ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ರೈತರಿಗೆ ಸಲಹೆ

ಮಂಗಳೂರು:  ಅಡಿಕೆ ಬೆಳೆಗೆ ಕೊಳೆರೋಗ ಉಲ್ಬಣಿಸಿ ಹಾನಿ ಉಂಟಾಗಿದೆ. ಉದುರಿದ ಕಾಯಿಗಳನ್ನು ಮತ್ತು ಸತ್ತ ಅಡಿಕೆ ಸಿಂಗಾರಗಳನ್ನು ತೋಟದಿಂದ ಹೊರ ಹಾಕಬೇಕು.

ಅಡಿಕೆ ಗೊನೆಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆಯಾಗಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಾಗಿದ್ದಲ್ಲಿ, ಅವಶ್ಯಕತೆಯಿದ್ದಲ್ಲಿ ಮತ್ತೊಮ್ಮೆ ಶೇ 1ರ ಬೋರ್ಡೋ ದ್ರಾವಣ ಸಿಂಪಡಿಸಬೇಕು. ಅಡಿಕೆಯಲ್ಲಿ ಬೇರು ಹುಳ ನಿಯಂತ್ರಣಕ್ಕೆ 20 ಗ್ರಾಂ ಫೋರೇಟ್ ಪ್ರತೀ ಗಿಡಕ್ಕೆ ಅಥವಾ 5 ಮಿಲೀ ಕ್ಲೋರೋಪೈರಿಫಾಸ್ ಪ್ರತೀ ಲೀಟರ್ ನೀರಿಗೆ ಬೆರೆಸಿ 2-3 ಲೀಟರ್ ದ್ರಾವಣವನ್ನು ಮರದ ಬುಡಕ್ಕೆ ಹಾಕಬೇಕು ಎಂದು ತೋಟಾಗಾರಿಕೆ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಕೋಕೋ ಗಿಡಗಳಲ್ಲಿ ಕೊಳೆ ರೋಗ ಪೀಡಿತ ಕಾಯಿಗಳನ್ನು ತೆಗೆಯುವುದು ಮತ್ತು ಅವಶ್ಯಕತೆಗನುಗುಣವಾಗಿ ಪ್ರೂನಿಂಗ್ ಮಾಡಿ ಶೇ‌ 1 ಬೋರ್ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಪ್ರತೀ ಲೀಟರ್ ನೀರಿಗೆ ಬೆರೆಸಿ ಈ ಮಿಶ್ರಣವನ್ನು ಆರೋಗ್ಯವಂತ ಕಾಯಿಗಳ ಮೇಲೆ ಸಿಂಪಡಿಸಬೇಕು.

ಕಾಳುಮೆಣಸಿನ ಬಳ್ಳಿಯಲ್ಲಿ ಸೊರಗು ರೋಗ ಪ್ರಾರಂಭವಾಗಿದ್ದಲ್ಲಿ ನಿಯಂತ್ರಣಕ್ಕೆ ಶೇ 1 ರ ಬೋರ್ಡೋ ದ್ರಾವಣ ಬಳ್ಳಿಗಳ ಎಲ್ಲಾ ಎಲೆಗಳಿಗೆ ಬೀಳುವಂತೆ ಸೂಕ್ಷ್ಮವಾಗಿ ಸಿಂಪಡಿಸಬೇಕು ಹಾಗೂ ಅದೇ ದ್ರಾವಣವನ್ನು ಬಳ್ಳಿಗಳ ಬುಡಕ್ಕೂ ಹಾಕಬೇಕು. ಈ ಸಿಂಪರಣೆಯನ್ನು 30-40 ದಿನಗಳ ಅಂತರದಲ್ಲಿ ಪುನರಾವರ್ತಿಸಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ದೂರವಾಣಿ ಸಂಖ್ಯೆ: 2985298 ಗೆ ಸಂಪರ್ಕಿಸಬಹುದು.

 

ಪ್ರಮುಖ ಸುದ್ದಿಗಳು