ಪೂರ್ವ ಕ್ಷೇತ್ರದಲ್ಲಿ 3 ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಹುಬ್ಬಳ್ಳಿ: ಇಲ್ಲಿನ ಪೂರ್ವ ವಿಧಾನಸಭಾ ಕ್ಷೇತ್ರದ ನ್ಯೂ ಇಂಗ್ಲಿಷ್ ಸ್ಕೂಲ್ ಹಿಂಭಾಗದ, ಎಸ್‌.ಎಂ. ಕೃಷ್ಣಾನಗರ ಹಾಗೂ ಸೋನಿಯಾಗಾಂಧಿ ನಗರದ ಇಂದಿರಾ ಕ್ಯಾಂಟೀನ್‌ಗಳನ್ನು ಶಾಸಕ ಪ್ರಸಾದ್ ಅಬ್ಬಯ್ಯ ಮಂಗಳವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೈಗೊಂಡಿದ್ದ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಮುಖವಾದದ್ದು. ಬಡವರ ಹಸಿವು ನೀಗಿಸಲು ರಿಯಾಯಿತಿ ದರದಲ್ಲಿ ಊಟ ಮತ್ತು ತಿಂಡಿಯನ್ನು ನೀಡಲಾಗುತ್ತದೆ. ಧಾರವಾಡ ಜಿಲ್ಲೆಗೆ ಒಟ್ಟು 12 ಕ್ಯಾಂಟೀನ್‌ಗಳು ಮಂಜೂರಾಗಿದ್ದು, 9ರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮೂರಕ್ಕೆ ಸ್ಥಳದ ಸಮಸ್ಯೆ ಇದೆ ಎಂದರು.

ಪ್ರತಿ ದಿನ ಬೆಳಿಗ್ಗೆ 500 ಮಂದಿಗೆ ತಿಂಡಿ, ಮಧ್ಯಾಹ್ನ– ರಾತ್ರಿ ತಲಾ 500 ಮಂದಿಗೆ ಊಟ ನೀಡಲಾಗುತ್ತದೆ. ಗುಣಮಟ್ಟದ ಅಹಾರವನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಬೇಕೆಂದು, ಟೆಂಡರ್ ಪಡೆದಿರುವ ಮಯೂರ್ ಆದಿತ್ಯ ರೆಸಾರ್ಟ್ ಸಂಸ್ಥೆಗೆ ಸೂಚನೆ ನೀಡಲಾಗಿದೆ. ಜನರಿಂದ ಯಾವುದೇ ರೀತಿಯ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಸಹ ತಾಕೀತು ಮಾಡಲಾಗಿದೆ. ಜನರು ಸಹ ಈ ಕ್ಯಾಂಟೀನ್‌ಗಳ ಪ್ರಯೋಜನಾ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಪಾಲಿಕೆ ಸದಸ್ಯರಾದ ಅಲ್ಯಾಫ್ ಕಿತ್ತೂರ, ಕಮಿಷನರ್ ಶಕೀಲ್ ಅಹ್ಮದ್, ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ ಅರಳಿಹೊಂಡ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ. ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮುಖಂಡರಾದ ಸದಾನಂದ ಡಂಗನವರ ಇದ್ದರು.

ಪ್ರಮುಖ ಸುದ್ದಿಗಳು