ಜಾರಕಿಹೊಳಿ 'ಕೈ' ಬಿಡಲ್ಲ: ಪರಮೇಶ್ವರ

ಬೆಂಗಳೂರು: ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಸಚಿವ ರಮೇಶ ಜಾರಕಿಹೊಳಿ ಮಂಗಳವಾರ ಬೆಳಿಗ್ಗೆ ಭೇಟಿ ಮಾಡಿ ಚರ್ಚೆ ನಡೆಸಿದರು.

ಸದಾಶಿವನಗರದ ಪರಮೇಶ್ವರ ಅವರ ಸರ್ಕಾರಿ ನಿವಾಸಕ್ಕೆ ಜಾರಕಿಹೊಳಿ, ಶಾಸಕ ಬಿ.ಸಿ. ಪಾಟೀಲ ಜೊತೆ ತೆರಳಿದರು. ಸುಮಾರು 40 ನಿಮಿಷ ಚರ್ಚೆ ನಡೆಸಿದರು.

ಜಾರಕಿಹೊಳಿ ಸಹೋದರರು ತಮ್ಮ ಜೊತೆಗಿರುವ ಶಾಸಕರ ಜೊತೆ ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ ಎಂಬ ವದಂತಿ ಬೆನ್ನಲ್ಲೇ ನಡೆದ ಈ ಭೇಟಿ ಕುತೂಹಲ ಮೂಡಿಸಿದೆ.

ಸದಾಶಿವನಗರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು.

ಬೆಳಗಾವಿ ಜಿಲ್ಲೆಯ ಸಮಸ್ಯೆ ಈಗ ಬಗೆಹರಿದಿದೆ. ಬಿಜೆಪಿಯ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ನಾವು ಅವರ ಹಾಗೇ ಮಾಡಲ್ಲ ಎಂದರು.

ಜಿ. ಪರಮೇಶ್ವರ ಮಾತನಾಡಿ, ರಮೇಶ ಜಾರಕಿಹೊಳಿ ಜೊತೆ 20 ಶಾಸಕರು ಬಿಜೆಪಿಗೆ ಹೋಗುತ್ತಾರೆ ಎನ್ನುವುದು ಸುಳ್ಳು. ಬಿಜೆಪಿಯವರು ಸೆಳೆಯಲು ಯತ್ನಿಸುತ್ತಿದ್ದಾರೆ ಎನ್ನುವುದೂ ಸುಳ್ಳು. ಇದು‌ ಬಿಜೆಪಿಯವರ ಸೃಷ್ಟಿ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಮೇಶ ಜಾರಕಿಹೊಳಿ ಕೂಡ ಪಕ್ಷ ಬಿಡಲ್ಲ. ಅವರು ಡಿ.ಕೆ. ಶಿವಕುಮಾರ್ ಬಗ್ಗೆಯೂ ಅಸಮಾಧಾನ ಹೇಳಿಕೊಂಡಿಲ್ಲ‌. ಮೈತ್ರಿ ಸರ್ಕಾರ ಹಾಗೂ ಪಕ್ಷದಲ್ಲಿ ಎಲ್ಲವೂ ಶಾಂತಿಯುತವಾಗಿದೆ ಎಂದರು.

ಪ್ರಮುಖ ಸುದ್ದಿಗಳು