ದತ್ತ ಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಿ.ಟಿ.ರವಿ ಆಗ್ರಹ

ಬೆಂಗಳೂರು: ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ‍ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಾದದ ಬಗ್ಗೆ ಸರ್ಕಾರದ ಜತೆಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ತಿಳಿಸಬೇಕು ಎಂದು ಅಡ್ವೊಕೇಟ್‌ ಜನರಲ್‌ ಅವರಿಗೆ ಹೈಕೋರ್ಟ್‌ ಸೂಚಿಸಿದೆ. ಇದೊಂದು ಸುವರ್ಣಾವಕಾಶ. ರಾಜ್ಯ ಸರ್ಕಾರ ಓಲೈಕೆ ರಾಜಕಾರಣ ಬಿಟ್ಟು ವಿವಾದ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

‘ದತ್ತಪೀಠದಲ್ಲಿ ದತ್ತಾತ್ರೇಯ ದೇವಸ್ಥಾನ ಇದೆ ಎಂದು 1818ರ ಪೂರ್ವದಿಂದಲೂ ಉಲ್ಲೇಖ ಇದೆ. 1927ರ ಮೈಸೂರು ಮುಜರಾಯಿ ಕಾಯ್ದೆಯಲ್ಲೂ ಈ ವಿಷಯ ಇದೆ. ದತ್ತಾತ್ರೇಯ ದೇವರ ಹೆಸರಿನಲ್ಲಿ 1,861 ಎಕರೆ ಇದೆ. 1990ರಲ್ಲಿ ದೇವರ ಹೆಸರಿಗೆ 1.35 ಲಕ್ಷ ಮಧ್ಯಂತರ ತಸ್ತೀಕ್‌ ಬಿಡುಗಡೆ ಆಗಿದೆ. ಆದರೂ, ದತ್ತಪೀಠದಲ್ಲಿ ಮುಜಾವರ್‌ ಅವರು ಪೂಜೆ ಸಲ್ಲಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಸೀದಿಯಲ್ಲಿ ಮುಜಾವರ್‌ ಪೂಜೆ ಮಾಡಲು ನಮ್ಮ ಆಕ್ಷೇಪ ಇಲ್ಲ. ದತ್ತಪೀಠದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದು ಏಕೆ’ ಎಂದು ಅವರು ಪ್ರಶ್ನಿಸಿದರು.

ಪ್ರಮುಖ ಸುದ್ದಿಗಳು