ಮೋಡಿ ಮಾಡುವ ಮೋಡಿ ಲಿಪಿ

ಇದರ ಹೆಸರು ಮೋಡಿ ಲಿಪಿ. ಹೆಸರೇ ಸೂಚಿಸುವಂತೆ ಅಕ್ಷರಗಳು ಮೋಡಿ ಮಾಡುತ್ತವೆ. ಕೆಲ ಶತಮಾನಗಳ ಹಿಂದೆ ಈ ಲಿಪಿ ಬಳಕೆಯಲ್ಲಿತ್ತು. ಲೆಕ್ಕ ಪತ್ರಗಳನ್ನು, ರಹಸ್ಯ ಮಾಹಿತಿಗಳನ್ನು ಮತ್ತು ಕೆಲ ಮುಖ್ಯ ಘಟನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಲಿಪಿಯಲ್ಲಿ ದಾಖಲಿಸಲಾಗುತ್ತಿತ್ತು.

ಈ ಲಿಪಿಯನ್ನು ಈಗ ಓದುವವರು ಇರಲಿ, ಅದನ್ನು ನೋಡಿದವರೇ ವಿರಳ. ಮೋಡಿಲಿಪಿಯಲ್ಲಿ ಬರೆಯಲಾದ ತಾಳೆಗರಿ ಮತ್ತು ಹಳೆಯ ಕಾಗದದ ದಾಖಲೆಗಳನ್ನು ಕೆಲವರು ಇಂದಿಗೂ ಉಳಿಸಿಕೊಂಡು ಬಂದಿರುವುದನ್ನು ಕಾಣಬಹುದು. ಈ ಲಿಪಿಯನ್ನು ಸಲೀಸಾಗಿ ಓದುವವರು ವಿರಳ. ಹೆಳವರು ‘ಮೋಡಿಲಿಪಿ’ಯಲ್ಲಿನ ಮಾಹಿತಿಯನ್ನು ತಮ್ಮ ಹಿರಿಯರಿಂದ ಕನ್ನಡಕ್ಕೆ ಅನುವಾದಿಸಿಕೊಂಡು ಓದುತ್ತಾರೆ.

ಲಿಪಿಯ ಪರಿಚಯ
ಇದು ಮಧ್ಯಕಾಲದ ಲಿಪಿ. ಮರಾಠಿ, ಪರ್ಶಿಯನ್, ಅರೇಬಿಕ್ ಪದಗಳಲ್ಲದೇ ಕನ್ನಡ ಶಬ್ದಗಳು ಈ ಲಿಪಿಯಲ್ಲಿ ಬಳಕೆಯಾಗಿವೆ.  ವಕ್ರವಾಗಿ ಬರೆಯುವುದೇ ಮೋಡಿಲಿಪಿ ಎಂಬ ಮಾತು ಪ್ರಚಲಿತವಿದೆ. ಪೂರ್ಣ ವಿರಾಮ ಇಲ್ಲದಿರುವುದರಿಂದ  ಒಂದು ಕಾಲದಲ್ಲಿ ಈ ಲಿಪಿಗೆ ಇದಕ್ಕೆ ಹೆಚ್ಚಿನ ಮಹತ್ವ ಇತ್ತಂತೆ.

ಮೋಡಿಲಿಪಿ 13 ನೇ ಶತಮಾನದಿಂದ 20 ನೇ ಶತಮಾನದ ಕೊನೆವರೆಗೂ ಬಳಕೆಯಲ್ಲಿತ್ತು. ದೇವಗಿರಿಯ ಯಾದವರ ಕಾಲದಲ್ಲಿ ಪ್ರಾರಂಭವಾಗಿ ಮರಾಠರು ಹಾಗೂ ಪೇಶ್ವೆಗಳ ಕಾಲದಲ್ಲಿ ಹೆಚ್ಚು ಬಳಕೆಯಾಯಿತು. ಗುಪ್ತ ವಿಷಯಗಳನ್ನು ಕಾಪಾಡುವ ಸಲುವಾಗಿ ಮತ್ತು ವೈರಿಗಳಿಗೆ ಗೊತ್ತಾಗದ ಹಾಗೇ ವಿಷಯಗಳನ್ನು ತಿಳಿಸಲು ಈ ಲಿಪಿಯನ್ನು ಬಳಸಲಾಗುತ್ತಿತ್ತು.

ಭಾರತಕ್ಕೆ ವ್ಯಾಪಾರಕ್ಕೆ ಬಂದ ಬ್ರಿಟಿಷರಿಗೂ ಈ ಲಿಪಿಯ ಪರಿಚಯವಿತ್ತು ಎನ್ನಲಾಗಿದೆ. ಧಾರವಾಡ, ಬೆಳಗಾವಿ, ಹಾವೇರಿ ಶಾಲೆಗಳಲ್ಲಿ ಈ ಲಿಪಿಯನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಮೈಸೂರಿನ ಸರ್ಕಾರಿ ಕಚೇರಿಗಳಲ್ಲೂ ಈ ಲಿಪಿ ಬಳಕೆಯಾಗಿದೆ. ಪುಣೆಯ ಸಂಶೋಧನಾ ಕೇಂದ್ರದಲ್ಲಿ ಮೋಡಿಲಿಪಿಗಳ ದಾಖಲೆಗಳ ಸಂಗ್ರಹವಿದೆ.

ಉತ್ತರ ಕರ್ನಾಟಕದ ಕೆಲವೆಡೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಇದೇ ಲಿಪಿಯಲ್ಲಿವೆ. ಇವುಗಳ ಮಾಹಿತಿಗಳನ್ನು ಕನ್ನಡಕ್ಕೆ ಅನುವಾದಿಸಬಲ್ಲ ಲಿಪಿ ತಜ್ಞರು ವಿರಳ. ಬಾಗಲಕೋಟೆ ಜಿಲ್ಲೆ ಜಮಖಂಡಿಯವರೇ ಆದ ಹನುಮಂತ ಕುಲಕರ್ಣಿ ಮತ್ತು ಬೆಳಕಿಂಡಿ ಅಜ್ಜ ಇವರಲ್ಲಿ ಪ್ರಮುಖರು.

ಕರ್ನಾಟಕದಲ್ಲಿ ಮರಾಠರ ಪ್ರವೇಶದ ಬಗೆಗಿನ ಮಾಹಿತಿಗಳು, ಜಮಖಂಡಿ, ಮುಧೋಳ, ರಾಮದುರ್ಗ, ವಿಜಯಪುರ ಮತ್ತು ಸವಣೂರಗಳಲ್ಲಿ ಪೇಶ್ವೆಗಳ ಆಡಳಿತದ ಬಗೆಗಿನ ಮಾಹಿತಿಗಳು ಮೋಡಿಲಿಪಿಯಲ್ಲಿವೆ ಎಂದು ಇತಿಹಾಸ ಪ್ರಾಧ್ಯಾಪಕ ಎಸ್.ಆರ್.ಜುಮನಾಳ ಹೇಳುತ್ತಾರೆ.

ಉತ್ತರ ಕರ್ನಾಟಕದ ದೇಸಾಯಿಗಳು, ಗೌಡರು ಮತ್ತು ಕುಲಕರ್ಣಿಗಳ ಮನೆಯಲ್ಲಿರುವ ತಾಳೆಗರಿಗಳು ಮತ್ತು ಕಾಗದಗಳು ದೇವರ ಮನೆಯ ಜಗುಲಿಗಳಲ್ಲಿ ಪೂಜಿಸಲಾಗುತ್ತಿವೆ. ಅವುಗಳಲ್ಲಿರುವ ಮಾಹಿತಿ ಏನೆಂದು ಓದುವವರಿಲ್ಲದೇ ಅವು ಜೀವಂತಿಕೆ ಕಳೆದುಕೊಂಡಿವೆ.

ಇಂಥವುದರ ಮಧ್ಯೆಯೂ ಬಾಗಲಕೋಟೆ ಜಿಲ್ಲೆಯ ಕೋಟೇಕಲ್‌ನ ಶ್ರೀಮಂತ ಜಿ.ಎಸ್.ದೇಸಾಯಿರವರ ಮನೆಯ ಪೆಟ್ಟಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಮೋಡಿಲಿಪಿ ಕಟ್ಟುಗಳು ಸುರಕ್ಷಿತವಾಗಿ, ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಈ ಲಿಪಿ ಬಲ್ಲವರ ಶೋಧನೆಯಲ್ಲಿದ್ದಾರೆ ಅವರು. ವಿಶ್ವವಿದ್ಯಾನಿಲಯಗಳು ಮತ್ತು ರಾಜ್ಯ ಪತ್ರಾಗಾರ ಇಲಾಖೆ ಇವುಗಳನ್ನು ರಕ್ಷಿಸುವ ಕೆಲಸ ಮಾಡಬೇಕಿದೆ.

ಪ್ರಮುಖ ಸುದ್ದಿಗಳು