ADVERTISEMENT

ಕ್ರಿಕೆಟ್ ಸರಣಿ ರದ್ದು: ನ್ಯೂಜಿಲೆಂಡ್‌ಗೆ ಬೆದರಿಕೆ ಬಂದಿದ್ದು ಭಾರತದಿಂದ ಎಂದ ಪಾಕ್

ರಾಯಿಟರ್ಸ್
Published 23 ಸೆಪ್ಟೆಂಬರ್ 2021, 8:23 IST
Last Updated 23 ಸೆಪ್ಟೆಂಬರ್ 2021, 8:23 IST
ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ (ಕೃಪೆ: ಫವಾದ್  ಫೇಸ್‌ಬುಕ್ ಖಾತೆ)
ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ (ಕೃಪೆ: ಫವಾದ್ ಫೇಸ್‌ಬುಕ್ ಖಾತೆ)   

ಇಸ್ಲಾಮಾಬಾದ್: ನ್ಯೂಜಿಲೆಂಡ್‌ ಕ್ರಿಕೆಟ್ ತಂಡಕ್ಕೆ ಬೆದರಿಕೆ ಬಂದಿದ್ದು ಭಾರತದಿಂದ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಬುಧವಾರ ಆರೋಪಿಸಿದ್ದಾರೆ.

ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಕಳೆದ ವಾರ ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಭದ್ರತೆಯ ಕಾರಣ ನೀಡಿ ತವರಿಗೆ ವಾಪಸಾಗಿತ್ತು.

ತಂಡಕ್ಕೆ ಬೆದರಿಕೆ ಇರುವ ಕಾರಣ ವಾಪಸಾಗುತ್ತಿರುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಹೇಳಿತ್ತು. ಆದರೆ, ಯಾವ ರೀತಿಯ ಭೀತಿಯಿತ್ತು ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿರಲಿಲ್ಲ.

ಇದೀಗ ಪಾಕ್ ಸಚಿವ ಫವಾದ್ ಅವರು, ಇ–ಮೇಲ್ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಬೆದರಿಕೆ ಬಂದಿತ್ತು. ಆ ಇ–ಮೇಲ್ ಸಿಂಗಪುರದ ಸ್ಥಳವನ್ನು ಸೂಚಿಸುವ ವಿಪಿಎನ್‌ ಮೂಲಕ ಭಾರತದಿಂದ ಬಂದಿತ್ತು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಆರೋಪದ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ನ್ಯೂಜಿಲೆಂಡ್‌ ತಂಡ ಹಠಾತ್ ವಾಪಸಾಗಿದ್ದಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡ ಪಾಕ್ ಪ್ರವಾಸ ರದ್ದುಗೊಳಿಸಿದೆ.

2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪಾಕ್‌ ಪ್ರವಾಸ ಕೈಗೊಂಡಿದ್ದಾಗ ತಂಡವನ್ನು ಗುರಿಯಾಗಿಸಿ ಭಯೋತ್ಪಾದನಾ ದಾಳಿ ನಡೆದಿತ್ತು. ಬಸ್‌ನಲ್ಲಿದ್ದ ಆಟಗಾರರು ಅದೃಷ್ಟವಶಾತ್‌ ಪಾರಾಗಿದ್ದರು. ಅಂದಿನಿಂದ ವಿದೇಶಿ ತಂಡಗಳನ್ನು ಆಹ್ವಾನಿಸಿ ಕ್ರಿಕೆಟ್‌ ಬಾಂಧವ್ಯ ಸುಧಾರಿಸಲು ಪಾಕಿಸ್ತಾನ ತಂಡ ಪ್ರಯತ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.