ADVERTISEMENT

ಪ್ರಯಾಣದ ನಿರ್ಬಂಧ: ಸಂಬಂಧಕ್ಕೆ ಬೇಲಿಯಾಗದಿರಲಿ...

ರೇಷ್ಮಾ
Published 4 ಜೂನ್ 2021, 19:30 IST
Last Updated 4 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

‘ಕಳೆದ ಆರು ತಿಂಗಳ ಹಿಂದೆ ನನ್ನ ಗಂಡ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮರಳಿ ಬರುವವರಿದ್ದರು. ಅಷ್ಟರಲ್ಲಿ ಲಾಕ್‌ಡೌನ್‌ ಮಾಡಿಬಿಟ್ಟರು. ಭಾರತಕ್ಕೆ ಮರಳುವ ಅವಕಾಶ ಇದ್ದರೂ ಇಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರುವ ಕಾರಣ ಸದ್ಯ ಮರಳುವುದು ಬೇಡ ಎಂದು ಕಂಪನಿ ಕಡೆಯಿಂದ ಹೇಳಿದ್ದಾರಂತೆ. ಅಂದಿನಿಂದ ನಾನು ಹಾಗೂ ಮಗ ಇಬ್ಬರೇ ಈ ಮೂರು ಬೆಡ್‌ರೂಮ್‌ನ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾವು ಹೊಸದಾಗಿ ಅಪಾರ್ಟ್‌ಮೆಂಟ್‌ಗೆ ಬಂದ ಕಾರಣ ಅಕ್ಕ‍ಪಕ್ಕದವರ ಪರಿಚಯ ಅಷ್ಟಾಗಿ ಇಲ್ಲ. ಅವರಲ್ಲಿ ನಾವಿಲ್ಲಿ, ಇದೊಂಥರಾ ಹಿಂಸೆ. ನನ್ನ ಮಗ ಕೂಡ ಪ್ರತಿದಿನ ಅಪ್ಪನ ಕನವರಿಕೆ ಮಾಡುತ್ತಾನೆ. ಈ ಕೊರೊನಾದಿಂದ ಯಾವಾಗ ಬಿಡುಗಡೆ ಸಿಗುತ್ತದೋ, ಅವರನ್ನು ಯಾವಾಗ ನೋಡುತ್ತೇವೋ ಅನ್ನಿಸಲು ಶುರುವಾಗಿದೆ. ಮಗ ಜೊತೆಗೇ ಇದ್ದರೂ ನನಗೆ ತುಂಬಾನೇ ಒಂಟಿತನ ಕಾಡುತ್ತಿದೆ’ ಎಂದು ತನ್ನ ಗೆಳತಿಯ ಬಳಿ ನೋವು ಹಂಚಿಕೊಂಡಿದ್ದಳು ವಿಸ್ಮಯ.

ಈಗೀಗ ಓದು, ಉದ್ಯೋಗ, ಉದ್ಯಮ ಹೀಗೆ ಹಲವು ಕಾರಣಗಳಿಂದ ಮೂರು ತಿಂಗಳು, ಆರು ತಿಂಗಳು ಹಾಗೂ ವರ್ಷಗಳ ಕಾಲ ವಿದೇಶಕ್ಕೆ ತೆರಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಸಂಗಾತಿಯಿಂದ ದೂರವಿರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಇನ್ನೇನು ಕೆಲವೇ ತಿಂಗಳಲ್ಲಿ ಮರಳುತ್ತೇವೆ ಎಂದುಕೊಂಡವರು ಕೋವಿಡ್‌, ಲಾಕ್‌ಡೌನ್‌ನಿಂದ ಹಿಂದಿರುಗಲು ಸಾಧ್ಯವಾಗುತ್ತಿಲ್ಲ. ಇರುವ ಸ್ಥಳದಲ್ಲಿಯೇ ಒಂಟಿಯಾಗಿ ಉಳಿದುಕೊಳ್ಳುವ ಇಂತಹ ಪರಿಸ್ಥಿತಿಯನ್ನು ದಂಪತಿ ಮಾತ್ರವಲ್ಲ ಪ್ರೇಮಿಗಳೂ ಎದುರಿಸುತ್ತಿದ್ದಾರೆ.

‘ನಾನು ಹಾಗೂ ಪ್ರಶಾಂತ್‌ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಅವನು ಓದು ಮುಗಿದ ಮೇಲೆ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಂಡು ಅಲ್ಲಿಯೇ ನೆಲೆಯಾಗಿದ್ದಾನೆ. ನಾವು ನಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಿ ಮದುವೆ ಮಾತುಕತೆ ಕೂಡ ನಡೆದಿತ್ತು. ಆದರೆ ಕೋವಿಡ್‌ ಕಾರಣದಿಂದ ಅವನಿಗೆ ಭಾರತಕ್ಕೆ ಬರಲು ಆಗುತ್ತಿಲ್ಲ. ನಮ್ಮ ಮನೆಯಲ್ಲಿ ‘ಹೀಗೇ ಬಿಟ್ಟರೆ ವಯಸ್ಸು ನಿಲ್ಲುವುದಿಲ್ಲ, ಇನ್ನು ಕಾಯಲು ಆಗುವುದಿಲ್ಲ’ ಎಂದು ಬೇರೆ ಮದುವೆ ಸಿದ್ಧತೆ ಮಾಡುತ್ತಿದ್ದಾರೆ. ನನಗೆ ಅವನನ್ನು ಬಿಟ್ಟು ಬೇರೆಯವರನ್ನು ಮದುವೆ ಆಗಲು ಇಷ್ಟವಿಲ್ಲ. ಹೀಗೆ ಆದರೆ ನಮ್ಮ ಸಂಬಂಧ ಮುರಿದು ಹೋಗಬಹುದು ಎಂಬ ಭಯ ಆಗುತ್ತಿದೆ’ ಎಂದು ನೋವು ತೋಡಿಕೊಳ್ಳುತ್ತಾಳೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶ್ರಾವ್ಯಾ ಮಂಜುನಾಥ್‌.

ADVERTISEMENT

ಈ ರೀತಿ ಬಹಳಷ್ಟು ಮಂದಿ ವಿದೇಶದಲ್ಲಿರುವ ಸಂಗಾತಿಯನ್ನು ನೆನೆಸಿಕೊಂಡು ನೋವು ಅನುಭವಿಸುತ್ತಿದ್ದಾರೆ. ಸಂಗಾತಿ ಇದ್ದೂ ಇಲ್ಲದಂತೆ ಬದುಕುವ ಅನಿವಾರ್ಯ ಪರಿಸ್ಥಿತಿಯನ್ನು ತಂದೊಡ್ಡಿದೆ ಈ ಪ್ರಯಾಣದ ಮೇಲಿನ ನಿರ್ಬಂಧ. ಲಾಕ್‌ಡೌನ್‌ನ ಅನಿಶ್ಚಿತ ಸ್ಥಿತಿ, ಸೋಂಕು ತಗಲುವ ಭೀತಿ, ಕಂಪನಿಗಳ ನೀತಿ–ನಿಯಮ.. ಹೀಗೆ ಹಲವು ಕಾರಣದಿಂದ ತಮ್ಮ ದೇಶಕ್ಕೆ ಹಾಗೂ ತಮ್ಮ ಸಂಗಾತಿ ಇರುವೆಡೆಗೆ ಮರಳಲಾಗದೇ ಪರದಾಡುತ್ತಿದ್ದಾರೆ ಹಲವರು. ಈ ನಿರ್ಬಂಧ ಎನ್ನುವುದು ಬಾಂಧವ್ಯದಲ್ಲೂ ಬಿರುಕು ಮೂಡುವಂತೆ ಮಾಡಿದೆ. ದಂಪತಿ, ಪ್ರೇಮಿಗಳಲ್ಲಿ ಮಾನಸಿಕ ಹಾಗೂ ದೈಹಿಕ ತಳಮಳ ಹೆಚ್ಚುವಂತೆ ಮಾಡಿದೆ. ಇದು ಸಾಂಸಾರಿಕವಾಗಿ ಸಮಸ್ಯೆಗಳನ್ನೂ ತಂದೊಡ್ಡಿದೆ.

ಮೊಬೈಲ್‌ಗೆ ಸೀಮಿತವಾದ ಸಂಬಂಧ

ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಸಂಗಾತಿಗಳ ನಡುವೆ ಫೋನ್ ಕರೆ ಅಥವಾ ಮೆಸೇಜ್‌ಗೇ ಸಂಬಂಧಗಳು ಸೀಮಿತವಾಗಿವೆ. ವರ್ಷ ಕಳೆದರೂ ನೇರ ಭೇಟಿ ಸಾಧ್ಯವಾಗದೆ ವಿಡಿಯೊ ಕರೆಗಳ ಮೂಲಕವೇ ಮಾತನಾಡಿ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

ಸಂಬಂಧದಲ್ಲಿ ಬಿರುಕು

ಪ್ರಯಾಣದ ನಿರ್ಬಂಧ ಎನ್ನುವುದು ಸಂಗಾತಿಗಳ ನಡುವೆ ಕೆಲವೊಮ್ಮೆ ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಸಂಗಾತಿಯ ದೈಹಿಕ ಅನುಪಸ್ಥಿತಿಯು ಸಂಬಂಧದಲ್ಲಿ ವೈಮನಸ್ಸು, ಭಿನ್ನಾಭಿಪ್ರಾಯಗಳು ಹೆಚ್ಚುವಂತೆ ಮಾಡಿದೆ. ‍ಕೆಲವೊಮ್ಮೆ ಇದು ಅನುಮಾನಕ್ಕೂ ಎಡೆ ಮಾಡಿಕೊಟ್ಟು ಸಂಬಂಧವನ್ನು ಹಾಳು ಮಾಡುತ್ತಿದೆ.

ಮಾನಸಿಕ ತಲ್ಲಣ

ಪತಿ ವಿದೇಶದಲ್ಲೇ ಉಳಿದಾಗ ಹೆಂಡತಿಯ ಮನಸ್ಸಿಗೆ ಬೇಸರ, ನೋವು ಉಂಟಾಗುವುದು ಸಹಜ. ಇದರೊಂದಿಗೆ ಖಿನ್ನತೆ, ಆತಂಕ ಹಾಗೂ ಒಂಟಿತನದಂತಹ ಮಾನಸಿಕ ಸಮಸ್ಯೆಗಳೂ ಹೆಚ್ಚಾಗಿ ಕಾಡುತ್ತವೆ ಎನ್ನುತ್ತದೆ ಅಧ್ಯಯನ. ಪರಸ್ಪರ ಭೇಟಿ ಮಾಡಲಾಗದೇ ಇರುವುದು, ನೇರವಾಗಿ ಕೂತು ಮಾತನಾಡಲು ಸಾಧ್ಯವಾಗದಿರುವುದು, ಒಂಟಿಯಾಗಿ ಎಲ್ಲಾ ಸಂದರ್ಭಗಳನ್ನೂ ಎದುರಿಸುವ ಪರಿಸ್ಥಿತಿ, ತಂದೆ–ತಾಯಿ ಸಂಬಂಧಿಕರ ಬಳಿಗೂ ಹೋಗಲಾರದ ಸಂದರ್ಭ ಮಾನಸಿಕ ತಲ್ಲಣ ಹೆಚ್ಚಾಗಲು ಕಾರಣ.

ಹೆಚ್ಚುತ್ತಿರುವ ಬ್ರೇಕ್‌ಅಪ್‌‌

ಈ ಅನಿಶ್ಚಿತ ಪರಿಸ್ಥಿತಿ ಹಲವರ ಸಂಬಂಧಕ್ಕೆ ಮುಳುವಾಗಿದೆ. ಸಾಂಸಾರಿಕ ಕಲಹ, ಪ್ರೇಮಿಗಳ ನಡುವಿನ ಬ್ರೇಕ್‌ಅಪ್‌ನಂತಹ ಸಮಸ್ಯೆಗಳಿಗೂ ಕಾರಣವಾಗಿದೆ. ಹಳೆಯ ಸಂಬಂಧವನ್ನು ಮುರಿದುಕೊಂಡು ಹೊಸ ಸಂಬಂಧವನ್ನು ಹುಡುಕಿಕೊಂಡು ಮಾನಸಿಕ ನೆಮ್ಮದಿ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಹೀಗಾಗಿ ವಿಚ್ಛೇದನ ಪ್ರಕರಣಗಳೂ ಹೆಚ್ಚುತ್ತಿವೆ.

ಸಂಬಂಧ ಗಟ್ಟಿಯಾಗಿರಲಿ

ಸದ್ಯದ ಪರಿಸ್ಥಿತಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುವುದು ಒಳ್ಳೆಯದಲ್ಲ. ನಿಮ್ಮ ಸಂಗಾತಿಯ ಆರೋಗ್ಯದ ದೃಷ್ಟಿಯಿಂದಲೂ ಒಂದಷ್ಟು ದಿನ ಒಂಟಿಯಾಗಿ ಇರುವುದನ್ನು ರೂಢಿಸಿಕೊಳ್ಳುವುದು ಉತ್ತಮ.

*ಸಂಗಾತಿಯಲ್ಲಿ ಭರವಸೆ ಮೂಡಿಸಿ.

*ಅವರಿಗೆ ಧೈರ್ಯ ಹೇಳಿ, ಆದಷ್ಟು ಬೇಗ ಭೇಟಿ ಮಾಡುವ ಆತ್ಮವಿಶ್ವಾಸ ತುಂಬಿ.

*ಸಮಯ ಸಿಕ್ಕಾಗಲೆಲ್ಲಾ ವಿಡಿಯೊ ಅಥವಾ ಫೋನ್ ಕರೆಯ ಮೂಲಕ ಮಾತನಾಡಿ.

*ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಿ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

*ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗದಂತೆ ಅವರೊಂದಿಗೆ ವರ್ತಿಸಿ.

*ಸಾಧ್ಯವಾದಷ್ಟು ಸಕಾರಾತ್ಮಕವಾಗಿ ಯೋಚಿಸಿ.

*ಊಟ– ತಿಂಡಿ ಮಾಡುವಾಗ ವಿಡಿಯೊ ಕರೆ ಮಾಡಿ, ಸಮುಯ ಹೊಂದಾಣಿಕೆ ಮಾಡಿಕೊಂಡು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.

*ದಿನದ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ.

*ಕೋಪಕ್ಕೆ ಕಡಿವಾಣ ಹಾಕಿ ಪರಿಸ್ಥಿತಿಯನ್ನು ಅರಿತುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.