ಯಕ್ಷಗಾನ ಕಲಾವಿದನ ಜೀವನ ವೃತ್ತಾಂತ

ನಾಗರಾಜ ಸೋಮಯಾಜಿ ಮತ್ತು ಅವರ ಸ್ನೇಹಿತರ ತಂಡ ಬ್ರಿಡ್ಜ್‌ ಸಿನಿಮಾ ರೀತಿಯ ಹೊಸ ಪ್ರಯೋಗಕ್ಕೆ ಮುಂದಾಗಿದೆ. ‘ದಿ ಬೆಸ್ಟ್ ಆ್ಯಕ್ಟರ್’ ಹೆಸರಿನ ಈ ಚಿತ್ರ ನಲವತ್ತ ಮೂರು ನಿಮಿಷದ ಅವಧಿಯದಾಗಿದೆ. ಇದರಲ್ಲಿ ಯಕ್ಷಗಾನ ಕಲಾವಿದನ ಬಣ್ಣದ ಬದುಕಿನ ಸುತ್ತ ಕಥೆ ಹೆಣೆಯಲಾಗಿದೆ. ಕುಂದಾಪುರ ಹಾಗೂ ಸಾಲಿಗ್ರಾಮದ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. 

ನಿರ್ದೇಶಕ ನಾಗರಾಜ ಸೋಮಯಾಜಿ, ‘ಹಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರ ನಿರ್ದೇಶಿಸಿದ್ದೇನೆ. ಚಿತ್ರದಲ್ಲಿ ರಂಜನೆ ಜೊತೆಗೆ ನೇಟಿವಿಟಿಯ ಅನಾವರಣವೂ ಇದೆ’ ಎಂದರು. ಮುಂಬರುವ ದಿನಗಳಲ್ಲಿ ಚಿತ್ರ ನಿರ್ದೇಶಿಸುವ ಗುರಿಯೂ ಅವರಿಗಿದೆ.

ಚಿತ್ರಕ್ಕೆ ದಿನೇಶ್ ವೈದ್ಯ ಬಂಡವಾಳ ಹೂಡಿದ್ದಾರೆ. ‘ಕಮರ್ಷಿಯಲ್ ನಿರೀಕ್ಷೆ ಇಟ್ಟುಕೊಂಡು ಈ ಸಿನಿಮಾಗೆ ಬಂಡವಾಳ ಹೂಡಿಲ್ಲ. ಜನರಿಗೆ ನಮ್ಮೂರಿನ ಪರಿಸರ ತೋರಿಸುವ ಸಣ್ಣ ಪ್ರಯತ್ನ ಇದರಲ್ಲಿದೆ’ ಎಂದು ಮಾತು ಮುಗಿಸಿದರು.

ನಟ ಸಂಚಾರಿ ವಿಜಯ್, ‘ನಾನು ಮತ್ತು ನಾಗರಾಜು ಸಂಚಾರಿ ಬಳಗದಲ್ಲಿ ಹಲವು ವರ್ಷ ಕೆಲಸ ಮಾಡಿದ್ದೇವೆ. ಗೆಳೆಯನಿಗಾಗಿ ಈ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೇನೆ. ಒಬ್ಬ ಕಲಾವಿದನ ಬದುಕಿನ ಚಿತ್ರಣ ಇದರಲ್ಲಿದೆ. ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿಬಂದಿದೆ’ ಎಂದಷ್ಟೇ ಹೇಳಿದರು.

‘ಎಟಿಎಂ’, ‘ನೂರೊಂದು ನೆನಪು’ ಚಿತ್ರಗಳಿಗೆ ಕೆಲಸ ಮಾಡಿದ್ದ ಎಸ್.ಕೆ. ರಾವ್ ಅವರು ಈ ಚಿತ್ರಕ್ಕೂ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಅರ್ಜುನ ರಾಮು ಅವರು ಸಂಗೀತ ಸಂಯೋಜಿಸಿದ್ದಾರೆ. ಕರಾವಳಿ ರಂಗಭೂಮಿ ಪ್ರತಿಭೆ ಮಾಧವ ಕಾರ್ಕಡ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಚಿತ್ರದ ಟೀಸರ್‌ ಬಿಡುಗಡೆಗೊಳಿಸಲಾಯಿತು.

ಪ್ರಮುಖ ಸುದ್ದಿಗಳು