ADVERTISEMENT

ಪ್ರಶ್ನೋತ್ತರ | ಕನಸಿಗೆ ಪ್ರೀತಿ ಅಡ್ಡಿಯಾಗುವುದೇ?

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:45 IST
Last Updated 5 ಫೆಬ್ರುವರಿ 2020, 19:45 IST
a
a   

ನಾನು ಐಪಿಎಸ್ ಮಾಡುವ ಮಹದಾಸೆ ಇರಿಸಿಕೊಂಡಿದ್ದೇನೆ. 6 ವರ್ಷಗಳಿಂದ ಒಬ್ಬಳನ್ನು ಗಾಢವಾಗಿ ಪ್ರೀತಿಸುತ್ತಿದ್ದೇನೆ. ಇತ್ತೀಚಿನ ಅವಳ ವರ್ತನೆ ನನ್ನಲ್ಲಿ ಒಂಟಿತನದ ಭಾವನೆ ಮೂಡಿಸುತ್ತಿದೆ. ನನ್ನನ್ನು ದೂರಮಾಡುವಂತೆ ಅವಳು ಮಾತನಾಡುವುದರಿಂದ ನಾನು ಚಿಂತಿತನಾಗಿದ್ದೇನೆ. ಅವಳನ್ನು ಬಿಡುವುದು ಸಾಧ್ಯವಾಗುತ್ತಿಲ್ಲ. ನನ್ನ ಕನಸಿಗೆ ಅಡ್ಡಿಯಾಗಬಹುದಾದ ಪ್ರೀತಿಯನ್ನು ಮರೆತುಬಿಡಲೇ?

ಉಮೇಶ್ ಆರಾಧ್ಯ, ಊರು ಬೇಡ

ಒಂದು ಕಡೆ ನಿಮಗೆ ಇಷ್ಟವಾದ ವೃತ್ತಿಗಾಗಿ ತಯಾರಿ, ಮತ್ತೊಂದು ಕಡೆ ಇಷ್ಟವಾದ ವ್ಯಕ್ತಿಯನ್ನು ಕಳೆದುಕೊಳ್ಳುವ ಆತಂಕ- ಈ ಎರಡೂ ಕಷ್ಟದ ಆಯ್ಕೆಗಳು ನಿಮ್ಮ ಮುಂದಿರುವಾಗ ಚಿಂತೆ ಸಹಜ. ಯಾವುದಾದರೂ ಒಂದನ್ನು ಆಯ್ದುಕೊಳ್ಳುವ ಮೊದಲು ಎರಡನ್ನೂ ಒಟ್ಟಾಗಿ ಮುಂದುವರೆಸಿಕೊಂಡು ಹೋಗುವ ಸಾಧ್ಯತೆಗಳಿವೆಯೇ ಎಂದು ಯೋಚಿಸಿ.

ADVERTISEMENT

ನಿಮ್ಮ ಜೀವನದ ಯೋಜನೆಗಳು, ಅದಕ್ಕೆ ಬೇಕಾಗುವ ಸಮಯ ಹಣ ಇತ್ಯಾದಿ, ದುರದೃಷ್ಟದಿಂದ ಐಪಿಎಸ್‌ ಹುದ್ದೆಗಳಿಸಲು ವಿಫಲರಾದರೆ ನಿಮ್ಮ ಮುಂದಿನ ಜೀವನದ ದಾರಿ – ಸೇರಿದಂತೆ ಸಾಕಷ್ಟು ವಿಚಾರಗಳ ಬಗೆಗೆ ನಿಮ್ಮೊಳಗೆ ಸ್ಪಷ್ಟತೆಯನ್ನು ಮೂಡಿಸಿಕೊಳ್ಳಿ. ನಂತರ ಎಲ್ಲವನ್ನೂ ಪ್ರಿಯತಮೆಯೊಡನೆ ಹಂಚಿಕೊಳ್ಳಿ. ನಿಮ್ಮ ಜೀವನದ ದಾರಿಯೇ ಅಸ್ಪಷ್ಟ ಎನಿಸಿದಾಗ ಅವರಿಗೆ ತಮ್ಮ ಭವಿಷ್ಯದ ಬಗೆಗೆ ಆತಂಕವಾಗುವುದು ಸಹಜ. ಅವರ ಆತಂಕದಲ್ಲಿ ನಿಮ್ಮನ್ನು ದೂರಮಾಡುವ ಉದ್ದೇಶಕ್ಕಿಂತ ಹೆಚ್ಚಾಗಿ ಭವಿಷ್ಯದ ಬಗೆಗೆ ಸ್ಪಷ್ಟತೆಯನ್ನು ಪಡೆದುಕೊಳ್ಳುವ ಪ್ರಯತ್ನವಿರುತ್ತದೆ.

ಸಮಸ್ಯೆ ಇಬ್ಬರಿಗೂ ಸೇರಿದ್ದು ಎನ್ನುವ ದೃಷ್ಟಿಕೋನದಿಂದ ಮಾತನಾಡಿ. ಎಲ್ಲಾ ವಿಷಯಗಳನ್ನು ಚರ್ಚೆಮಾಡಿದ ಮೇಲೆ ಇಬ್ಬರೂ ಸೇರಿ ಒಂದು ನಿರ್ಧಾರಕ್ಕೆ ಬರುವುದು ಸುಲಭವಾಗಬಹುದು.

ನನ್ನ ತಮ್ಮನಿಗೆ ಮೂರು ವರ್ಷದ ಹಿಂದೆ ಅಪಘಾತವಾಯಿತು. ನಂತರ ಯಾವ ಕೆಲಸದಲ್ಲಿಯೂ ಆಸಕ್ತಿಯಿಲ್ಲ. ಎಂಬಿಎ ಓದಿದ್ದರೂ ಕೆಲಸಕ್ಕೆ ಹೋಗುತ್ತಿಲ್ಲ. ಹೋಗುವುದೂ ಇಲ್ಲ ಅಂತಿದ್ದಾನೆ. ಸ್ನಾನ, ಊಟ ಎಲ್ಲಾ ಕೆಲಸಕ್ಕೂ ಗಂಟೆಗಟ್ಟಲೆ ತೆಗೆದುಕೊಳ್ಳುತ್ತಾನೆ. ಪರಿಹಾರ ತಿಳಿಸಿ.

ಮಂಗಲ, ಮಂಡ್ಯ

ನಿಮ್ಮ ತಮ್ಮನಿಗೆ ಅಪಘಾತದಿಂದ ದೈಹಿಕ ಹಾನಿ ಏನಾಗಿದೆಯೋ ತಿಳಿಸಿಲ್ಲ. ಆದರೆ ಅವರು ಸ್ವತಂತ್ರವಾಗಿ ಬದುಕುವ ಆಸಕ್ತಿ ನಂಬಿಕೆಗಳನ್ನು ಕಳೆದುಕೊಂಡಿರುವಂತೆ ಕಾಣಿಸುತ್ತದೆ. ಕುಟುಂಬದವರೆಲ್ಲಾ ಅವನಿಗೆ ಅಗತ್ಯವಾದ ಬೆಂಬಲ ಕೊಡಬಹುದು. ಆದರೆ ಬದಲಾವಣೆಗೆ ಅವನು ಸಿದ್ಧನಾಗಬೇಕಾಗುತ್ತದೆ. ಅವನು ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು, ಆದರೆ ಹೀಗೆಯೇ ಕಾಲಕಳೆಯುವುದಕ್ಕೆ ನಮ್ಮ ಬೆಂಬಲವಿಲ್ಲ- ಎನ್ನುವ ಸ್ಪಷ್ಟ ಸಂದೇಶವನ್ನು ಮನೆಯವರೆಲ್ಲರೂ ಕೊಡಬೇಕು. ಇದಕ್ಕಾಗಿ ಈಗ ಕೊಡುತ್ತಿರುವ ಕೆಲವು ವಿಶೇಷ ಸವಲತ್ತುಗಳನ್ನು ನಿಲ್ಲಿಸಬೇಕಾಗುತ್ತದೆ. ಇದರಿಂದ ತಾತ್ಕಾಲಿಕವಾಗಿ ಅವನ ಸಿಟ್ಟು, ಹಟಮಾರಿತನ ಹೆಚ್ಚಾಗಬಹುದು. ಆದರೆ ಕುಟುಂಬದವರು ಪ್ರೀತಿ ಬೆಂಬಲವನ್ನು ಮುಂದುವರೆಸಬೇಕು. ಅವನ ದೈಹಿಕ ದುರ್ಬಲತೆಗೆ ಸಹಾಯಮಾಡಿ. ಆದರೆ ಅವನ ಸೋಮಾರಿತನಕ್ಕೆ ಬೆಂಬಲ ಕೊಡಬೇಡಿ.

ಈ ಪ್ರಯತ್ನದಲ್ಲಿ ಪ್ರೀತಿ ಮತ್ತು ನಿಷ್ಟುರತೆಗಳನ್ನು ಸಮಾನವಾಗಿ ಬೆರೆಸಬೇಕು. ತಂದೆತಾಯಿಗಳ ಜವಾಬ್ದಾರಿ ಇದರಲ್ಲಿ ಹೆಚ್ಚಾಗಿರುತ್ತದೆ. ಅಕ್ಕನಾಗಿ ನೀವು ಸಹಾಯ ಮಾಡಬಹುದಷ್ಟೇ. ಉತ್ತರವನ್ನು ಮನೆಯವರಿಗೆಲ್ಲಾ ತೋರಿಸಿ ಅವರ ಪ್ರತಿಕ್ರಿಯೆ ಕೇಳಿ. ಅಗತ್ಯವಿದ್ದರೆ ಕುಟುಂಬವರೆಲ್ಲರೂ ಒಟ್ಟಾಗಿ ಆಪ್ತಸಮಾಲೋಚನೆ ಪಡೆದುಕೊಳ್ಳಿ.

ನಾನು 55 ವರ್ಷದ ಮಹಿಳೆ, ಸರ್ಕಾರಿ ಉದ್ಯೋಗಿ. ಇಬ್ಬರು ಮಕ್ಕಳಿದ್ದಾರೆ. ಸರ್ಕಾರಿ ಉದ್ಯೋಗಿಯಾಗಿರುವ 23 ವರ್ಷದ ಮಗಳಿಗೆ ಬಂದಿರುವ ವರನ ಹಿನ್ನೆಲೆಯನ್ನು ವಿಚಾರಿಸಿದೆವು. ಅವನು ಏಕಾಂಗಿಯಾಗಿರುತ್ತಿದ್ದ ಮತ್ತು ಇತರರ ಜೊತೆ ಜಗಳಮಾಡುತ್ತಿದ್ದ ಎಂದು ‌ಸಹಪಾಠಿಗಳು ಹೇಳಿದರು. ಸಹೋದ್ಯೋಗಿಗಳು ಅವನು ಮುಂಗೋಪಿಯೆಂದು ಹೇಳಿದರು. ಹುಡುಗನ ಜೊತೆ ಮಾತನಾಡಿದಾಗ ಅವನು ಸುಳ್ಳು ಹೇಳುತ್ತಾನೆ ಮತ್ತು ಯಾರನ್ನೂ ನಂಬುವುದಿಲ್ಲ ಎನ್ನಿಸಿತು. ಮದ್ಯವ್ಯಸನಿಯಾಗಿದ್ದ ಅವನ ತಂದೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಮೃದು ಸ್ವಭಾವದ ನನ್ನ ಮಗಳಿಗೆ ಅವನು ಸೂಕ್ತ ಸಂಗಾತಿಯಾಗಬಲ್ಲನೇ? ಅವನಲ್ಲಿ ಮಾನಸಿಕ ಕಾಯಿಲೆಯ ಸೂಚನೆಗಳಿವೆಯೇ?

ಹೆಸರು, ಊರು ಇಲ್ಲ.

ಯಾವುದೇ ವ್ಯಕ್ತಿಯ ಜೊತೆ ನೇರವಾಗಿ ಮಾತನಾಡದೆ ಅಭಿಪ್ರಾಯ ಕೊಡುವುದು ವೃತ್ತಿಧರ್ಮಕ್ಕೆ ವಿರೋಧವಾಗುತ್ತದೆ. ನೀವು ಕೊಟ್ಟಿರುವ ಮಾಹಿತಿಗಳ ಆಧಾರದ ಮೇಲೆ ನನ್ನ ಅನಿಸಿಕೆಗಳನ್ನು ಹೇಳಬಹುದು. ಇದು ಖಚಿತವಾದ ಸತ್ಯವಲ್ಲದೆ ಇರಬಹುದು. ಹುಡುಗನಿಗೆ ಮಾನಸಿಕ ಕಾಯಿಲೆಗಳೇನಿಲ್ಲ. ಬಾಲ್ಯದಲ್ಲಿ ಸಿಗದಿರುವ ಪ್ರೀತಿ, ಭದ್ರತೆಗಳಿಂದಾಗಿ ತೀವ್ರವಾದ ಅಭದ್ರತೆ ಅವರನ್ನು ಕಾಡುತ್ತಿದೆ. ಇಂತಹ ವ್ಯಕ್ತಿಗಳು ತಮ್ಮನ್ನು ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡಲು ಸುಳ್ಳನ್ನು ಹೇಳುತ್ತಾರೆ. ಪ್ರೀತಿಯಿಂದ ಹತ್ತಿರ ಬರುವವರು ತಮಗೆ ಹಾನಿ ಮಾಡಬಹುದೇ ಎಂದು ಅನುಮಾನದಿಂದ ದೂರವಿರುತ್ತಾರೆ. ಹತ್ತಿರ ಬರಲು ಪ್ರಯತ್ನಿಸಿದವರೊಡನೆ ಜಗಳವಾಡಿ ದೂರತಳ್ಳುತ್ತಾರೆ. ಆತಂಕ, ಅನುಮಾನ ಇಂಥವರನ್ನು ಯಾವಾಗಲೂ ಕಾಡುತ್ತದೆ.

ಮದುವೆಗೆ ನಿಮ್ಮ ಮಗಳ ಅಭಿಪ್ರಾಯ ಮುಖ್ಯ. ಅವರಿಬ್ಬರೂ ವೈಯಕ್ತಿಕವಾಗಿ ಮಾತನಾಡಿ ತಿರ್ಮಾನ ತೆಗೆದುಕೊಳ್ಳುವುದು ಉತ್ತಮ. ಮುಕ್ತವಾಗಿ ಎಲ್ಲಾ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಮಗಳ ಜೊತೆ ಸಹಕರಿಸಿ. ಅಗತ್ಯವೆನ್ನಿಸಿದರೆ ಇಬ್ಬರೂ ವಿವಾಹಪೂರ್ವ ಆಪ್ತಸಮಾಲೋಚನೆ ಪಡೆದುಕೊಳ್ಳಬಹುದು. ಆದರೆ ಯಾವುದೇ ಅನುಮಾನ ಹಿಂಜರಿಕೆಗಳಿಟ್ಟುಕೊಂಡು ಮದುವೆಗೆ ಒಪ್ಪಿಕೊಳ್ಳುವುದು ಹಿತಕರವಾಗದೇ ಇರಬಹುದು.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.