ADVERTISEMENT

ಅಫ್ಗನ್: ಅಧಿಕಾರ ಸ್ವೀಕಾರ ಸಮಾರಂಭ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 20:48 IST
Last Updated 11 ಸೆಪ್ಟೆಂಬರ್ 2021, 20:48 IST
   

ನವದೆಹಲಿ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಮಧ್ಯಂತರ ಸರ್ಕಾರದ ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದೆ ಎಂದು ರಷ್ಯಾದ ‘ಟಾಸ್’ ಸುದ್ದಿ ಸಂಸ್ಥೆ ವರದಿ ಮಾಡಿದ್ದಾಗಿ ಹಲವು ಮಾಧ್ಯಮಗಳು ಉಲ್ಲೇಖಿಸಿವೆ.

ಅಮೆರಿಕದ ಅವಳಿ ವಾಣಿಜ್ಯ ಸಂಕೀರ್ಣಗಳನ್ನು ಉಗ್ರರು ಧ್ವಂಸಗೊಳಿಸಿದ 20ನೇ ವರ್ಷಾಚರಣೆಯಂದು, ಅಂದರೆ ಸೆಪ್ಟೆಂಬರ್ 11ರಂದು ಅಧಿಕಾರ ಸ್ವೀಕಾರ ಸಮಾರಂಭ ನಿಗದಿಯಾಗಿತ್ತು.

‘ಹೊಸ ಸರ್ಕಾರದ ಉದ್ಘಾಟನಾ ಸಮಾರಂಭವನ್ನು ಕೆಲವು ದಿನಗಳ ಹಿಂದೆ ರದ್ದುಪಡಿಸಲಾಗಿದೆ. ಸಂಪುಟದ ಒಂದು ಭಾಗವನ್ನು ಘೋಷಿಸಿದ್ದು, ಅದು ಈಗಾಗಲೇ ಕಾರ್ಯಾರಂಭ ಮಾಡಿದೆ’ ಎಂದುಅಫ್ಗಾನ್ ಸರ್ಕಾರದ ಸಾಂಸ್ಕೃತಿಕ ಆಯೋಗದ ಸದಸ್ಯ ಇನಾಮುಲ್ಲಾ ಸಮಂಗಾನಿ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ADVERTISEMENT

ರಷ್ಯಾ, ಇರಾನ್, ಚೀನಾ, ಕತಾರ್ ಮತ್ತು ಪಾಕಿಸ್ತಾನವನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ದಾಳಿಯ ವಾರ್ಷಿಕೋತ್ಸವ ದಿನದಂದೇ ಉದ್ಘಾಟನಾ ಸಮಾರಂಭ ನಡೆದಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ರಷ್ಯಾ ತಿಳಿಸಿತ್ತು ಎನ್ನಲಾಗಿದೆ.

ವಾರ್ಷಿಕೋತ್ಸವದ ದಿನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳದಂತೆ ಕತಾರ್ ಮೂಲಕ ಅಮೆರಿಕ ಮಿತ್ರಪಡೆಗಳು ತಾಲಿಬಾನ್‌ಗೆ ಒತ್ತಡ ಹೇರಿದ್ದವು ಎಂದು ವರದಿಯಾಗಿದೆ. ಅಂದೇ ಉದ್ಘಾಟನೆ ಮಾಡಿದಲ್ಲಿ, ತಾಲಿಬಾನಿಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗದಿರಬಹುದು ಎಂದು ಎಚ್ಚರಿಸಿದ್ದವು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.