ವಿಜಯಪುರ: ಪರಿಸರ ಸ್ನೇಹಿ ಮಣ್ಣಿನ ಗಣಪನ ಕೊರತೆ..!

ವಿಜಯಪುರ: ‘ಪರಿಸರಕ್ಕೆ ಹಾನಿ ಮಾಡಬೇಕೆಂಬ ಉದ್ದೇಶ ನಮ್ಮದಲ್ಲ. ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಮೂರ್ತಿ ತಯಾರಾಗುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸಿ, ಗಣೇಶ ಮೂರ್ತಿಗಳ ಕೊರತೆ ನೀಗಿಸಿ. ನಂತರ ಪಿಒಪಿ ಮೂರ್ತಿಗಳನ್ನು ನಿಷೇಧಿಸಲಿ..!’

ರಾಜ್ಯ ಸರ್ಕಾರ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡದಂತೆ ಮತ್ತು ಪ್ರತಿಷ್ಠಾಪಿಸದಂತೆ ನಿಷೇಧ ಹೇರಿದ್ದರಿಂದ, ನಗರದಲ್ಲಿ ಗಣೇಶ ಮೂರ್ತಿ ಮಾರಾಟಗಾರರು ಮತ್ತು ತಯಾರಕರಿಂದ ಕೇಳಿ ಬರುತ್ತಿರುವ ಮಾತುಗಳಿವು. ಸಾರ್ವಜನಿಕರು, ಭಕ್ತರ ಆಗ್ರಹವೂ ಇದೇ ಆಗಿದೆ.

‘ನಾಲ್ಕು ತಲೆಮಾರಿನಿಂದ ನಾವು ಮಣ್ಣಿನ ಗಣೇಶನ ಮೂರ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಪ್ರತಿ ವರ್ಷ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ಸಾಕಾಗುವಷ್ಟು ಮೂರ್ತಿ ತಯಾರಿಸಲು ಆಗುತ್ತಿಲ್ಲ. ಅನಿವಾರ್ಯವಾಗಿ ಕೊಲ್ಹಾಪುರ, ಸೊಲ್ಲಾಪುರದಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತೇವೆ ಹೊರತು ಪರಿಸರ ಹಾನಿ ಮಾಡಬೇಕೆಂಬ ಉದ್ದೇಶ ನಮಗಿಲ್ಲ’ ಎಂದು ಮೂರ್ತಿ ತಯಾರಕ ಗಣೇಶ ಕಾಳೆ ಹೇಳಿದರು.

‘ಇಡೀ ವರ್ಷ ಗಣೇಶನ ಮೂರ್ತಿ ತಯಾರಿಸಿದ್ರೆ ಅಬ್ಬಬ್ಬಾ ಅಂದ್ರೆ ನಾಲ್ಕೈದು ನೂರು ಮೂರ್ತಿ ತಯಾರಿಸಬಹುದು. ಬಸವಣ್ಣ, ನಾಗೋಬಾ, ಗೋಪಾಲ ಕೃಷ್ಣ, ಗೌರಿ, ಕಾಮಣ್ಣ, ದೇವಿ ಗುಳ್ಳವ್ವ ಮೂರ್ತಿಗಳ ಬೇಡಿಕೆ ಇರೋದ್ರಿಂದ ಮೂರ್ನಾಲ್ಕು ತಿಂಗಳು ಮಾತ್ರ ಗಣೇಶ ತಯಾರಿಕೆಗೆ ಸಮಯ ಸಿಗುತ್ತದೆ. ಮನೆಯ ನಾಲ್ಕು ಜನರೂ ಸೇರಿ 200ರಿಂದ 300 ಮೂರ್ತಿಗಳನ್ನು ಮಾತ್ರ ತಯಾರಿಸಲು ಸಾಧ್ಯ. ಜಿಲ್ಲೆಯಲ್ಲಿ ಮಣ್ಣು ಸಹಿತ ಸಿಗುವುದಿಲ್ಲ. ದೂರದ ಕೊಲ್ಹಾಪುರದಿಂದ ತರಬೇಕು. ಮಣ್ಣಿನ ಮೂರ್ತಿ ಸೂಕ್ಷ್ಮವಾಗಿ ಉಪಯೋಗಿಸಬೇಕು. ಬೆಲೆ ಸಹಿತ ದುಪ್ಪಟ್ಟು ಇರುವುದರಿಂದ ಜನರು ಪಿಒಪಿ ಖರೀದಿಸುತ್ತಾರೆ’ ಎಂದು ಅವರು ಹೇಳಿದರು.

‘ಸಾರಾಯಿ ಮನೆಯನ್ನೇ ಹಾಳು ಮಾಡುತ್ತದೆ. ಆದ್ರೂ ಸರ್ಕಾರದವ್ರು ಅದನ್‌ ಬಂದ್‌ ಮಾಡ್ತಿಲ್ಲ. ಆದರೆ, ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂದುಕೊಂಡು ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡದಂತೆ ತಡೆಯುತ್ತಿರುವುದು ಎಷ್ಟು ಸರಿ ? ಎಲ್ರಿಗೂ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಬೇಕು ಅಂಥ ಆಸೆ ಇರುತ್ತದೆ. ಅವರಿಗೆ ಬೇಕಾಗುವಷ್ಟು ಮಣ್ಣಿನ ಗಣಪ ಸಿಗುವುದಿಲ್ಲ. ಮೊದಲು ಸರ್ಕಾರದವ್ರು ಎಲ್ಲರಿಗೂ ಮಣ್ಣಿನ ಗಣಪ ದೊರಕುವ ವ್ಯವಸ್ಥೆ ಮಾಡಿ ನಂತರ ನಿಷೇಧ ಮಾಡಲಿ. ಯಾರು ಬ್ಯಾಂಡ ಅಂತಾರ’ ಎಂದು ವ್ಯಾಪಾರಿಯೊಬ್ಬರು ಹೆಸರು ಬಳಸದಂತೆ ಷರತ್ತಿನ ಮೇರೆಗೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ರೆ ಒಳ್ಳೆಯದು. ಮೊದಲಿನಿಂದಲೂ ಅದನ್ನೇ ಕೂಡಿಸುತ್ತೇವೆ. ಮಣ್ಣಿನ ಗಣಪ ಬಹಳ ಸೂಕ್ಷ್ಮ. ಹಸಿ ಗಂಧ ಹಚುವಂತಿಲ್ಲ. ಹಾರ ಹಾಕುವಲ್ಲಿ ಹೆಚ್ಚು ಕಡಿಮೆ ಆದ್ರೆ ಧಕ್ಕೆ ಆಗುತ್ತೆ. ಬಹಳ ಬಿಸಿಲು ತಿಂದಿದ್ರೆ ಬಿರುಕು ಬಿಡುತ್ತದೆ. ಸ್ವಲ್ಪ ಮುಕ್ಕ ಆದ್ರೂ ಮಾನಸಿಕವಾಗಿ ಕಾಡುತ್ತದೆ. ಹಿಂಗಾಗಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ವಿಸರ್ಜನೆಗೆ ದೊಡ್ಡ ಹೊಂಡಗಳನ್ನು ನಿರ್ಮಿಸಿದ್ರೆ ಒಳ್ಳೆಯದು’ ಎಂದು ಜೋರಾಪುರ ಪೇಟೆ ನಿವಾಸಿ ಪಲ್ಲವಿ ಹೇರಲಗಿ ಹೇಳಿದರು.

ಪ್ರಮುಖ ಸುದ್ದಿಗಳು