ADVERTISEMENT

ದಾಖಲೆ ಬಿಡುಗಡೆ: 9/11ರ ಭಯೋತ್ಪಾದಕರ ದಾಳಿಯಲ್ಲಿ ಸೌದಿ ಭಾಗಿ?

ಏಜೆನ್ಸೀಸ್
Published 12 ಸೆಪ್ಟೆಂಬರ್ 2021, 6:38 IST
Last Updated 12 ಸೆಪ್ಟೆಂಬರ್ 2021, 6:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್ (ಎಪಿ): ಅಮೆರಿಕದಲ್ಲಿ 2001ರ ಸೆಪ್ಟೆಂಬರ್‌ 11ರಂದು ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ 16 ಪುಟಗಳ ತನಿಖಾ ದಾಖಲೆಗಳನ್ನು ಎಫ್‌ಬಿಐ ಶನಿವಾರ ಬಿಡುಗಡೆಗೊಳಿಸಿದೆ. ವಿಮಾನ ಅಪಹರಣಕಾರರ ಜೊತೆಗೆ ಸೌದಿ ಭಾಗಿಯಾಗಿತ್ತು ಎಂಬ ಅನುಮಾನಗಳನ್ನು ಇದು ಬಲಪಡಿಸಿದೆ.

ವರ್ಗೀಕರಿಸಲ್ಪಟ್ಟ ಈ ದಾಖಲೆಯು ಒಮರ್‌ ಬಯೋಮಿ ಮತ್ತು ಶಂಕಿತ ಅಲ್‌ ಖೈದಾ ಕಾರ್ಯಕರ್ತರ ನಡುವಿನ ಸಂಪರ್ಕವನ್ನು ತಿಳಿಸುತ್ತದೆ. ವಿದ್ಯಾರ್ಥಿಯಾಗಿದ್ದ ಒಮರ್‌ ಬಯೋಮಿಯು ಸೌದಿ ಗುಪ್ತಚರ ಕಾರ್ಯಕರ್ತನಾಗಿರಬಹುದು ಎಂದು ಹೇಳಲಾಗಿದೆ. ನ್ಯೂಯಾರ್ಕ್‌ ಮತ್ತು ವಾಷಿಂಗ್ಟನ್‌ನಿಂದ ನಾಲ್ಕು ವಿಮಾನಗಳನ್ನು ಅಪಹರಿಸುವ ಪಿತೂರಿ ನಡೆಸಿದ್ದ ಶಂಕಿತ ಅಲ್‌ಖೈದಾ ಕಾರ್ಯಕರ್ತರ ಜತೆ ಸಂಪರ್ಕ ಹೊಂದಿದ್ದ ಎಂದು ದಾಖಲೆಗಳು ತಿಳಿಸುತ್ತವೆ.

ಕ್ಯಾಲಿಫೋರ್ನಿಯಾಕ್ಕೆ 2000ದಲ್ಲಿ ಬಂದಿದ್ದ ನವಾಫ್‌ ಅಲ್‌ ಹಜ್ಮಿ ಮತ್ತು ಖಾಲಿದ್‌ ಅಲ್‌ ಮಿಧರ್‌ (ಅಪಹರಣಕಾರರು) ಜೊತೆಗೆ ಬಯೋಮಿ ಸಂಪರ್ಕ ಹೊಂದಿದ್ದ ಮತ್ತು ಸಭೆಗಳನ್ನು ನಡೆಸಿದ್ದ ಎಂದು ದಾಖಲೆಗಳು ಹೇಳುತ್ತವೆ.

ADVERTISEMENT

ತನ್ನ ಅಧಿಕೃತ ಗುರುತನ್ನು ಮರೆ ಮಾಚಿ, ವಿದ್ಯಾರ್ಥಿಯಾಗಿದ್ದ ಬಯೋಮಿ, ಸೌದಿ ಕಾನ್ಸುಲೇಟ್‌ನಲ್ಲಿ ಉನ್ನತ ಸ್ಥಾನ ಹೊಂದಿದ್ದ ಎಂದು ಮೂಲಗಳು ತಿಳಿಸಿರುವುದಾಗಿ ಎಫ್‌ಬಿಐ ದಾಖಲೆಗಳಲ್ಲಿ ಹೇಳಿದೆ.

ಬಯೋಮಿಯು ಹಜ್ಮಿ ಮತ್ತು ಮಿಧರ್‌ಗೆ ಅನುವಾದಕ್ಕೆ ನೆರವಾಗುತ್ತಿದ್ದ. ಅವರಿಗೆ ಪ್ರಯಾಣ, ವಸತಿ ಸೌಕರ್ಯ ಕಲ್ಪಿಸುವುದರ ಜತೆಗೆ ಆರ್ಥಿಕ ನೆರವನ್ನು ಒದಗಿಸುತ್ತಿದ್ದ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಬಯೋಮಿ ಆಗಾಗ್ಗೆ ‘ಜಿಹಾದ್‌’ ಬಗ್ಗೆ ಮಾತನಾಡುತ್ತಿದ್ದ ಎಂಬುದಾಗಿ ಆತನ ಪತ್ನಿ ಹೇಳುತ್ತಿದ್ದ ವಿಷಯವನ್ನೂ ಮೂಲಗಳ ಆಧರಿಸಿ ಎಫ್‌ಬಿಐ ಪ್ರಸ್ತಾಪಿಸಿದೆ.

ಆದರೆ ಅಪಹರಣಕಾರರ ನಡುವೆ ಸೌದಿ ಸರ್ಕಾರ ನೇರ ಸಂಪರ್ಕ ಹೊಂದಿತ್ತೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ದಾಖಲೆಗಳಲ್ಲಿ ತಿಳಿಸಲಾಗಿದೆ.

ದಾಖಲೆಗಳ ಬಿಡುಗಡೆಗೆ ಸಂಬಂಧಿಸಿದಂತೆ ಬೈಡನ್‌ ಅವರ ಮೇಲೆ ಸಂತ್ರಸ್ತರ ಕುಟುಂಬದಿಂದ ಇತ್ತೀಚೆಗೆ ಒತ್ತಡ ಹೆಚ್ಚಾಗಿತ್ತು. ಅವರು ದಾಖಲೆಗಳ ಬಿಡುಗಡೆಗೆ ಒತ್ತಾಯಿಸಿ ನ್ಯೂಯಾರ್ಕ್‌ನಲ್ಲಿ ಮೊಕದ್ದಮೆಯನ್ನೂ ಹೂಡಿದ್ದರು. ಅಲ್ಲದೆ ಸೌದಿ ಹಿರಿಯ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

11/9ರ ದಾಳಿಯ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೈಡನ್‌ ಅವರ ಆದೇಶದ ಮೇರೆಗೆ ಈ ದಾಖಲೆಗಳನ್ನು ಎಫ್‌ಬಿಐ ಬಹಿರಂಗೊಳಿ‌ಸಿದೆ.

ಅಮೆರಿಕ–ಸೌದಿ ನಡುವೆ ಉತ್ತಮ ಸಂಬಂಧ ಇರುವ ಕಾರಣ ಹಿಂದಿನ ಮೂರು ಆಡಳಿತಗಳು ಈ ದಾಖಲೆಗಳನ್ನು ಬಿಡುಗಡೆಗೊಳಿಸಲು ನಿರಾಕರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.