ADVERTISEMENT

‘ಸ್ಪೇಸ್‌ಎಕ್ಸ್‌’ ಮೂಲಕ ಬಾಹ್ಯಾಕಾಶಕ್ಕೆ ನಾಲ್ವರು ಗಗನಯಾತ್ರಿಗಳು

ಐಎಎನ್ಎಸ್
Published 11 ನವೆಂಬರ್ 2021, 4:48 IST
Last Updated 11 ನವೆಂಬರ್ 2021, 4:48 IST
ರಾಕೆಟ್‌ ಉಡಾವಣೆ
ರಾಕೆಟ್‌ ಉಡಾವಣೆ    

ಫ್ಲೋರಿಡಾ: ನಾಸಾ ಮತ್ತು ಎಲೋನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಕಂಪನಿ 'ಸ್ಪೇಸ್‌ಎಕ್ಸ್' ನಾಲ್ವರು ಗಗನಯಾತ್ರಿಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ರವಾನಿಸಿದೆ.

ಫ್ಲೋರಿಡಾದ ಕೇಪ್ ಕ್ಯಾನವೆರಲ್‌ನಲ್ಲಿರುವ ನಾಸಾದ ‘ಕೆನಡಿ ಬಾಹ್ಯಾಕಾಶ ಕೇಂದ್ರ’ದಿಂದ ಬುಧವಾರ ರಾತ್ರಿ 9.03ಕ್ಕೆ ‘ಸ್ಪೇಸ್‌ಎಕ್ಸ್‌’ನ ಫಾಲ್ಕನ್ 9 ಹೆಸರಿನ, ನಾಲ್ವರು ಗಗನಯಾತ್ರಿಗಳಿದ್ದ ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ಕು ಮಂದಿ ಗಗನಯಾತ್ರಿಗಳನ್ನು ರವಾನಿಸುವ ನಾಸಾದ ಈ ಯೋಜನೆ ಹಲವು ಅಡೆತಡೆಗಳಿಂದಾಗಿ ಸಾಕಷ್ಟು ವಿಳಂಬವಾಗಿತ್ತು. ಅಂತಿಮವಾಗಿ ಬುಧವಾರ ರಾತ್ರಿ ಕಾರ್ಯಗತಗೊಂಡಿದೆ.

ADVERTISEMENT

ಗಗನಯಾತ್ರಿ ರಾಜಾ ಚಾರಿ ನೇತೃತ್ವದ ‘ಕ್ರ್ಯು–3’ ಮಿಷನ್‌ ನಲ್ಲಿ, ಪೈಲಟ್‌ಗಳಾದ ಟಾಮ್ ಮಾಷ್ಬರ್ನ್, ಬಾಹ್ಯಾಕಾಶ ಕಾರ್ಯಾಚರಣಾ ತಜ್ಞರಾದ ಕೈಲಾ ಬ್ಯಾರನ್, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಮಥಿಯಾಸ್ ಮೌರರ್ ಇದ್ದಾರೆ. ಬಾಹ್ಯಾಕಾಶದಲ್ಲಿನ ಆರು ತಿಂಗಳ ಕಾರ್ಯಾಚರಣೆಗಾಗಿ ಈ ನಾಲ್ವರೂ ಅಂತರರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. 2022ರ ಏಪ್ರಿಲ್ ಅಂತ್ಯದ ವರೆಗೆ ಅವರು ಅಲ್ಲಿಯೇ ಇರಲಿದ್ದಾರೆ.

ಸ್ಪೇಸ್‌ಎಕ್ಸ್‌ನ ರಾಕೆಟ್‌ನಲ್ಲಿ ಬಾಹ್ಯಾಕಾಶ ಸಿಬ್ಬಂದಿಯ ಜತೆಗೆ 400 ಪೌಂಡ್‌ಗಳಿಗಿಂತ ಹೆಚ್ಚು ವಸ್ತುಗಳು, ಹಾರ್ಡ್‌ವೇರ್ ಅನ್ನೂ ಕೊಂಡೊಯ್ಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.