ಮೇಳಕರ್ತ ರಾಗಗಳ ‘ರಸಗುಚ್ಛ’ ಪುರಂದರ ಮೇಳ ಮಾಲಾ

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗ ಮಾಡಿ, ಅಪರೂಪದ ಕೃತಿಗಳಿಗೆ ರಾಗ ಸಂಯೋಜನೆ, ಹಲವಾರು ಕೃತಿಗಳ ರಚನೆ, ವಾದಿರಾಜರ ಮಹಾಪ್ರಬಂಧದಲ್ಲಿದ್ದ ನದಿಗಳ ಸನ್ನಿವೇಶವನ್ನು ಕೃತಿಗಳನ್ನಾಗಿ ಮಾಡಿ ರಾಗ ಸಂಯೋಜಿಸಿ ಹಾಡಿರುವುದು, ಗೋಷ್ಠಿ ಗಾಯನ ಮೇಲಾಗಿ ಸಂಗೀತ ಕಛೇರಿಗಳಲ್ಲಿ ವಿದ್ವತ್ಪೂರ್ಣ ಪ್ರಸ್ತುತಪಡಿಸುವಿಕೆ... ಇವೇ ಮುಂತಾದವು ಮೇರು ಗಾಯಕ ವಿದ್ವಾನ್‌ ಆರ್‌.ಕೆ. ಪದ್ಮನಾಭ ಅವರನ್ನು ಸಂಗೀತ ಕ್ಷೇತ್ರದಲ್ಲಿ ಶಿಖರಪ್ರಾಯರನ್ನಾಗಿ ಮಾಡಿದೆ.

ಇದೀಗ ಪದ್ಮನಾಭ ಅವರು ಎರಡು ವಿಶಿಷ್ಟ, ಅಪರೂಪವಾದ ಕೃತಿ ಮತ್ತು ಧ್ವನಿ ಮುದ್ರಣವನ್ನು ಸಂಗೀತ ಕ್ಷೇತ್ರಕ್ಕೆ ಲೋಕಾರ್ಪಣೆ ಮಾಡಿದ್ದಾರೆ. ಒಂದು ಸಂಗೀತ ಪಿತಾಮಹ ಪುರಂದರ ದಾಸರ ಕುರಿತಾದ ಪುಸ್ತಕ. ‘ಪುರಂದರ ದಾಸರು ಸಂಗೀತ ಪಿತಾಮಹರೇ..?’ ಎಂಬ ಸಂಶೋಧನಾತ್ಮಕ, ವಿಶ್ಲೇಷನಾತ್ಮಕ, ಹತ್ತು ಹಲವು ಅಪರೂಪದ ವಿಚಾರಧಾರೆಗಳನ್ನು ಒಳಗೊಂಡ ವಿಶಿಷ್ಟ ಹೊತ್ತಗೆ.

ಇನ್ನೊಂದು ದಾಸಶ್ರೇಷ್ಠ ಪುರಂದರ ದಾಸರ ಕೃತಿಗಳಲ್ಲಿ 72 ಅಪರೂಪದ ರಚನೆಗಳನ್ನು ಆಯ್ದುಕೊಂಡು ಅವೆಲ್ಲವುಗಳಿಗೆ 72 ಮೇಳಕರ್ತ ರಾಗಗಳನ್ನು ಅಳವಡಿಸಿ, ಅಷ್ಟೂ ಕೃತಿಗಳನ್ನು ಹಾಡಿದಂತಹ ಅಪರೂಪದ ಸೀಡಿ. ‘ಪುರಂದರ ಮೇಳ ಮಾಲಾ’ ಶೀರ್ಷಿಕೆಯಲ್ಲಿರುವ ಈ ಸೀಡಿ ಬಹಳ ಅಪರೂಪದ್ದು ಅಲ್ಲದೆ ಇದುವರೆಗೆ ಸಂಗೀತ ಕ್ಷೇತ್ರದಲ್ಲಿ ಯಾರೂ ಮಾಡದೇ ಇರುವಂಥದ್ದು ಎಂಬುದು ಸಂಗೀತ ಪ್ರಿಯರೆಲ್ಲರೂ ಅತ್ಯಂತ ಹೆಮ್ಮೆಪಡಬೇಕಾದ ಸಂಗತಿ.

ಕರ್ನಾಟಕ ಸಂಗೀತದಲ್ಲಿ ಮೇಳಕರ್ತ ರಾಗಗಳು ತಾಯಿ ಬೇರು ಇದ್ದಂತೆ. ಈ 72 ಮೇಳಕರ್ತ ರಾಗಗಳಿಂದ ಸಾವಿರಾರು ರಾಗಗಳ ಸೃಷ್ಟಿ ಆಗಿವೆ. ರಾಗದ ಆರೋಹಣ- ಅವರೋಹಣಗಳಲ್ಲಿ ‘ಸಂಪೂರ್ಣ-ಸಂಪೂರ್ಣ’ ಸ್ವರಗಳನ್ನು ಹೊಂದಿರುವ ರಾಗಗಳು ಒಟ್ಟು 72. ಈ ಎಲ್ಲ ರಾಗಗಳನ್ನು ಪುರಂದರ ದಾಸರ ಒಂದೊಂದು ಕೃತಿಗೂ ಅಳವಡಿಸಿ ಹಾಡಿದ ಈ ಸೀಡಿ ಕೇಳಲು ಆಪ್ಯಾಯಮಾನವಾಗಿದೆ.

ಪ್ರತಿಯೊಂದು ರಾಗವನ್ನು ಹಾಡುವಾಗಲೂ ಅದರ ಆರೋಹಣ ಅವರೋಹಣಗಳನ್ನು ಹಾಡಿಯೇ ಕೃತಿಯನ್ನು ಆರಂಭಿಸುವ ಗಾಯಕರ ಪ್ರವೃತ್ತಿ ಈ ಧ್ವನಿಸುರುಳಿಯನ್ನು ಮತ್ತಷ್ಟು ತೂಕಬದ್ಧವಾಗಿಸಿದೆ ಎಂದರೆ ತಪ್ಪಿಲ್ಲ.

ಮೇಳಕರ್ತ ರಾಗದ ಮೊದಲ ರಾಗ ‘ಕನಕಾಂಗಿ’ಯಿಂದ ಆರಂಭಿಸಿ ಕೊನೆಯ ‘ರಸಿಕಪ್ರಿಯ’ ರಾಗದವರೆಗೂ ನಿರಂತರವಾಗಿ ಹಾಡಿದ ಎಲ್ಲ ರಾಗಗಳ ಕೃತಿಗಳನ್ನು ಕೇಳಿದರೆ ಮನಸ್ಸಿಗೆ ಮಹದಾನಂದವಾಗುತ್ತದೆ. ಪ್ರತಿ ರಾಗದ ಸಾಹಿತ್ಯ ಶುದ್ಧಿ, ಗಾಯನ ಶೈಲಿ ಕೇಳುಗರನ್ನು ತಕ್ಷಣ ಸೆಳೆಯುವಂತಿದೆ. ವಿದ್ವಾನ್‌ ಪದ್ಮನಾಭ ಅವರ ಕಛೇರಿಯನ್ನು ಕೇಳದೇ ಇದ್ದವರೂ, ಸಂಗೀತದ ಶಾಸ್ತ್ರೀಯ ಭಾಗದ ಪರಿಚಯ ಇಲ್ಲದವರೂ, ಸಂಗೀತದ ಸ್ವಾದವನ್ನು ಆಸ್ವಾದಿಸಬೇಕೆನಿಸುವ ಸಹೃದಯರಿಗೆ ಈ ಸೀಡಿ ಹೇಳಿ ಮಾಡಿಸಿದಂತಿದೆ.

ಸಾಮಾನ್ಯವಾಗಿ ಎಲ್ಲ ಗಾಯಕರು ಒಂದಲ್ಲ ಒಂದು ಕಛೇರಿಗಳಲ್ಲಿ ಜನಪ್ರಿಯ ಮೇಳಕರ್ತ ರಾಗಗಳಾದ ಮಾಯಾಮಾಳವಗೌಳ, ಧೀರ ಶಂಕರಾಭರಣ, ಖರಹರಪ್ರಿಯ, ಹರಿಕಾಂಬೋದಿ, ಮೇಚಕಲ್ಯಾಣಿ, ಕಾಮವರ್ಧಿನಿ, ಷಣ್ಮುಖಪ್ರಿಯ, ನಟಭೈರವಿ, ಕೀರವಾಣಿ, ತೋಡಿ, ಲತಾಂಗಿ, ವಾಚಸ್ಪತಿ, ಚಾರುಕೇಶಿ, ಹೇಮಾವತಿ, ಧರ್ಮಾವತಿ.. ಮುಂತಾದವುಗಳನ್ನು ಆಯ್ದುಕೊಳ್ಳುತ್ತಾರೆ. ಸೀಡಿಯಲ್ಲಿರುವ ಈ ಎಲ್ಲ ರಾಗಗಳು ಮತ್ತೆ ಮತ್ತೆ ಕೇಳುವಂತಿವೆ.

ಅರ್ಥ ಮಾಡಿಕೊಳ್ಳಲು ಕೊಂಚ ಕಷ್ಟವೇ ಎಂದು ಪರಿಗಣಿತವಾದ ಸಿಂಹೇಂದ್ರ ಮಧ್ಯಮ ರಾಗದ ‘ಆಡಹೋಗಲು ಬೇಡವೋ’ (57ನೇ ಮೇಳಕರ್ತ), ವಿಶ್ವಂಬರಿ ರಾಗದ ‘ಕೊಟ್ಟ ಸಾಲವ ಕೊಡದೆ’ (54ನೇ ಮೇಳಕರ್ತ), ಶ್ಯಾಮಲಾಂಗಿ ರಾಗದ ‘ಕೊಬ್ಬಿರಲು ಬೇಡವೋ (55ನೇ ಮೇಳಕರ್ತ) ಕಾಂತಾಮಣಿ ರಾಗದ ‘ಗುಡಿಗುಡಿಯನು ಸೇದಿ) (61ನೇ ಮೇಳಕರ್ತ) ಮುಂತಾದ ರಾಗಗಳು ಗಾಯಕರ ಶಾರೀರದಲ್ಲಿ ಲೀಲಾಜಾಲವಾಗಿ ಹೊರಹೊಮ್ಮಿವೆ, ಸಾಹಿತ್ಯದ ಒಳಹೊರಗನ್ನು ಸುಲಭವಾಗಿ ಗ್ರಹಿಸುವಂತಿವೆ. ರಾಗ -ತಾಳ- ಭಾವ- ಸಾಹಿತ್ಯ ಎಲ್ಲವೂ ಅಚ್ಚುಕಟ್ಟಾಗಿ ಮಿಳಿತಗೊಂಡು ಪ್ರತಿಯೊಂದು ಕೃತಿಯೂ ಅದ್ಭುತ ರಸಪಾಕವೇ ಆಗಿದೆ. ಮೇಳಕರ್ತದಲ್ಲಿರುವ ಎಲ್ಲ 72 ರಾಗಗಳನ್ನು ಒಂದೇ ‘ರಸಗುಚ್ಛ’ದಲ್ಲಿ ಸೇರಿಸಿರುವ ಕಾರಣ ಇವೆಲ್ಲವನ್ನೂ ಒಟ್ಟಿಗೇ ಕೇಳುವಂತಹ ಸುಯೋಗ ಕೇಳುಗರಿಗೆ ದಕ್ಕಿದೆ.

ಸೀಡಿಯಲ್ಲಿರುವ ಪುರಂದರ ದಾಸರು ರಚಿಸಿದ ಎಲ್ಲ ಮೇಳಕರ್ತ ರಾಗಗಳನ್ನು ಕೇಳಿದಾಗ ‘ದಾಸರೆಂದರೆ ಪುರಂದರದಾಸರಯ್ಯಾ..’ ಎಂಬ ಮಾತು ಹೇಗೆ ನೆನಪಿಗೆ ಬರುತ್ತದೋ ಹಾಗೇ ‘ಗಾಯನವೆಂದರೆ  ಪದ್ಮನಾಭರ ಗಾಯನವಯ್ಯಾ..’ ಎಂಬ ಉದ್ಗಾರ ಮನಸ್ಸಿಗೆ ಥಟ್ಟನೆ ಮೂಡುತ್ತದೆ. ಆರ್‌.ಕೆ. ಪದ್ಮನಾಭ ಅವರ ಗಾಯನಕ್ಕೆ ಅಷ್ಟೇ ಪ್ರಬುದ್ಧವಾದ ಪಕ್ಕವಾದ್ಯ ಸಹಕಾರವಿದ್ದು, ವಿದ್ವಾನ್‌ ಸಿ. ಚೆಲುವರಾಜು ಮೃದಂಗದಲ್ಲಿ ಮತ್ತು ವಿದ್ವಾನ್‌ ಸಿ.ಎನ್‌ ಚಂದ್ರಶೇಖರ್‌ ಪಿಟೀಲಿನಲ್ಲಿ ಸಹಕರಿಸಿದ್ದಾರೆ. 
*
ಪುರಂದರ ಮೇಳಮಾಲಾ
ರಾಗ ಸಂಯೋಜನೆ, ಗಾಯನ:
ವಿದ್ವಾನ್ ಆರ್.ಕೆ. ಪದ್ಮನಾಭ
ಶ್ರೀಮದ್ ವಾದಿರಾಜ ಆರಾಧನಾ ಟ್ರಸ್ಟ್‌
ಜೆ.ಪಿ. ನಗರ ಎರಡನೆ ಹಂತ
ಬೆಂಗಳೂರು 78
ಸೀಡಿ ಬೆಲೆ 400 ರೂಪಾಯಿ.
ಸಂಪರ್ಕ ಸಂಖ್ಯೆ: 94485 74896

ಪ್ರಮುಖ ಸುದ್ದಿಗಳು