ಮನೆಯಲ್ಲೇ ವಾಯು ಮಾಲಿನ್ಯ ಅಳೆಯಿರಿ!

ಬೆಂಗಳೂರು: ಮನೆಯ ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್‌ ಪ್ರಮಾಣ ಮಿತಿ ಮೀರಿದೆಯೇ? ತೇವಾಂಶ ಎಷ್ಟಿದೆ, ನೈಟ್ರೋಜನ್‌ ಆಕ್ಸೈಡ್‌ ಹಾಗೂ ಸಲ್ಫರ್‌ ಆಕ್ಸೈಡ್‌ಗಳ ಪ್ರಮಾಣ ನಿಗದಿತ ಮಿತಿ ಯೊಳಗಿದೆಯೇ?... ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಇಂತಹ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಬಯಸುತ್ತೀರಾ?

ಇದಕ್ಕಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸ್ಥಾಪಿಸಿರುವ ವಾಯು ಮಾಲಿನ್ಯ ಮಾಪಕ ಕೇಂದ್ರಗಳ ಮಾಹಿತಿಯನ್ನೇ ಅವಲಂಬಿಸಬೇಕಾಗಿಲ್ಲ. ಮನೆಯಲ್ಲೇ ಒಂದು ಪುಟ್ಟ ಯಂತ್ರವನ್ನು ಇಟ್ಟುಕೊಂಡು ಈ ಕುರಿತು ಮಾಹಿತಿ ಪಡೆಯಬಹುದು. ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ಸಿ) ವಿಜ್ಞಾನಿ ಮಹೇಶ್‌ ಕಶ್ಯಪ್‌ ಅವರ ನೇತೃತ್ವದಲ್ಲಿ ಈ ಸಲುವಾಗಿ ಪುಟ್ಟ ‘ವಾಯು ಸಂವೇದಕ’ ಉಪಕರಣವನ್ನು (ಏರ್‌ ಸೆನ್ಸ್‌) ಅಭಿವೃದ್ಧಿಪಡಿಸಿದೆ.

‘ಉತ್ತಮ ಗುಣಮಟ್ಟದ ಫಲಿತಾಂಶ ನೀಡುವ ಹಾಗೂ ಕಡಿಮೆ ವೆಚ್ಚದ ಉಪಕರಣ ಅಭಿವೃದ್ಧಿಪಡಿಸಲು ನಾವು ನಾಲ್ಕು ವರ್ಷಗಳಿಂದ ಶ್ರಮ ವಹಿಸಿದ್ದೇವೆ. ಈ ಉಪಕರಣದ ಮೊದಲ ಆವೃತ್ತಿ (ಏರ್‌ ಸೆನ್ಸ್‌ 1.0) ಸಿದ್ಧವಾಗಿದೆ’ ಎಂದು ಕಶ್ಯಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಯೋಗಿಕವಾಗಿ ಪೀಣ್ಯ ಹಾಗೂ ಐಐಎಸ್ಸಿ ಪ್ರಾಂಗಣದಲ್ಲಿ ತಲಾ ಒಂದು ಉಪಕರಣಗಳನ್ನು ಅಳವಡಿಸಿದ್ದೇವೆ. ಒಂದು ವಾರದಿಂದ ಇದರ ಕಾರ್ಯ ನಿರ್ವಹಣೆಯ ಪರೀಕ್ಷೆ ನಡೆಸುತ್ತಿದ್ದೇವೆ. ನಮ್ಮ ನಿರೀಕ್ಷೆಗಿಂತಲೂ ಉತ್ತಮ ಫಲಿತಾಂಶವನ್ನು ನೀಡುತ್ತಿದೆ. ಮಲ್ಲೇಶ್ವರ ಪೊಲೀಸ್‌ ಠಾಣೆ ಮತ್ತು ಸದಾಶಿವ ನಗರ ಪೊಲೀಸ್‌ ಠಾಣೆ ಬಳಿ ಇಂತಹ ಇನ್ನೆರಡು ಸಾಧನಗಳನ್ನು ಅಳವಡಿಸಲು ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ. ಅವು ನೀಡುವ ದತ್ತಾಂಶಗಳನ್ನು ಆಧರಿಸಿ ಇದರಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಿದ್ದೇವೆ’ ಎಂದರು.

‘ಸದ್ಯ ಇದಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೆನ್ಸರ್‌ ಬಳಸಿದ್ದೇವೆ. ಇನ್ನು ಇವುಗಳನ್ನೂ ನಾವೇ ಅಭಿವೃದ್ಧಿಪಡಿಸಲಿದ್ದೇವೆ. ಬಳಿಕ ಇದರ ತಯಾರಿಕಾ ವೆಚ್ಚ ಮತ್ತಷ್ಟು ಕಡಿಮೆ ಆಗಲಿದೆ. ಈ ಉಪಕರಣದ ಪರಿಷ್ಕೃತ ಆವೃತ್ತಿಯನ್ನೂ (ಏರ್‌ ಸೆನ್ಸ್‌ 2.0) ರೂಪಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಈಗ ವಾಯು ಮಾಲಿನ್ಯ ಅಳೆಯಲು ಬಳಕೆ ಆಗುತ್ತಿರುವ ದೊಡ್ಡ ಗಾತ್ರದ ಯಂತ್ರೋಪಕರಣಗಳಿಗೆ ₹1.5 ಕೋಟಿಯಷ್ಟು ವೆಚ್ಚವಾಗುತ್ತಿದೆ. ಇದನ್ನು ಅಳವಡಿಸಲು ಕನಿಷ್ಠ 10x10 ಅಡಿ ವಿಸ್ತೀರ್ಣದ ಕೊಠಡಿ ಬೇಕು. ಆದರೆ, ನಾವು ಅಭಿವೃದ್ಧಿಪಡಿಸಿದ ಉಪಕರಣ ಕೇವಲ 8x8 ಇಂಚು ವಿಸ್ತೀರ್ಣದ್ದು. ಇದನ್ನು ಒಂದು ಕಡೆಯಿಂದ ಬೇರೆ ಕಡೆಗೆ ಸಾಗಿಸುವುದೂ ಸುಲಭ’ ಎಂದು ಅವರು ವಿವರಿಸಿದರು.

‘ಖಾಸಗಿ ಕಂಪನಿಗಳು ತಯಾರಿಸಿದ ಪುಟ್ಟ ಗಾತ್ರದ ಏರ್‌ ಸೆನ್ಸರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ₹6 ಲಕ್ಷದವರೆಗೆ ಬೆಲೆ ಇದೆ. ಆದರೆ, ಅವುಗಳಿಂದ ಸಮರ್ಪಕ ದತ್ತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಬಲುಬೇಗ ಕೆಟ್ಟು ಹೋಗುತ್ತವೆ. ಹಾಗಾಗಿ ನಾವು ದತ್ತಾಂಶದ ನಿಖರತೆಗೆ ಹಾಗೂ ಉಪಕರಣದ ಬಾಳಿಕೆಗೂ ಆದ್ಯತೆ ನೀಡಿದ್ದೇವೆ. ನಮ್ಮ ಉಪಕರಣದ ಬೆಲೆ ₹50 ಸಾವಿರದಿಂದ ₹80 ಸಾವಿರದೊಳಗೆ ಇರಲಿದೆ’ ಎಂದರು.  

‘ಮಾಲ್‌ಗಳು, ವಾಹನ ದಟ್ಟಣೆ ಹೆಚ್ಚಿರುವ ಮಾರ್ಗಗಳು, ಕೈಗಾರಿಕೆಗಳು ಹೆಚ್ಚು ಇರುವ ಕಡೆ ಇವುಗಳನ್ನು ಅಳವಡಿಸಿ ಮಾಲಿನ್ಯದ ಮೇಲೆ ನಿಗಾ ಇಡಬಹುದು’ ಎಂದರು.

ಪ್ರಮುಖ ಸುದ್ದಿಗಳು