ADVERTISEMENT

ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮೈತ್ರಿಕೂಟ: ಚೀನಾ ಪ್ರಾಬಲ್ಯ ತಡೆಯುವ ಉದ್ದೇಶ

ಚೀನಾ ಪ್ರಾಬಲ್ಯಕ್ಕೆ ತಡೆಯೊಡ್ಡುವ ಉದ್ದೇಶ

ಪಿಟಿಐ
Published 16 ಸೆಪ್ಟೆಂಬರ್ 2021, 18:06 IST
Last Updated 16 ಸೆಪ್ಟೆಂಬರ್ 2021, 18:06 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌
ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌   

ವಾಷಿಂಗ್ಟನ್: ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಗುರುವಾರ ನೂತನ ರಕ್ಷಣಾ ಮೈತ್ರಿಯನ್ನು ಘೋಷಿಸಿವೆ. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಾಬಲ್ಯವನ್ನು ಎದುರಿಸುವ ಮತ್ತು ಮುಕ್ತ ಸಮುದ್ರ ಯಾನ ಸಾಧ್ಯವಾಗಿಸುವ ಉದ್ದೇಶದಿಂದ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅಮೆರಿಕವು ಹೇಳಿದೆ.

ಆಸ್ಟ್ರೇಲಿಯಾವು ಅಣುಶಕ್ತಿ ಆಧಾರಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಲು ಈ ರಕ್ಷಣಾ ಸಹಕಾರ ಮೈತ್ರಿಯು ನೆರವಾಗಲಿದೆ. ಇದರ ಬಗ್ಗೆ ಐರೋಪ್ಯ ಒಕ್ಕೂಟ ಮತ್ತು ಚೀನಾ ತೀವ್ರ ಕಳವಳ ವ್ಯಕ್ತಪಡಿಸಿವೆ.

ಇದೇ 24ರಂದು ಅಮೆರಿಕವು ಕ್ವಾಡ್ ಒಕ್ಕೂಟದ ಶೃಂಗಸಭೆ ನಡೆಸಲಿದೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವು ಶೃಂಗಸಭೆಯಲ್ಲಿ ಭಾಗಿಯಾಗಲಿವೆ. ಆದರೆ, ಅದಕ್ಕೂ ಮುನ್ನವೇ ಅಮೆರಿಕವು ಈ ಮೈತ್ರಿಕೂಟವನ್ನು ರಚಿಸಿದೆ.

ADVERTISEMENT

ಈ ರಕ್ಷಣಾ ಸಹಕಾರದ ಭಾಗವಾಗಿ ಬ್ರಿಟನ್, ಆಸ್ಟ್ರೇಲಿಯಾಕ್ಕೆ ಅಣುಶಕ್ತಿ ಆಧಾರಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿ ಕೊಡಲಿದೆ. ಇದಕ್ಕೂ ಮುನ್ನ ಅಣುಶಕ್ತಿ ಆಧಾರಿತ ಜಲಾಂತರ್ಗಾಮಿ ನೌಕೆಗಳ ಖರೀದಿಗಾಗಿ ಆಸ್ಟ್ರೇಲಿಯಾವು ಫ್ರಾನ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಈಗ ಮೈತ್ರಿಕೂಟ ಘೋಷಣೆಗೆ ಕೆಲವೇ ಗಂಟೆಗಳ ಮುನ್ನವೇ ಆ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಪಡಿಸಿದೆ. ಫ್ರಾನ್ಸ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಫ್ರಾನ್ಸ್‌ ಆಕ್ಷೇಪವನ್ನು ಐರೋಪ್ಯ ಒಕ್ಕೂಟ ಬೆಂಬಲಿಸಿದೆ.

ನಮ್ಮ ಗಮನಕ್ಕೆ ತರದೆಯೇ ಈ ಮೈತ್ರಿಕೂಟ ರಚಿಸಲಾಗಿದೆ ಎಂದು ಐರೋಪ್ಯ ಒಕ್ಕೂಟವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

***

ಈ ಮೈತ್ರಿಕೂಟವು ಹಿಂದೂ ಮಹಾಸಾಗರ-ಪೆಸಿಫಿಕ್‌ ಪ್ರದೇಶದಲ್ಲಿ ಅಣ್ವಸ್ತ್ರ ಪೈಪೋಟಿಗೆ ಕಾರಣವಾಗಲಿದೆ. ಇಲ್ಲಿನ ಸುಸ್ಥಿರತೆಯನ್ನು ಹಾಳುಗೆಡವಲಿದೆ. ಇದು ಕಳವಳಕಾರಿ ಬೆಳವಣಿಗೆ.

- ಚೀನಾ

ನಾವು ಅಣುಶಕ್ತಿ ಆಧಾರಿತ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುತ್ತಿದ್ದೇವೆಯೇ ಹೊರತು, ಅಣ್ವಸ್ತ್ರ ಇರುವ ನೌಕೆಯನ್ನಲ್ಲ. ಇದರಲ್ಲಿ ಕಳವಳ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ.

- ಆಸ್ಟ್ರೇಲಿಯಾ

ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಮೂರು ದೇಶಗಳ ಈ ಮೈತ್ರಿಕೂಟವು ನೆರವಾಗಲಿದೆ. ಇದು ಒಂದು ಒಳ್ಳೆಯ ಬೆಳವಣಿಗೆ

-ಅಮೆರಿಕ

3 ದೇಶಗಳ ರಕ್ಷಣಾ ಹಿತಾಸಕ್ತಿ ಮತ್ತು ವಾಣಿಜ್ಯ ಹಿತಾಸಕ್ತಿಯ ದೃಷ್ಟಿಯಿಂದ ಈ ಮೈತ್ರಿಕೂಟವು ಮಹತ್ವದಾದುದು. ಇದರಿಂದ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ಬಲ ಹೆಚ್ಚಲಿದೆ.

- ಬ್ರಿಟನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.