ಕೊಡಗು ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರ ಶ್ರಮ: ವಸತಿ ಶಾಲೆಯಾಯ್ತು ‘ಸರ್ಕಾರಿ ಶಾಲೆ’

ಮಡಿಕೇರಿ: ಭೂಕುಸಿತ, ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೊಡಗು ಜಿಲ್ಲೆಗೆ ಆಹಾರ ಸಾಮಗ್ರಿ, ಹಣಕಾಸಿನ ನೆರವು ಹರಿದು ಬರುತ್ತಿದೆ. ಅದರಲ್ಲೂ ಇಲ್ಲೊಂದು ವಿಶೇಷ ರೀತಿಯ ನೆರವು ಎಲ್ಲರ ಗಮನ ಸೆಳೆಯುತ್ತಿದೆ.

ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸಂಘ– ಸಂಸ್ಥೆಗಳ ಸಹಕಾರದಿಂದ ಸರ್ಕಾರಿ ಶಾಲೆಯೊಂದು ವಸತಿ ಶಾಲೆಯಾಗಿ ಬದಲಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದ 61 ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಾಲೆಯಲ್ಲೇ ವಸತಿ, ಊಟ ಕಲ್ಪಿಸಲಾಗುತ್ತಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಆ. 15, 16ರಂದು ಸುರಿದ ಮಹಾಮಳೆಗೆ ಮಕ್ಕಂದೂರು, ಮಾದಾಪುರ, ಎಮ್ಮೆತ್ತಾಳ, ತಂತಿಪಾಲ, ಮುಕ್ಕೋಡ್ಲು, ಉದಯಗಿರಿಯಲ್ಲಿ ಭೂಕುಸಿತ ಉಂಟಾಗಿ ಹಲವು ಮನೆಗಳು ಕುಸಿದಿದ್ದವು. ಪೋಷಕರೊಂದಿಗೆ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳೂ ಪರಿಹಾರ ಕೇಂದ್ರ ಸೇರಿದ್ದರು. ಪರಿಹಾರ ಕೇಂದ್ರ ಸಮೀಪದ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿತ್ತು.

ಆದರೆ, ಮಕ್ಕಂದೂರು ಪ್ರೌಢಶಾಲೆ ಮುಖ್ಯಶಿಕ್ಷಕಿ ಉಷಾ ಅವರ ನೇತೃತ್ವದ ಎಂಟು ಮಂದಿ ಶಿಕ್ಷಕ ತಂಡವು ಸ್ವಇಚ್ಛೆಯಿಂದ ತಮ್ಮ ಶಾಲೆ ವಿದ್ಯಾರ್ಥಿಗಳ ಮನವೊಲಿಸಿ ಪರಿಹಾರ ಕೇಂದ್ರದಿಂದ ಕರೆತಂದು ಶಾಲೆಯಲ್ಲೇ ವಾಸ್ತವ್ಯ ಕಲ್ಪಿಸಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಕಲಿಕಾ ಚಟುವಟಿಕೆ ಮುಂದುವರೆಸಿದ್ದಾರೆ.

ಆರು ವರ್ಷಗಳಿಂದ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸುತ್ತಿತ್ತು. ಈ ವರ್ಷವೂ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರ ತಂಡವು ಟೊಂಕಕಟ್ಟಿ ನಿಂತಿದೆ. ವಸತಿ ಶಾಲೆಗೆ ಜಿಲ್ಲಾಡಳಿತವೂ ಅನುಮತಿ ನೀಡಿದ್ದು ಸಂತ್ರಸ್ತ ಮಕ್ಕಳು ನಲಿಯುತ್ತಾ ಕಲಿಯುತ್ತಿದ್ದಾರೆ. ವಿದ್ಯಾರ್ಥಿನಿಯರೂ ಇರುವ ಕಾರಣಕ್ಕೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಕ್ಕಳ ಸುರಕ್ಷತೆ ನೋಡಿಕೊಳ್ಳಲು ಪಾಳಿಯಂತೆ ನಿತ್ಯ ಒಬ್ಬ ಶಿಕ್ಷಕರು ಶಾಲೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.

ಹರಿದು ಬಂತು ನೆರವು: ‘ಅಕ್ಷರ ದಾಸೋಹ ಸಾಮಗ್ರಿ ಬಿಟ್ಟರೆ ಶಾಲೆಯಲ್ಲಿ ಏನೂ ಇರಲಿಲ್ಲ. ಮೊದಲು ಸೇವಾ ಭಾರತಿ ಸದಸ್ಯರು ಸಂಪೂರ್ಣ ಸಹಕಾರ ನೀಡಿದರು. ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಯೂ ದಾಸ್ತಾನಿದೆ. ಟೆಂಡರ್‌ ಚಿಕನ್‌ನವರು 40 ಹಾಸಿಗೆ, ದಿಂಬು, ನಾಲ್ಕು ಸಿಲಿಂಡರ್‌, ಸ್ಟೌ ನೀಡಿದ್ದಾರೆ. ಟಿ.ವಿ ಹಾಗೂ ಯುಪಿಎಸ್‌ ನೀಡುವ ಭರವಸೆ ಸಿಕ್ಕಿದೆ. ಸುಂಟಿಕೊಪ್ಪದ ಟಾಟಾ ಕಂಪೆನಿಯಿಂದ ನಿತ್ಯ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಆಗುತ್ತಿದೆ’ ಎಂದು ಉಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳಿಗೆ ನೆನಪು ಕಾಡದಿರಲೆಂದು ಶಾಲೆಯಲ್ಲೂ ಮನೆಯ ವಾತಾವರಣ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಶಾಲೆಗೆ ಆಹಾರ ಸಾಮಗ್ರಿ ಸಾಕಷ್ಟು ಬಂದಿದೆ. ಸಣ್ಣಪುಟ್ಟ ಖರ್ಚಿಗೆಂದು ಸ್ನೇಹಿತರೆಲ್ಲಾ ಸೇರಿ ₨ 50 ಸಾವಿರ ನೆರವನ್ನು ಎಸ್‌ಡಿಎಂಸಿ ಖಾತೆಗೆ ಹಾಕಿದ್ದೇವೆ’ ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಮಡಿಕೇರಿಯ ಮಹಾಂತೇಶ್‌ ತಿಳಿಸಿದರು.

ಪ್ರಮುಖ ಸುದ್ದಿಗಳು