ಸಂಭಾಷಣೆಯೇ ಜೀವಾಳ

ಎಂಟು ಕಾದಂಬರಿ, 200ಕ್ಕೂ ಹೆಚ್ಚು ಕಥೆ, 25ಕ್ಕೂ ಹೆಚ್ಚು ನಾಟಕಗಳನ್ನೂ ಬರೆದಿರುವ ಹೂಲಿ ಶೇಖರ್ ಇತ್ತೀಚೆಗೆ ಧಾರಾವಾಹಿಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಆಡುಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವ ಶಕ್ತಿ ಇವರದ್ದು.

ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರದಲ್ಲಿ ಹೂಲಿ ಶೇಖರ್‌ ಸಾಕಷ್ಟು ಪರಿಚಿತ ಹೆಸರು. ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ಅಭಿರುಚಿಯವರಿಗೆ ಇವರ ನಾಟಕಗಳು ಅಚ್ಚುಮೆಚ್ಚು. ಎಂಟು ಕಾದಂಬರಿ, 200ಕ್ಕೂ ಹೆಚ್ಚು ಕಥೆ, 25ಕ್ಕೂ ಹೆಚ್ಚು ನಾಟಕಗಳನ್ನೂ ಬರೆದಿರುವ ಹೂಲಿ ಶೇಖರ್ ಇತ್ತೀಚೆಗೆ ಧಾರಾವಾಹಿಗಳಿಗೆ ಸಂಭಾಷಣೆಕಾರರಾಗಿ  ಕೆಲಸ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಆಡುಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವ ಶಕ್ತಿ ಇವರದ್ದು.  530 ಕಂತು ಪ್ರಸಾರವಾದ ‘ಮೂಡಲ ಮನೆ’ ಧಾರಾವಾಹಿಗೆ ಸಂಭಾಷಣೆ ಬರೆದಿರುವ ಇವರು ಒಂದೇ ಒಂದು ಆಂಗ್ಲ ಪದವನ್ನು ಬಳಸಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಇವರ 25 ನಾಟಕಗಳು ಹಲವು ಭಾಷೆಗಳಿಗೆ ಅನುವಾದಗೊಂಡು   ಪ್ರದರ್ಶನಗೊಳ್ಳುತ್ತಿವೆ. ಹಲವು ದಶಕಗಳಿಂದ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುವ ಹೂಲಿ ಶೇಖರ್‌ ‘ಕಿರುಮಾತಿ’ಗೆ ತಮ್ಮ ವೃತ್ತಿ ಜೀವನದ ಅನುಭವ ಹಂಚಿಕೊಂಡಿದ್ದಾರೆ.

*ಹುಟ್ಟೂರು, ಶಿಕ್ಷಣ, ಈ ಕ್ಷೇತ್ರಕ್ಕೆ ಬಂದ ಬಗೆ ಹೇಳಿ?
ನನ್ನ ಹುಟ್ಟೂರು  ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹೂಲಿ. ಓದಿದೆಲ್ಲ ಬೆಳಗಾವಿಯಲ್ಲೇ. ಕೆಪಿಸಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಕಾಳಿನದಿ ಯೋಜನೆಗೆ.  ಅಲ್ಲಿ 26  ವರ್ಷ ಕೆಲಸ ಮಾಡಿದೆ.  ನಂತರ ಕೆಇಬಿಗೆ ವರ್ಗ ಆಯಿತು. ಸಂವಹನ ಅಧಿಕಾರಿಯಾಗಿದ್ದೆ. 

ವಿದ್ಯುತ್‌ ಯೋಜನೆಗಳ ಬಗ್ಗೆ ಜನ ಮತ್ತು ಸರ್ಕಾರದ ಮಧ್ಯೆ ತಿಳಿವಳಿಕೆ  ಮಾಡಿಸುವುದು ನನ್ನ ಕೆಲಸವಾಗಿತ್ತು. ಆ ವೇಳೆ ‘ಜ್ಯೋತಿ ಬೆಳಗುತ್ತಿದೆ’ ಅನ್ನೋ ಧಾರಾವಾಹಿ ಮಾಡಿದೆವು.

ಇದು 2002–03ರಲ್ಲಿ ದೂರದರ್ಶನದಲ್ಲಿ 300 ಕಂತು ಪ್ರಸಾರವಾಗಿತ್ತು. ಅದಕ್ಕೆ ನನ್ನದೇ ಸಂಭಾಷಣೆ ಇತ್ತು. ಅದಕ್ಕಿಂತ ಮೊದಲು ಸಾಕಷ್ಟು ಕಥೆ ಬರೆದಿದ್ದೆ.

*ಧಾರಾವಾಹಿಯ ಸಂಭಾಷಣೆಕಾರರಾಗಿ ಹೇಗೆ ಪ್ರವೇಶ? 
2000ರಲ್ಲಿ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಉದಯ ವಾಹಿನಿಗೆ  ಧಾರಾವಾಹಿ ಮಾಡುವವರಿದ್ದರು.  ಅದಕ್ಕೆ ‘ಗೆಳತಿ’ ಅನ್ನೊ ಹೆಸರಿಟ್ಟಿದ್ದರು. ಅದೇ ನನ್ನ ಮೊದಲ ಧಾರಾವಾಹಿ ಸಂಭಾಷಣೆ. 

ಇದು 200 ಕಂತು ಪ್ರಸಾರವಾಯಿತು.  ಇದು ಬೆಂಗಳೂರು ಭಾಷೆ ಧಾರಾವಾಹಿ. 150 ಕಂತು ಆದ ಮೇಲೆ  ಹಲವರು ಸಂಭಾಷಣೆಕಾರರಾಗಿ ಸೇರಿಕೊಂಡರು.

*ಈವರೆಗೆ ನಿಮ್ಮ ಸಂಭಾಷಣೆಯ ಎಷ್ಟು ಧಾರಾವಾಹಿಗಳು ಪ್ರಸಾರವಾಗಿವೆ?
ಈಗ ನಾನು ಬರೆಯುತ್ತಿರೋದು 16ನೇಯದು.  ಇವುಗಳಲ್ಲಿ ಭಾರಿ ಪ್ರಮುಖವಾದುದು ಎಂದರೆ ‘ಮೂಡಲ ಮನೆ’, ‘ಮಹಾನವಮಿ’, ‘ಆ ಊರು ಈ ಊರು’  ಮಹಾನವಮಿ ಮತ್ತು ಮೂಡಲಮನೆ ಪಕ್ಕಾ ಉತ್ತರ ಕರ್ನಾಟಕ ಭಾಷೆಯದ್ದು.

ಆನಂತರ ‘ಸೌಭಾಗ್ಯವತಿ’  ಇದು ಲಂಬಾಣಿ ತಾಂಡದಲ್ಲಿ ಚಿತ್ರೀಕರಣವಾದ ಧಾರಾವಾಹಿ.   ಕೊಡಗಿನಲ್ಲಿ ‘ಕಾವ್ಯ ಕಸ್ತೂರಿ’ ಅನ್ನೋ ಧಾರಾವಾಹಿ ಮಾಡಿದೆ.  ನಂತರ ಏಣಗಿ ನಟರಾಜ್ ಅವರ ನಿರ್ದೇಶನದ ‘ಕಿನ್ನರಿ’ ಧಾರಾವಾಹಿಗೆ ಸಂಭಾಷಣೆ ಬರೆದೆ. ದೂರದರ್ಶನಕ್ಕೆ ‘ಕುಂತಿ’ ಧಾರಾವಾಹಿಗೆ 600  ಕಂತುಗಳಿಗೆ ಕೆಲಸ ಮಾಡಿದೆ.  

*ಒಂದು ಧಾರಾವಾಹಿಗೆ ಉತ್ತರ ಕರ್ನಾಟಕ ಭಾಷೆ ಅಳವಡಿಸುವ ಸವಾಲುಗಳೇನು?
ತುಂಬಾ ಸವಾಲುಗಳಿವೆ.  ಒಂದೆಂದರೆ ಬರಹಗಾರನಿಗೆ ಆ ಭಾಗದ ಭಾಷೆಯ ಜ್ಞಾನ ಇರಬೇಕು. ಅದರಲ್ಲಿ ಪಾಂಡಿತ್ಯ ಬೇಕಿಲ್ಲ. ಉತ್ತರ ಕರ್ನಾಟಕದ ಭಾಷೆ ಅರಿವಿನ ಜತೆಗೆ ಜನಜೀವನದ ಬಗ್ಗೆ ತಿಳಿದಿದ್ದರೆ ಸಂಭಾಷಣೆ ಸರಳವಾಗಿ ತನ್ನಿಂತಾನೆ ಬರುತ್ತೆ. ಇವೆಲ್ಲ ಗೊತ್ತಿಲ್ಲದ್ದರೆ ‘ತಿಣುಕಿದನಾ ಪಣಿರಾಯ’ ಅನ್ನೋ ಹಾಗಾಗುತ್ತೆ. ಒತ್ತಾಯದಿಂದ ಹಾಕೋ ಭಾಷೆ ಅಲ್ಲ.

ಅದು ಸಹಜವಾಗಿ ಬರಬೇಕು. ಉತ್ತರ ಕರ್ನಾಟಕ ಭಾಷೆಯಲ್ಲಿ ಲಾಲಿತ್ಯ ಇದೆ. ಅದನ್ನು ಬಿಟ್ಟು ಮಾತನಾಡಿದರೆ ಅಭಾಸವಾಗುತ್ತದೆ.  ಆದ್ದರಿಂದ ಬೆಂಗಳೂರಿನ ಹಲವರು ಉತ್ತರ ಕರ್ನಾಟಕ ಭಾಷೆಯಲ್ಲಿ ಧಾರಾವಾಹಿ ಮಾಡಲು ಹೋಗಿ ಎಡವಿದ್ದಾರೆ. ಆದ್ದರಿಂದ  ನಾನು ಹೇಳೋದು, ಆ ಭಾಗದ ನಟರನ್ನು, ಸಂಭಾಷಣೆಕಾರರನ್ನು ಇಟ್ಟುಕೊಳ್ಳಿ ಅಂತ.  ಆಗ ಶಬ್ದಕ್ಕೆ ಸಹಜತೆ  ಬರುತ್ತೆ.

*ತೆರೆಯ ಹಿಂದೆಯೇ ಇಷ್ಟೊಂದು ವರ್ಷ ಕೆಲಸ ಮಾಡ್ತಾ ಬಂದಿದ್ದೀರಿ, ನಟರಾಗಬೇಕು ಎಂದು ಅನಿಸಲಿಲ್ಲವೇ ಅಥವಾ ಅವಕಾಶ ಸಿಗಲಿಲ್ಲವೇ?
ನಟನೆಗೆ ಕೇಳಿದ್ದಾರೆ. ಆದರೆ ಬರವಣಿಗೆ ಒತ್ತಡ ಜಾಸ್ತಿ ಇರೋದರಿಂದ ಅಭಿನಯಿಸಲು ಸಾಧ್ಯವಾಗ್ತಾ ಇಲ್ಲ. ಸದ್ಯ ಹಿಂದಿ ಧಾರಾವಾಹಿಗೆ ಸಂಭಾಷಣೆ ಬರೀತಾ ಇದ್ದೇನೆ.

*ಇಷ್ಟೊಂದು ಒತ್ತಡದ ಕೆಲಸದ ನಡುವೆ ಸಮಯವನ್ನು ಹೇಗೆ ಹೊಂದಾಣಿ ಕೆ ಮಾಡಿಕೋಳ್ತೀರಿ?
ನನ್ನಷ್ಟೇ ವೇಗವಾಗಿ ಧಾರಾವಾಹಿ ತಂಡವೂ ಕೆಲಸ ಮಾಡಬೇಕು.  ನನ್ನ ವೇಳಾಪಟ್ಟಿಯಂತೆ ಅವರೂ ಕೆಲಸ ಮಾಡಿದರೆ ಎಲ್ಲ ಸುಗಮವಾಗುತ್ತದೆ. ಈವರೆಗೆ ಎರಡು ಧಾರಾ ವಾಹಿಗಳಿಗೆ ಸಂಭಾಷಣೆ ಬರೀತಾ ಬಂದಿದ್ದೇನೆ. ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ಒಂದು ಧಾರಾವಾಹಿಗೆ, ಮಧ್ಯಾಹ್ನ 2 ಗಂಟೆ ಯಿಂದ 6 ಗಂಟೆವರೆಗೆ ಮತ್ತೊಂದಕ್ಕೆ. ಉಳಿದ ಅವಧಿ ನನ್ನದು.

*ನಿಮ್ಮ ಸಂಭಾಷಣೆಯನ್ನು ಬದಲಾಯಿಸಲು ನಿರ್ದೇಶಕರಿಗೆ ಅವಕಾಶ ನೀಡುತ್ತೀರಾ?
ಇಲ್ಲ. ನಾನು ಅದಕ್ಕೆ ಅವಕಾಶ ನೀಡಲ್ಲ. ಅಂದರೆ ಚಿತ್ರ ಕಥೆ ಏನು ಹೇಳಬೇಕು ಅನ್ನೋದನ್ನು ನಾನು ಮತ್ತು ನಿರ್ದೇಶಕರು ಮೊದಲೇ ಮಾತನಾಡಿಕೊಂಡಿರುತ್ತೇವೆ. ಅದಕ್ಕೆ ಅನುಗುಣ ವಾಗಿ ಬರೆದಿರುತ್ತೇನೆ. ಬದಲಾಯಿಸುವುದಿದ್ದರೆ ನನ್ನ ಕೇಳಿ ಮಾಡ್ತಾರೆ.
 
*ಇಂದಿನ ಧಾರಾವಾಹಿ ರೇಟಿಂಗ್ ಹೇಗಿದೆ?
‘ಮೂಡಲಮನೆ’ಗೆ 13 ರೇಟಿಂಗ್ ಇರ್ತಾ ಇತ್ತು. ಈಗ ಮೂರೋ ಇಲ್ಲವೇ ನಾಲ್ಕು ಬಂದರೆ ಖುಷಿ ಆಚರಣೆ ಮಾಡ್ತಾರೆ. ಆ ಮಟ್ಟಿಗೆ ಧಾರಾವಾಹಿ ಗುಣಮಟ್ಟ ಕುಸಿತಾ ಇದೆ.

*ಡಬ್ಬಿಂಗ್‌, ರೀಮೇಕ್‌ ಯಾವುದು ಅಪಾಯಕಾರಿ?
ಡಬ್ಬಿಂಗ್‌ಗಿಂತ ಹೆಚ್ಚು ಅಪಾಯಕಾರಿ  ರೀಮೇಕ್‌. ಕಾರಣ ಎಂದರೆ ಡಬ್ಬಿಂಗ್‌ನಲ್ಲಿ ಆ ಭಾಷೆಯ ಮಾತುಗಳನ್ನು ಕನ್ನಡದಲ್ಲಿ ಕೇಳ್ತೇವೆ. ಆದರೆ ರೀಮೇಕ್‌ನಲ್ಲಿ ಕಥೆ ನಮ್ಮದಲ್ಲ, ನಂತರ  ನಮ್ಮ ನಿರ್ದೇಶಕರ ಸೃಜನಶೀಲತೆ ಹಾಳು ಮಾಡುತ್ತೆ. ಇದು ಕನ್ನಡ ಲೇಖಕರನ್ನು ಕೊಲ್ಲುತ್ತೆ. 

*ಸಂಭಾಷಣೆಗೂ ಮೊದಲು ಧಾರಾವಾಹಿ ಕಥೆ ಕೊಟ್ಟಿರುತ್ತಾರಾ?
ಹೌದು ನಮಗೆ ಸಾಮಾನ್ಯವಾಗಿ 50 ಕಂತಿನ ಕಥೆ ಕೊಟ್ಟಿರುತ್ತಾರೆ.  ಅದನ್ನೇ ಚಿತ್ರಕಥೆ ಮಾಡಿಕೊಡಬೇಕು.

*ಕೆಲವು ಧಾರಾವಾಹಿಯನ್ನು ಕಥೆ ನಡೆಯುವ ಸ್ಥಳದಲ್ಲೇ ಚಿತ್ರೀಕರಣ ಮಾಡಿದರೆ ನೇಟಿವಿಟಿ ಬರುತ್ತೆ ಅಂತಾರೆ ನಿಜವಾ?
ಇದು ಶುದ್ಧ ಸುಳ್ಳು. ಉತ್ತರ ಕರ್ನಾಟಕ ಭಾಗಕ್ಕೆ ಹೋಗಿ ರಾಗಿ ಮುದ್ದೆ ತಿಂದ ಮಾತ್ರಕ್ಕೆ ನೇಟಿವಿಟಿ ಬರಲ್ಲ. ಈಗ  ಎಲ್ಲ ಧಾರಾವಾಹಿ ಪ್ರಸಾರಕ್ಕೂ ಅವಸರ.  ಒಮ್ಮೆ ಪ್ರಸಾರ ಶುರುವಾದರೆ ದಿನವೂ ಕಂತು ಸಾಯುತ್ತಾ ಇರುತ್ತದೆ.

ಒಂದು ಧಾರಾವಾಹಿಯಲ್ಲಿ ಒಂದೇ ಭಾಷೆ ಇರಬೇಕು. ಒಂದು ಪಾತ್ರಕ್ಕೆ ಧಾರವಾಡ ಭಾಷೆ ಮತ್ತೊಂದಕ್ಕೆ ಇನ್ನೊಂದು ಊರಿನ ಭಾಷೆ  ಹಾಕಿದರೆ ಖಿಚಡಿ ಆಗುತ್ತೆ.

*ಮಾಧ್ಯಮಗಳ ಬಗ್ಗೆ ಹೇಳೋದಾದರೆ
ರಂಗಭೂಮಿ ನಟನ ಮಾಧ್ಯಮ. ಚಲನಚಿತ್ರ ನಿರ್ದೇಶಕನ ಮಾಧ್ಯಮ ಆದರೆ ಧಾರಾವಾಹಿ ಲೇಖಕನ ಮಾಧ್ಯಮ.

*ಬೇರೆ ನೆಲದ ಭಾಷೆ ಇಟ್ಟುಕೊಂಡು ಧಾರಾವಾಹಿ ಮಾಡೋವರಿಗೆ ಏನು ಹೇಳುತ್ತೀರಿ?
ಆದಷ್ಟು ಸ್ವಮೇಕ್‌ ಕಥೆ ಮಾಡಿ. ಈ ನೆಲದ ಕಥೆಗಳನ್ನು ಬಳಸಿ ಧಾರಾವಾಹಿ ಮಾಡಿದರೆ ಸಹಜತೆ ಇರುತ್ತೆ. ಇಲ್ಲಾಂದರೆ  ಯಾರೋ ಮಾಡಿದ್ದಾರೆ ಅಂತ ನಾವೂ ಮಾಡುತ್ತೇವೆ ಅನ್ನೋ ಹಾಗೆ ಆಗುತ್ತೆ. 

ಪ್ರಮುಖ ಸುದ್ದಿಗಳು