವಿಕೆ ಹೆಚ್ಚಳವಾದರೆ ಜಾಗತಿಕವಾಗಿ ಸಾಗರಗಳ ನೀರಿನ ಮಟ್ಟ 20ರಿಂದ 23 ಅಡಿಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.