ಬಂಗುಡೆ ತಂದೂರಿ, ಚಿಪ್ಪಿಕಲ್ಲು ಸುಕ್ಕಾ... ಆಹಾ!

–ಅಕ್ಷತಾ ಕೃಷ್ಣಮೂರ್ತಿ

**

ಬಂಗುಡೆ ತಂದೂರಿ, ಚಿಪ್ಪಿಕಲ್ಲು ಸುಕ್ಕಾ, ಸಿಗಡಿ ಡೀಪ್ ಪ್ರೈ, ಕುಚ್ಚಲಕ್ಕಿ ಅನ್ನ ಎಂಬ ಪದಗಳು ಕರಾವಳಿ ಜನರ ಕಿವಿಗೆ ಬಿದ್ದರೆ ಸಾಕು ಬಾಯಲ್ಲಿ ನೀರೂರುವುದು ಖಂಡಿತ. ಒಳ್ಳೊಳ್ಳೆ ಮಾಂಸಾಹಾರಿ ಖಾದ್ಯಗಳಿಗೆ ಹೆಸರಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಮೀಪದ ನಿಹಾರಿಕಾ ಹೋಟೆಲ್. ಮೀನು ಪ್ರಿಯರ ಮನ ತಣಿಸಿ, ರುಚಿಯನ್ನು ನಾಲಗೆಯಲ್ಲಿ ಉಳಿಸುವ ಹಲವು ಖಾದ್ಯಗಳು ಇಲ್ಲಿ ಸಿಗುತ್ತದೆ.

ಒಮ್ಮೆ ಇಲ್ಲಿ ತಿಂದು–ಉಂಡು ಹೋದವರು ರುಚಿಯನ್ನು ಮೆಚ್ಚಿ ಪುನಃ ಪುನಃ ಬಂದಿದ್ದಿದೆ. ಎಣ್ಣೆಯನ್ನು ಅತಿಯಾಗಿ ಬಳಸದೇ ತಯಾರಿಸಿದ ಶಾರ್ಕ್‌ ಟಿಕ್ಕಾ, ನುಚ್ಗಿ ಸುಕ್ಕಾ, ತವಾ ಪ್ರೈ, ಫಿಶ್ ಬೋನ್‍ಲೆಸ್ ಫ್ರೈ ಮುಂತಾದ ಖಾದ್ಯಗಳು ಬಾಯಲ್ಲಿ ಸದಾ ನೀರೂರಿಸುತ್ತವೆ. ಇದಕ್ಕೆ ಮುಖ್ಯ ಕಾರಣ, ಟೇಸ್ಟಿಂಗ್ ಪೌಡರ್ ಬಳಕೆ ಹಾಗೂ ಬಣ್ಣಗಳ ಬಳಕೆ ಇಲ್ಲದಿರುವುದು. ವಿವಿಧ ತರಕಾರಿಗಳನ್ನು ಕಲಾತ್ಮಕವಾಗಿ ಕತ್ತರಿಸಿ ಅಲಂಕರಿಸುವ ರೀತಿಯೇ ಅರ್ಥಪೂರ್ಣ.

ಮೀನಿನ ತಂದೂರಿಯ ಅಡುಗೆಯಲ್ಲಿ, ಅದರಲ್ಲೂ ಮುಖ್ಯವಾಗಿ ಬಂಗುಡೆ ತಂದೂರಿ ಹಾಗು ಚಿಪ್ಪಿಕಲ್ಲು (ತಿಸರೆ) ಸುಕ್ಕಾ ಈ ಹೊಟೇಲಿನ ಪದಾರ್ಥಗಳು ಬಹಳ ರುಚಿ. ತಾಜಾ, ಹಸಿ ಬಂಗುಡೆಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ಗೆರೆ ಎಳೆದು ಉಪ್ಪು, ನಿಂಬೆ ರಸ, ಅರಿಶಿನ ಹಾಕಿ ಸರಿಯಾಗಿ ಕಲಸಿ ಹತ್ತು ನಿಮಿಷ ಹಾಗೇ ಬಿಟ್ಟು, ನಂತರ ಬೇರೊಂದು ಪಾತ್ರೆಯಲ್ಲಿ ಹುಣಸೆ ರಸ, ಈರುಳ್ಳಿ, ಬೆಳ್ಳುಳ್ಳಿ, ಶುಂಟಿ, ಒಣ ಮೆಣಸಿನಕಾಯಿ ಪೇಸ್ಟ್ ಗಟ್ಟಿಯಾಗಿ ಕಲಸಿಟ್ಟುಕೊಂಡು ಮೀನಿನ ಒಳ ಹೊರ ಭಾಗಗಳಿಗೆ ಹಚ್ಚಿ ಒಂದರಿಂದ ಎರಡು ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ನಂತರ ತಂದೂರಿಯನ್ನು ಒಲೆಯಲ್ಲಿ ಆಗಾಗ ಸ್ವಲ್ಪ ಎಣ್ಣೆ ಸವರುತ್ತಾ ಬೇಯಿಸುತ್ತಾರೆ. ಮೀನು ತಾಜಾ ಇದ್ದಷ್ಟೂ, ನೆನೆಹಾಕಿದ ಮಿಶ್ರಣ ಮೀನಿನ ಒಳಗೆ ಸೇರಿ ರುಚಿ ಹೆಚ್ಚಾಗುತ್ತದೆ.

ಮೀನಿಗೆ ಮೊದಲೇ ಗೆರೆ ಎಳೆದು, ಸಣ್ಣಗೆ ಸಿಗಿದಿಟ್ಟ ಕಾರಣದಿಂದಾಗಿ ಮಸಾಲೆ ಬೆರೆತ ಮೀನಿನ ಹೋಳು (ತುಂಡು) ಎಸಳು ಎಸಳಾಗಿ ತಿನ್ನಲು ಮಜವಾಗಿರುತ್ತದೆ. ಇದರ ಜೊತೆಗೆ ಕುಚ್ಚಲಕ್ಕಿ ಅನ್ನ, ಮೀನಿನ ಸಾರು ಇದ್ದರಂತೂ ಅದರ ರುಚಿ ಬೇರಾವ ಅಡುಗೆ ಪದಾರ್ಥಗಳ ರುಚಿಗೂ ಸರಿಹೊಂದಲಾರದು. ಹೊಟೇಲಿಗೆ ಬೇಕಾಗುವ ತಾಜಾ ಮೀನನ್ನು ಸಮೀಪದ ಬೇಲೆಕೇರಿ, ಅಮದಳ್ಳಿ, ತದಡಿಯಿಂದ ತರುತ್ತಾರೆ. ಊರಿಗೆ ಹೋದಾಗಲೆಲ್ಲ ಅವರಿವರ ಬಾಯಲ್ಲಿ ನಿಹಾರಿಕೆಯ ಬಗ್ಗೆ ಕೇಳಿದ್ದೆ. ಅಷ್ಟಾಗಿ ಯಾರೂ ಇಷ್ಟಪಡದ ಎಲೆಕೋಸಿನ ಪಲ್ಯವನ್ನು ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿಯಾಗಿ ಈ ಹೊಟೇಲಿನವರು ಮಾಡುತ್ತಾರೆಂದು ಕೇಳಿದ್ದೆ. ಹೀಗಾಗಿ ರಜೆಯಲ್ಲಿ ಸಪರಿವಾರದೊಂದಿಗೆ ದಾಳಿ ಇಟ್ಟಿದ್ದು ಆಯಿತು.

ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು
ಅಂಕೋಲೆ ಕೋಳಿ ಸಾರು
ಮೂಗಲ್ಲಿ ನೀರು ಜೋರು

ಎಂದು ಬರೆದ ಕವಿ ಜಯಂತ ಕಾಯ್ಕಿಣಿಯವರ ಕವನದಲ್ಲಿ ಬರುವ ಅಪ್ಪಟ ಅಂಕೋಲೆಯ ಕೋಳಿ ಸಾರಿನ ರುಚಿಯನ್ನು ಕೂಡ ಇಲ್ಲಿ ಸವಿಯಬಹುದು. ಖಾರ ಸ್ವಲ್ಪ ಜಾಸ್ತಿ ಇರುವ ಕೋಳಿಸಾರಿಗೆ ಮಾರುಕಟ್ಟೆಯಲ್ಲಿ ದೊರೆಯುವ ಚಿಕನ್ ಪೌಡರ್ ಬಳಸುವುದಿಲ್ಲ ಇವರು. ತೆಂಗಿನ ತುರಿಯನ್ನು ಒಂದು ಬಾಣಲೆಯಲ್ಲಿ ಹಾಕಿ, ಒಂದು ಚಮಚ ಎಣ್ಣೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಒಂದು ಪಾತ್ರೆಯಲ್ಲಿ ತೆಗೆದಿಡುತ್ತಾರೆ. ಮಸಾಲೆ ತಯಾರಿಸಲು ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಬೆಳ್ಳುಳ್ಳಿ, ಚಕ್ಕೆ, ಲವಂಗದಂತಹ ಸಾಂಬಾರ ಪದಾರ್ಥಗಳನ್ನೆಲ್ಲ ಸೇರಿಸಿ ಹುರಿದು ನಂತರ ತೆಂಗಿನ ತುರಿ ಹಾಗೂ ಎಲ್ಲ ಸಾಮಗ್ರಿಗಳನ್ನು ಮಿಶ್ರಣ ಮಾಡಿ ನುಣ್ಣಗೆ ಅರೆಯುತ್ತಾರೆ.

ಅರ್ಧ ತಾಸು ಮೊದಲು ಉಪ್ಪು, ನಿಂಬೆರಸ, ಅರಿಶಿನ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಕಲಿಸಿಟ್ಟ ಮಾಂಸವನ್ನು ಕಾಯಿಹಾಲಿನಲ್ಲಿ ಬೇಯಿಸಿಕೊಂಡರೆ ರುಚಿ ಇನ್ನೂ ಹೆಚ್ಚು. ನಂತರ ಅರೆದ ಮಸಾಲೆಯನ್ನು ಸೇರಿಸಿ ಕುದಿಸಿದರೆ ಕೋಳಿ ಸಾರು ರೆಡಿಯಾಗುತ್ತದೆ. ಇದರ ಜೊತೆಗೆ ಅಕ್ಕಿ ರೊಟ್ಟಿಯಿದ್ದರಂತೂ ಊಟ ಸೂಪರ್. ಇದೇ ರೀತಿ ಶೆಟ್ಲಿ ಸುಕ್ಕಾ, ಚಿಪ್ಪಿಕಲ್ಲು ಸುಕ್ಕಾ ಕೂಡಾ ತನ್ನದೇ ರೀತಿಯ ರುಚಿ ಹೊಂದಿದ್ದು ಬಹುಕಾಲದವರೆಗೆ ನೆನಪಿಡುವಂತೆ ಮಾಡುತ್ತವೆ. ಹೀಗಾಗಿಯೇ ನಿಹಾರಿಕಾಗೆ ಪದೇ ಪದೇ ಹೋಗಬೇಕೆನಿಸುತ್ತದೆ.

ಪ್ರಮುಖ ಸುದ್ದಿಗಳು