ಭಾರತಕ್ಕೆ ಬೆಳ್ಳಿ: ಗುರ್‌ನಿಹಾಲ್‌ಗೆ ಕಂಚು

ಚಾಂಗ್ವಾನ್‌, ದಕ್ಷಿಣ ಕೊರಿಯಾ (ಪಿಟಿಐ): ಭಾರತದ ಗುರ್‌ನಿಹಾಲ್‌ ಸಿಂಗ್‌ ಗಾರ್ಚಾ ಅವರು ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಜೂನಿಯರ್‌ ಪುರುಷರ ಸ್ಕೀಟ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ.

ಮಂಗಳವಾರ ನಡೆದ ಫೈನಲ್‌ನಲ್ಲಿ 19 ವರ್ಷ ವಯಸ್ಸಿನ ಗುರ್‌ನಿಹಾಲ್‌  46 ಸ್ಕೋರ್‌ ಕಲೆಹಾಕಿದರು. ಈ ಮೂಲಕ ಅಂತರಾಷ್ಟ್ರೀಯ ಶೂಟಿಂಗ್‌ನಲ್ಲಿ ಮೊದಲ ಪದಕ ಗೆದ್ದ ಸಾಧನೆ ಮಾಡಿದರು.

ಇಟಲಿಯ ಎಲಿಯಾ ಸಡ್ರುಕ್ಕಿಯೊಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು 55 ಸ್ಕೋರ್‌ ಗಳಿಸಿದರು. ಈ ವಿಭಾಗದ ಬೆಳ್ಳಿಯ ಪದಕ ಅಮೆರಿಕದ ನಿಕ್‌ ಮೊಸಾಚೆಟ್ಟಿ ಅವರ ಪಾಲಾಯಿತು. ಫೈನಲ್‌ನಲ್ಲಿ ನಿಕ್‌ 54 ಸ್ಕೋರ್‌ ಸಂಗ್ರಹಿಸಿದರು.

ಜೂನಿಯರ್‌ ಪುರುಷರ ಸ್ಕೀಟ್‌ ತಂಡ ವಿಭಾಗದಲ್ಲಿ ಗುರ್‌ನಿಹಾಲ್‌ (119 ಸ್ಕೋರ್‌), ಅನಂತಜೀತ್‌ ಸಿಂಗ್‌ ನರುಕಾ (117 ಸ್ಕೋರ್‌) ಮತ್ತು ಆಯುಷ್‌ ರುದ್ರರಾಜು ಅವರು ಬೆಳ್ಳಿಯ ಸಾಧನೆ ಮಾಡಿದರು.

ಫೈನಲ್‌ನಲ್ಲಿ ಭಾರತ ತಂಡ ಒಟ್ಟು 355 ಸ್ಕೋರ್‌ ಗಳಿಸಿ ಎರಡನೇ ಸ್ಥಾನ ಪಡೆಯಿತು. ಸೋಮವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ತಂಡ ಅಗ್ರಸ್ಥಾನ ಗಳಿಸಿತ್ತು.

ಜೆಕ್‌ ಗಣರಾಜ್ಯ ಚಿನ್ನದ ಪದಕ ಪಡೆಯಿತು. ಈ ತಂಡ 356 ಸ್ಕೋರ್‌ ಕಲೆಹಾಕಿತು. ಈ ವಿಭಾಗದ ಕಂಚಿನ ಪದಕವನ್ನು ಇಟಲಿ (354 ಸ್ಕೋರ್‌) ತನ್ನದಾಗಿಸಿಕೊಂಡಿತು.

ಜೂನಿಯರ್‌ ಮಹಿಳೆಯರ 50 ಮೀಟರ್ಸ್‌ ರೈಫಲ್‌–3 ಪೊಷಿಸನ್‌ ವಿಭಾಗದಲ್ಲಿ ಭಾರತ ತಂಡ 14ನೇ ಸ್ಥಾನ ಗಳಿಸಿತು. ಭಕ್ತಿ ಖಾಮ್ಕರ್ (1132), ಶಿರಿನ್‌ ಗೊದಾರ (1130) ಮತ್ತು ಆಯುಷಿ ಪೊದ್ದಾರ್‌ (1121) ಅವರನ್ನು ಹೊಂದಿದ್ದ ತಂಡ ಫೈನಲ್‌ನಲ್ಲಿ ಒಟ್ಟು 3383 ಸ್ಕೋರ್‌ ಕಲೆಹಾಕಿತು.

ಸೀನಿಯರ್‌ ಮಹಿಳೆಯರ ಸ್ಕೀಟ್‌ ವಿಭಾಗದಲ್ಲಿ ರಶ್ಮಿ ರಾಥೋಡ್‌ (108), ಮಹೇಶ್ವರಿ ಚೌಹಾಣ್‌ (106) ಮತ್ತು ಗನೇಮತ್‌ ಶೆಖೊನ್‌ (105) ಅವರಿದ್ದ ತಂಡ ಒಟ್ಟು 319 ಸ್ಕೋರ್‌ ಗಳಿಸಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ನಾಲ್ಕನೇ ಸ್ಥಾನ: ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಟ್ಟು 22 ಪದಕಗಳನ್ನು ಗೆದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಇದರಲ್ಲಿ ತಲಾ ಏಳು ಚಿನ್ನ ಮತ್ತು ಕಂಚು ಹಾಗೂ ಎಂಟು ಬೆಳ್ಳಿಯ ಪದಕಗಳಿವೆ.

ಪ್ರಮುಖ ಸುದ್ದಿಗಳು