ಬಸವನಬಾಗೇವಾಡಿ: ಪಿಒಪಿ ಮೂರ್ತಿ ಮಾರಾಟ ನಿಷೇಧ, ಮಣ್ಣಿನ ಗಣಪತಿಗೆ ಭಾರಿ ಬೇಡಿಕೆ!

ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಆಡಳಿತ ಪಿಒಪಿ ಗಣಪ ಮೂರ್ತಿಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹಾಕಿದ್ದರಿಂದ, ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶದ ವಿವಿಧೆಡೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಮೂರ್ತಿ ತಯಾರಕರು ಬದಲಾದ ಕಾಲಘಟಕ್ಕೆ ತಕ್ಕಂತೆ ಹೊಂದಿಕೊಂಡು ಬೇರೆ ಊರುಗಳಿಂದ ಪಿಒಪಿ ಗಣಪತಿ ತಂದು ಮಾರಾಟ ಮಾಡುತ್ತಿದ್ದರು. ಪ್ರಸಕ್ತ ವರ್ಷ ಕಟ್ಟುನಿಟ್ಟಿನ ಕ್ರಮಕ್ಕೆ ಪುರಸಭೆ ಆಡಳಿತ ಮುಂದಾಗಿದ್ದರಿಂದ, ಗಣೇಶ ಭಕ್ತರು ಮಣ್ಣಿನ ಗಣಪನತ್ತ ಮುಖ ಮಾಡಿದ್ದಾರೆ.

ಇದರಿಂದ ಮಣ್ಣಿನ ಗಣಪತಿ ತಯಾರಿಸುವ ಕಲಾವಿದರ ಮನೆಯಲ್ಲಿ ಬಿಡುವಿಲ್ಲದ ಕೆಲಸ. ಒಬ್ಬರು ಮೂರ್ತಿ ತಯಾರಿಕೆಗೆ ಅಗತ್ಯವಿರುವ ಮಣ್ಣನ್ನು ಹದಗೊಳಿಸಿದರೆ, ಇನ್ನೊಬ್ಬಾತ ಮೂರ್ತಿ ತಯಾರಿಕೆಯಲ್ಲಿ ನಿರತ. ಉಳಿದ ಸದಸ್ಯರು ಬಣ್ಣ ಹಚ್ಚುವ ಕಾರ್ಯದಲ್ಲಿ ತಲ್ಲೀನರಾಗಿರುವುದು ಸಾಮಾನ್ಯವಾಗಿದೆ.

‘ಕಳೆದ ವರ್ಷ ಪಿಒಪಿ ಗಣಪತಿಗಳ ಮಾರಾಟ ನಿಷೇಧಿಸಲಾಗಿತ್ತು. ಆದರೂ ಹಬ್ಬದಲ್ಲಿ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಶ್ರಮ ವಹಿಸಿ ತಯಾರಿಸಿದ ಮಣ್ಣಿನ ಗಣಪತಿಗಳು ನಿರೀಕ್ಷೆಯಷ್ಟು ಮಾರಾಟವಾಗಲಿಲ್ಲ.

ಪ್ರಸಕ್ತ ವರ್ಷ ಪುರಸಭೆ ಅಧಿಕಾರಿಗಳು ಮೂರ್ತಿ ತಯಾರಿಕರ ಸಭೆ ಕರೆದು ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದರಿಂದ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ’ ಎಂದು ಪಟ್ಟಣದ ಮಣ್ಣಿನ ಗಣೇಶ ಮೂರ್ತಿ ತಯಾರಕ ಬಸವರಾಜ ಪತ್ತಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ತಿಂಗಳಿಂದ ಮನೆ ಸದಸ್ಯರೊಂದಿಗೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇಂಗಳೇಶ್ವರ ಗುಡ್ಡದ ಕೆಂಪು ಮಣ್ಣು ತಂದು ಅದಕ್ಕೆ ಒಂದಷ್ಟು ಹತ್ತಿ ಹಾಕಿ ಕುಟ್ಟಿದ ನಂತರ ನೀರಿನಲ್ಲಿ ಆರೇಳು ದಿನ ನೆನೆಯಲು ಬಿಡುತ್ತೇವೆ. ಮಣ್ಣು ಹದಗೊಂಡ ನಂತರ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತೇವೆ. ನೂರಾರು ಮೂರ್ತಿಗಳ ತಯಾರಿಕೆ ನಂತರ ಒಟ್ಟಿಗೆ ಬಣ್ಣ ಹಚ್ಚುತ್ತೇವೆ. ದಿನಕ್ಕೆ 10ರಿಂದ 15 ಚಿಕ್ಕ ಗಣಪತಿ ತಯಾರಿಸಿದರೆ, ದೊಡ್ಡ ಗಣಪತಿಯೊಂದರ ತಯಾರಿಕೆಗೆ ಮನೆಯ ಸದಸ್ಯರೆಲ್ಲರೂ ಸೇರಿ 10ರಿಂದ 15 ದಿನ ಬೇಕಾಗುತ್ತದೆ. ಸದ್ಯ 500ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದೇವೆ’ ಎಂದು ಮೂರ್ತಿ ತಯಾರಕ ಆನಂದ ಪತ್ತಾರ ಹೇಳಿದರು.

‘ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಗೆ ವೆಚ್ಚ ಕಡಿಮೆಯಾದರೂ ಶ್ರಮ ಹೆಚ್ಚು. ಚಿಕ್ಕ ಗಣಪತಿ ₹ 200ರಿಂದ 300ಕ್ಕೆ ಮಾರಾಟವಾದರೆ, ದೊಡ್ಡ ಗಣಪತಿಗಳು ಆಕಾರಕ್ಕೆ ತಕ್ಕಂತೆ ₹ 1000ದಿಂದ ₹ 15000 ದವರೆಗೆ ಮಾರಾಟವಾಗುತ್ತವೆ. ಈ ವರ್ಷ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗೆ ಬೇಡಿಕೆ ಸಿಗುವ ಲಕ್ಷಣಗಳಿವೆ. ಹಬ್ಬದ ಮುನ್ನಾ ದಿನ ಹಾಗೂ ಹಬ್ಬದ ದಿನದಂದು ಮಾರುಕಟ್ಟೆಯಲ್ಲಿ ಪಿಒಪಿ ಗಣಪತಿ ಮೂರ್ತಿಗಳು ಮಾರಾಟವಾಗದಂತೆ ನೋಡಿಕೊಂಡರೆ, ಕುಟುಂಬದ ಸದಸ್ಯರು ಶ್ರಮ ವಹಿಸಿ ತಯಾರಿಸಿದ ಮೂರ್ತಿಗೆ ಬೆಲೆ ಸಿಗಲಿದೆ. ಇಲ್ಲದಿದ್ದರೇ ವರ್ಷವಿಡಿ ನಾವು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ಮೂರ್ತಿ ತಯಾರಕ ಕಲಾವಿದ ಮೋಹನ ಬಡಿಗೇರ.

ಪ್ರಮುಖ ಸುದ್ದಿಗಳು