ಆಗಿನ ಕ್ರಿಕೆಟ್ ಪ್ರೀತಿ ಈಗ ಎಲ್ಲಿದೆ?

ಕಟಕ್: `ನಾನು ಯಾವತ್ತೂ ಹಣದ ವ್ಯಾಮೋಹದಿಂದ ಕ್ರಿಕೆಟ್ ಆಡಲಿಲ್ಲ. ಕ್ರಿಕೆಟ್ ಮೇಲಿನ ಪ್ರೀತಿಯೊಂದೇ ನನ್ನ ಉಸಿರಾಗಿತ್ತು. ಅದೇ ಗುಂಗಿನಲ್ಲಿ ನಾನೀಗ ಬದುಕುತ್ತ್ದ್ದಿದೇನೆ. ಆದರೆ ಕ್ರಿಕೆಟ್ ಮೇಲೆ ಆಗಿದ್ದ ಪ್ರೀತಿ, ಗೌರವ ಈಗ ಎಲ್ಲಿದೆ?~

`ಪ್ರಜಾವಾಣಿ~ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ರೀತಿ ಹೇಳಿದ್ದು ಜೀವಮಾನ ಶ್ರೇಷ್ಠ ಸಾಧನೆಗಾಗಿ ಬಿಸಿಸಿಐ ನೀಡುವ `ಸಿ.ಕೆ.ನಾಯ್ಡು ಪ್ರಶಸ್ತಿ~ಗೆ ಆಯ್ಕೆ ಆಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್.

`ಕ್ರಿಕೆಟ್ ಮೇಲೆ ಪ್ರೀತಿ ಹಾಗೂ ಗೌರವ ಇಟ್ಟುಕೊಂಡವರ ಸಂಖ್ಯೆ ಈಗ ವಿರಳ. ಸಚಿನ್, ದ್ರಾವಿಡ್, ಲಕ್ಷ್ಮಣ್ ವಿದಾಯ ಹೇಳಿದ ಮೇಲೆ ಇದು ಕೂಡ ಪೂರ್ತಿಯಾಗಿ ಮರೆಯಾಗಬಹುದು~ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದುಕೊಟ್ಟ ಭಾರತ ತಂಡದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನು 70 ವರ್ಷ ವಯಸ್ಸಿನ ವಾಡೇಕರ್ ಹೊಂದಿದ್ದಾರೆ. 1971ರಲ್ಲಿ ಈ ಸಾಧನೆ ಮೂಡಿಬಂದಿತ್ತು. ಅವರು ಭಾರತ ಏಕದಿನ ತಂಡದ ಮೊದಲ ನಾಯಕ ಕೂಡ.

37 ಟೆಸ್ಟ್ ಆಡಿರುವ ಎಡಗೈ ಬ್ಯಾಟ್ಸ್‌ಮನ್ ವಾಡೇಕರ್ 2113 ರನ್ ಗಳಿಸಿದ್ದಾರೆ.  ಭಾರತ ತಂಡದ ಕೋಚ್, ಮ್ಯಾನೇಜರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಕೂಡ ಆಗಿ ಕಾರ್ಯನಿರ್ವಹಿಸಿದ್ದಾರೆ.

ಚೆನ್ನೈನಲ್ಲಿ ಡಿಸೆಂಬರ್ 10ರಂದು ನಡೆಯಲಿರುವ ಸಮಾರಂಭದಲ್ಲಿ ಮುಂಬೈನ ವಾಡೇಕರ್‌ಗೆ ಬಿಸಿಸಿಐ 15 ಲಕ್ಷ ಹಾಗೂ ಟ್ರೋಫಿ  ನೀಡಿ ಸನ್ಮಾನಿಸಲಿದೆ. ಭಾನುವಾರ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾಡೇಕರ್ ಹಲವು ವಿಷಯಗಳನ್ನು ಮೆಲುಕು ಹಾಕಿದ್ದಾರೆ.

ಸಿ.ಕೆ.ನಾಯ್ಡು ಪ್ರಶಸ್ತಿಗೆ ಆಯ್ಕೆಯಾದ ಸುದ್ದಿ ತಿಳಿದಾಗ ನಿಮ್ಮ ಮೊದಲ ಪ್ರತಿಕ್ರಿಯೆ ಏನಿತ್ತು?
ಕ್ರಿಕೆಟ್‌ಗೆ ನಾನು ನೀಡಿದ ಕೊಡುಗೆಯನ್ನು ಗುರುತಿಸಲು ಬಿಸಿಸಿಐ ತಡಮಾಡಲಿಲ್ಲ ಎಂದುಕೊಂಡೆ! ಅದೇನೇ ಇರಲಿ, ದೇಶವನ್ನು ಪ್ರತಿನಿಧಿಸಿದ್ದೇ ನನ್ನ ಮಟ್ಟಿಗೆ ದೊಡ್ಡ ಪ್ರಶಸ್ತಿ.

ಕ್ರಿಕೆಟ್ ಯಾವ ರೀತಿ ಬದಲಾಗುತ್ತಾ ಸಾಗುತ್ತಿದೆ?
ಕಾಲ ಬದಲಾದಂತೆ ಕ್ರಿಕೆಟ್ ಕೂಡ ಬದಲಾಗಲೇಬೇಕು. ಹೊಸತನಕ್ಕೆ ತೆರೆದುಕೊಳ್ಳಬೇಕು. ಆದರೆ ಆಟದ ಮೇಲಿನ ಪ್ರೀತಿ, ಗೌರವದಲ್ಲಿ ಯಾವುದೇ ಬದಲಾವಣೆ ಆಗಬಾರದು. ಈಗಿನ ಆಟದ ರೀತಿ-ನೀತಿ ನೋಡಿದರೆ ಬದಲಾವಣೆ ಅತಿಯಾಯಿತು ಎನಿಸುತ್ತದೆ.

ಕ್ರಿಕೆಟ್ ಈಗ ಪ್ರೀತಿಗಿಂತ ಒಂದು ವ್ಯಾಪಾರದ ಸರಕಾಗಿದೆಯೇ?
ಕೆಲವೊಮ್ಮೆ ಹಾಗೆ ಅನಿಸುತ್ತದೆ. ಆದರೆ ಸಚಿನ್, ದ್ರಾವಿಡ್, ಲಕ್ಷ್ಮಣ್ ಅವರನ್ನು ನೋಡಿದಾಗ ಕ್ರಿಕೆಟ್ ಪೂರ್ಣ ವ್ಯಾಪಾರದ ಸರಕಾಗಿಲ್ಲ ಎಂದು ಸಮಾಧಾನಪಟ್ಟುಕೊಳ್ಳುತ್ತೇನೆ.

1971ರಲ್ಲಿ ಇಂಗ್ಲೆಂಡ್, ವಿಂಡೀಸ್ ನೆಲದಲ್ಲಿ ಸರಣಿ ಗೆಲುವಿನ ಯಶಸ್ಸಿನ ಗುಟ್ಟೇನು?
ಆಗಿನ ನಮ್ಮ ತಂಡದ ಆಟಗಾರರ ಮನಸ್ಥಿತಿಯೇ ಸರಣಿ ಗೆಲುವಿನ ಯಶಸ್ಸಿನ ಗುಟ್ಟು ಎನ್ನಬಹುದು. ಆಗ ಈಗಿನಷ್ಟು ನಿರ್ಬಂಧಗಳು ಇರಲಿಲ್ಲ. ಓವರ್‌ಗೊಂದು ಬೌನ್ಸರ್ ಮಾತ್ರ ಹಾಕಬಹುದು ಎಂಬ ನಿಯಮವೂ ಇರಲಿಲ್ಲ. ಹೆಲ್ಮೆಟ್ ಕೂಡ ಹಾಕಿಕೊಳ್ಳದೇ ಆಡುತ್ತ್ದ್ದಿದೆವು.

ಆದರೆ ಜಿ.ಆರ್.ವಿಶ್ವನಾಥ್, ಸುನಿಲ್ ಗಾವಸ್ಕರ್, ದಿಲೀಪ್ ಸರ್‌ದೇಸಾಯಿ ಅವರಂಥ ಯಶಸ್ವಿ ಆಟಗಾರರು ನಮ್ಮಲ್ಲಿದ್ದರು. ಅಲ್ಲಿನ ಪಿಚ್‌ಗಳು ವೇಗಿಗಳಿಗೆ ಸಹಕಾರಿಯಾಗಿರುತ್ತಿದ್ದವು.

ನಮ್ಮಲ್ಲಿ ವೇಗಿಗಳೇ ಇರಲಿಲ್ಲ! ಎಲ್ಲಾ ಸ್ಪಿನ್ನರ್‌ಗಳು. ಇ.ಎ.ಎಸ್.ಪ್ರಸನ್ನ, ಬಿ.ಎಸ್.ಚಂದ್ರಶೇಖರ್, ಬಿಷನ್ ಸಿಂಗ್ ಬೇಡಿ ಹಾಗೂ ಎಸ್.ವೆಂಕಟರಾಘವನ್ ಪಂದ್ಯ ಗೆದ್ದು ಕೊಡುತ್ತಿದ್ದರು.

ಕ್ರಿಕೆಟ್‌ನಲ್ಲಿ ಈಗ ಹರಿದಾಡುತ್ತಿರುವ ಹಣಕಾಸಿನ ಬಗ್ಗೆ ನಿಮ್ಮ ಅಭಿಪ್ರಾಯ?
ನಮ್ಮ ಕಾಲದಲ್ಲಿ ದುಡ್ಡಿರಲಿಲ್ಲ. ಈಗಲಾದರೂ ಹಣ ಸಿಗುತ್ತಿದೆ. ಅದಕ್ಕೆ ಸಂತೋಷಪಡಬೇಕು. ಆದರೆ ಇದು ಯುವ ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆಯೇನೊ ಅನಿಸುತ್ತಿದೆ. ಚೆನ್ನಾಗಿ ಆಡಿದರೆ ಮಾತ್ರ ಹಣ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

 ನೀವು ಇಷ್ಟಪಡುವ ಆಟಗಾರ ಯಾರು? ಏಕೆ?
ಸೆಹ್ವಾಗ್. ಆತ ಇನಿಂಗ್ಸ್ ಆರಂಭಿಸಲು ಬರುತ್ತಿದ್ದಂತೆ ಎದುರಾಳಿ ತಂಡದ ನಾಯಕರು ಗೊಂದಲಕ್ಕೆ ಒಳಗಾಗುತ್ತಾರೆ. ಹಾಗೇ, ಸಚಿನ್ ಆಟವನ್ನು ನೋಡಲು ನಾನು ಇಷ್ಟಪಡುತ್ತೇನೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುತ್ತಿರುವ ಭಾರತ ಈ ಬಾರಿ ಯಶಸ್ವಿಯಾಗಬಹುದೇ?
ಆಸ್ಟ್ರೇಲಿಯಾ ತಂಡ ಈಗ ಮೊದಲಿನಂತಿಲ್ಲ. ಕೊಂಚ ಪ್ರಯತ್ನ ಹಾಕಿದರೆ ಖಂಡಿತ ಗೆಲ್ಲಬಹುದು. ದೋನಿ ನಾನು ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು.

ಪ್ರಮುಖ ಸುದ್ದಿಗಳು