ADVERTISEMENT

ಅಮೆರಿಕ: 7 ಲಕ್ಷ ದಾಟಿದ ಕೋವಿಡ್‌ ಸಾವಿನ ಸಂಖ್ಯೆ

ಪಿಟಿಐ
Published 2 ಅಕ್ಟೋಬರ್ 2021, 5:10 IST
Last Updated 2 ಅಕ್ಟೋಬರ್ 2021, 5:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಿನಿಯಾಪೊಲಿಸ್: ಅಮೆರಿಕದಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳ ಸಂಖ್ಯೆ ಶುಕ್ರವಾರ 7 ಲಕ್ಷದ ಗಡಿ ದಾಟಿತು. ಇನ್ನೊಂದೆಡೆ, ಕೊರೊನಾ ಡೆಲ್ಟಾ ತಳಿ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಆಡಳಿತಕ್ಕೆ ಸಮಾಧಾನ ಮೂಡಿಸಿದೆ.

ಕೊನೆಯ ಒಂದು ಲಕ್ಷ ಸಾವು ಮೂರುವರೆ ತಿಂಗಳಲ್ಲಿ ಸಂಭವಿಸಿವೆ. ಲಸಿಕೆ ಪಡೆಯದವರಲ್ಲಿ ಡೆಲ್ಟಾ ರೂಪಾಂತರ ಸೋಂಕು ತ್ವರಿತವಾಗಿ ವ್ಯಾಪಿಸಿದ್ದು, ಇದಕ್ಕೆ ಕಾರಣ ಎನ್ನಲಾಗಿದೆ. ಸಾವಿನ ಸಂಖ್ಯೆ ಬಾಸ್ಟನ್‌ ನಗರದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ.

ಸಾವಿನ ಸಂಖ್ಯೆ 7 ಲಕ್ಷದ ಗಡಿ ದಾಟಿದ ಬೆಳವಣಿಗೆ ವೈದ್ಯಕೀಯ ಕ್ಷೇತ್ರದ ಪ್ರಮುಖರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮುಖಂಡರಲ್ಲಿ ಬೇಸರ ಮೂಡಿಸಿದೆ. ಲಸಿಕೆ ಲಭ್ಯವಿದ್ದರೂ ಹೆಚ್ಚಿನವರು ಪಡೆದುಕೊಂಡಿಲ್ಲ ಎಂಬುದು ಇದಕ್ಕೆ ಕಾರಣ. ಅಂಕಿ ಅಂಶಗಳ ಪ್ರಕಾರ, ಅಮೆರಿಕದಲ್ಲಿ 7 ಕೋಟಿಯಷ್ಟು ಅರ್ಹ ಅಮೆರಿಕನ್ನರಿಗೆ ಇನ್ನೂ ಲಸಿಕೆಯು ತಲುಪಿಲ್ಲ.

‘ಕೋವಿಡ್‌ನಿಂದ ರೋಗಿಗಳನ್ನು ಕಳೆದುಕೊಳ್ಳುವ ಸ್ಥಿತಿ ಬರಬಾರದು’ ಎಂದು ಯುಎಫ್‌ ಹೆಲ್ತ್‌ ಜಾಕ್‌ಸೊನ್‌ವಿಲೆಯ ವ್ಯವಸ್ಥಾಪಕಿ ಡೆಬಿ ಡೆಲಪಾಜ್‌ ಹೇಳಿದರು. ಕೋವಿಡ್‌ ತಾರಕದಲ್ಲಿದ್ದಾಗ ಒಂದೇ ದಿನ ಎಂಟು ಮಂದಿ ಮೃತಪಟ್ಟಿದ್ದನ್ನು ಇವರು ಕಂಡಿದ್ದರು.

ಸಮಾಧಾನಕರವಾದ ಸ್ಥಿತಿ ಎಂದರೆ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರ ದಾಖಲಾತಿ ಕಡಿಮೆ ಆಗುತ್ತಿರುವುದು. ಸೆಪ್ಟೆಂಬರ್‌ ಆರಂಭದಲ್ಲಿ ದೈನಿಕ 93 ಸಾವಿರ ಪ್ರಕರಣ ದಾಖಲಾಗುತ್ತಿದ್ದರೆ, ಈಗ 75 ಸಾವಿರಕ್ಕೆ ಇಳಿದಿದೆ. ಈಗ ಸರಾಸರಿ 1,12,000 ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ಎರಡೂವರೆ ವಾರಗಳ ಸ್ಥಿತಿಗೆ ಹೋಲಿಸಿದರೆ ಮೂರನೇ ಒಂದರಷ್ಟಾಗಿದೆ. ಸಾವಿನ ಸಂಖ್ಯೆಯೂ ಕಡಿಮೆ ಆಗುತ್ತಿದೆ. ವಾರದ ಹಿಂದೆ ಸರಾಸರಿ 2,000 ಸಾವು ಸಂಭವಿಸಿದ್ದರೆ, ಈಗ 1,900ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.