ADVERTISEMENT

ಸ್ಪೇಸ್‌ಎಕ್ಸ್ ಪ್ರವಾಸ: ಮೂರು ದಿನ ಕಕ್ಷೆಯಲ್ಲಿ ಕಳೆದು ಭೂಮಿಗೆ ಮರಳಿದ ಪ್ರವಾಸಿಗರು

ಏಜೆನ್ಸೀಸ್
Published 19 ಸೆಪ್ಟೆಂಬರ್ 2021, 9:02 IST
Last Updated 19 ಸೆಪ್ಟೆಂಬರ್ 2021, 9:02 IST
ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಕ್ಯಾಪ್ಸ್ಯೂಲ್‌ ಮೂಲಕ ಭೂಮಿಗೆ ಮರಳಿದ ಬಾಹ್ಯಾಕಾಶ ಪ್ರವಾಸಿಗರು
ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಕ್ಯಾಪ್ಸ್ಯೂಲ್‌ ಮೂಲಕ ಭೂಮಿಗೆ ಮರಳಿದ ಬಾಹ್ಯಾಕಾಶ ಪ್ರವಾಸಿಗರು   

ಕೇಪ್‌ ಕ್ಯಾನಾವೆರಲ್‌: ಸ್ಪೇಸ್‌ಎಕ್ಸ್‌ನ ರಾಕೆಟ್‌ ಮೂಲಕ ವ್ಯೋಮ ಪ್ರವಾಸ ಕೈಗೊಂಡಿದ್ದ ನಾಲ್ಕು ಪ್ರವಾಸಿಗರು ಶನಿವಾರ ಕ್ಯಾಪ್ಸ್ಯೂಲ್‌ ಮೂಲಕ ಫ್ಲೋರಿಡಾದ ಕರಾವಳಿಗೆ ಬಂದಿಳಿದಿದ್ದಾರೆ.

ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಮೂರು ದಿನಗಳ ಹಿಂದೆ ನಭಕ್ಕೆ ಚಿಮ್ಮಿದ್ದ ರಾಕೆಟ್‌, ಬಾಹ್ಯಾಕಾಶ ಪ್ರವಾಸಿಗರನ್ನು ಭೂ ಕಕ್ಷೆಗೆ ಸೇರಿಸಿತ್ತು. ಕೋಟ್ಯಧಿಪತಿ, ಉದ್ಯಮಿ ಜೆರೆಡ್‌ ಐಸಾಕ್‌ಮ್ಯಾನ್‌ ಈ ಪ್ರವಾಸದ ವೆಚ್ಚ ಭರಿಸಿದ್ದಾರೆ.

ಭೂವಿಜ್ಞಾನಿ ಸಿಯಾನ್‌ ಪ್ರೊಕ್ಟರ್‌ (51), ವೈದ್ಯರ ಸಹಾಯಕ ಮತ್ತು ಚಿಕ್ಕಂದಿನಲ್ಲಿ ಮೂಳೆ ಕ್ಯಾನ್ಸರ್‌ನಿಂದ ಬದುಕುಳಿದ ಹ್ಯಾಲೆ ಆರ್ಕೆನೆಕ್ಸ್‌ (29) ಹಾಗೂ ವಾಯುಪಡೆಯ ಮಾಜಿ ಅಧಿಕಾರಿ ಕ್ರಿಸ್‌ ಸೆಂಬ್ರೋಸ್ಕಿ (42) ಅವರನ್ನು ಜೆರೆಡ್‌ ತಮ್ಮ ಜೊತೆಯಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದರು.

ADVERTISEMENT

ನಾಲ್ಕೂ ಜನರು ಪ್ರವಾಸಕ್ಕೂ ಮುನ್ನ ಆರು ತಿಂಗಳು ತರಬೇತಿ ಮತ್ತು ತುರ್ತು ಸಂದರ್ಭಗಳಲ್ಲಿ ನಡೆಸಬೇಕಾದ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು. ಅವರು ಕಕ್ಷೆಯಲ್ಲಿ ಪ್ರವಾಸದಲ್ಲಿರುವಾಗ ಸೇಂಟ್‌ ಜೂಡ್‌ ಆಸ್ಪತ್ರೆಯ ರೋಗಿಗಳೊಂದಿಗೆ ಮಾತುಕತೆ ನಡೆಸಿದ್ದರು. ತಮ್ಮಲ್ಲಿಯೇ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಕೊಂಡಿದ್ದರು, ನ್ಯೂಯಾರ್ಕ್‌ ಷೇರುಪೇಟೆ ವಹಿವಾಟಿನ ಮುಕ್ತಾಯದ ಘಂಟೆ ಬಾರಿಸಿದ್ದರು ಹಾಗೂ ಚಿತ್ರ ಬಿಡಿಸುವುದು ಹಾಗೂ ಉಕುಲೆಲೆ (ಗಿಟಾರ್‌ ರೀತಿಯ ಪುಟ್ಟ ವಾದ್ಯ) ನುಡಿಸುವುದರಲ್ಲಿ ಮಗ್ನರಾಗಿದ್ದರು.

ಸ್ಪೇಸ್‌ಎಕ್ಸ್‌ ವರ್ಷಕ್ಕೆ ಖಾಸಗಿಯಾಗಿ ಆರು ಬಾಹ್ಯಾಕಾಶ ಯಾನ ನಡೆಸಲು ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.