ADVERTISEMENT

ಅತ್ಯಾಚಾರ ನಿಲ್ಲಿಸಿ: ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್ ಮಹಿಳೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 6:00 IST
Last Updated 21 ಮೇ 2022, 6:00 IST
ಉಕ್ರೇನ್ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋಗುತ್ತಿರುವ ದೃಶ್ಯ (ಟ್ವಿಟರ್ ಚಿತ್ರ)
ಉಕ್ರೇನ್ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋಗುತ್ತಿರುವ ದೃಶ್ಯ (ಟ್ವಿಟರ್ ಚಿತ್ರ)    

ಪ್ಯಾರಿಸ್: ಉಕ್ರೇನ್‌ ಮಹಿಳೆಯೊಬ್ಬರು ಕಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮಹಿಳೆ ಧರಿಸಿದ್ದ ಉಡುಪಿನ ಮೇಲೆ ಉಕ್ರೇನಿಯನ್ ಧ್ವಜದ ಬಣ್ಣಗಳಲ್ಲಿ ‘ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ (Stop Raping Us) ಎಂದು ಬರೆಯಲಾಗಿದೆ.

ಕೆಂಪು ಬಣ್ಣದ ಟಾಪ್‌ಲೆಸ್‌ ಉಡುಪು ಧರಿಸಿದ್ದ ಮಹಿಳೆಯೊಬ್ಬರು ಕಿರುಚುತ್ತಾ ಛಾಯಾಗ್ರಾಹಕರ ಮುಂದೆ ಏಕಾಏಕಿ ಓಡಿಬಂದಿದ್ದರು. ಕೂಡಲೇ ಸ್ಥಳದಲ್ಲಿದ ಭದ್ರತಾ ಸಿಬ್ಬಂದಿ ಆಕೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ADVERTISEMENT

ಜಾರ್ಜ್ ಮಿಲ್ಲರ್ ಅವರ ‘ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್’ ಚಿತ್ರದ ಪ್ರದರ್ಶನದ ವೇಳೆ ನಡೆದ ಈ ಘಟನೆ ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು.

‘ರಷ್ಯಾ ಸೇನೆ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ಇತ್ತೀಚೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದರು.

ಕಾನ್ ಚಿತ್ರೋತ್ಸವದಲ್ಲಿ ಉದ್ಘಾಟನಾ ಸಮಾರಂಭದ ವೇಳೆ ವಿಡಿಯೊ ಹಂಚಿಕೊಂಡಿದ್ದ ಝೆಲೆನ್‌ಸ್ಕಿ, ಉಕ್ರೇನ್‌ಗೆ ಸಹಾಯಾಸ್ತ ಚಾಚುವಂತೆ ಮನವಿ ಮಾಡಿದ್ದರು.

ಅಮೆರಿಕ ಹಾಗೂ ನ್ಯಾಟೊ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ರಷ್ಯಾ ಫೆ. 25ರಂದು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾರ್ವಜನಿಕರು ಸೇರಿದಂತೆ ಅನೇಕ ಸೈನಿಕರು ಮೃತಪಟ್ಟಿದ್ದಾರೆ.

ಓದಿ...ಕಾನ್ ಚಿತ್ರೋತ್ಸವ:ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಜಾನಪದ ಕಲಾವಿದ ಮಾಮೆ ಖಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.