ಪ್ರಶಸ್ತಿ ಆಯ್ಕೆ ಸಮಿತಿಗೆ ಮುದ್ಗಲ್‌ ಮುಖ್ಯಸ್ಥ

ನವದೆಹಲಿ (ಪಿಟಿಐ): ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಅವರು ಈ ಬಾರಿಯ ದ್ರೋಣಾಚಾರ್ಯ ಮತ್ತು ಧ್ಯಾನ್‌ಚಂದ್‌ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ಕ್ರೀಡಾ ಸಚಿವಾಲಯವು 11 ಮಂದಿಯ ಆಯ್ಕೆ ಸಮಿತಿಯನ್ನು ಅಂತಿಮಗೊಳಿಸಿದ್ದು, ಮುದ್ಗಲ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ. ಸೆಪ್ಟೆಂಬರ್‌ 16ರಂದು ನವದೆಹಲಿಯಲ್ಲಿ ನಡೆಯುವ ಸಭೆಯ ನಂತರ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ.

2013ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಸ್ಪಾಟ್‌ ಫಿಕ್ಸಿಂಗ್ ಹಗರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್‌ ಮುದ್ಗಲ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿದ ವರದಿಯನ್ನು ಆಧರಿಸಿ ಚೆನ್ನೈಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳ ಮೇಲೆ ಎರಡು ವರ್ಷ ನಿಷೇಧ ಹೇರಿತ್ತು.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಹಿರಿಯ ಶೂಟರ್‌ ಸಮರೇಶ್‌ ಜಂಗ್‌, ಕರ್ನಾಟಕದ ಬ್ಯಾಡ್ಮಿಂಟನ್‌ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಈ ಹಿಂದೆ ಭಾರತ ಬಾಕ್ಸಿಂಗ್‌ ತಂಡಕ್ಕೆ ಕೋಚ್‌ ಆಗಿದ್ದ ಜಿ.ಎಸ್‌.ಸಂಧು, ಹಾಕಿ ಕೋಚ್‌ ಎ.ಕೆ.ಬನ್ಸಾಲ್, ಆರ್ಚರಿ ತಂಡದ ಕೋಚ್‌ ಸಂಜೀವ್‌ ಸಿಂಗ್‌, ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಸ್ಪೆಷಲ್‌ ಡೈರೆಕ್ಟರ್‌ ಜನರಲ್‌ ಓಂಕಾರ್‌ ಕೇದಿಯಾ ಮತ್ತು ಜಂಟಿ ಕಾರ್ಯದರ್ಶಿ (ಕ್ರೀಡೆ) ಇಂದರ್‌ ಧಮಿಜಾ ಅವರು ಸಮಿತಿಯಲ್ಲಿದ್ದಾರೆ ಎನ್ನಲಾಗಿದೆ.

ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯ (ಟಾಪ್‌) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಶ್‌ ರಾಜಗೋಪಾಲನ್‌ ಮತ್ತು ಇಬ್ಬರು ಹಿರಿಯ ಕ್ರೀಡಾ ಪತ್ರಕರ್ತರೂ ಸಮಿತಿಯಲ್ಲಿ ಇರಲಿದ್ದಾರೆ ಎಂದು ಹೇಳಲಾಗಿದೆ.

ಪ್ರತಿ ವರ್ಷ ಆಗಸ್ಟ್‌ 29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತದೆ. ಇಂಡೊನೇಷ್ಯಾದಲ್ಲಿ ಏಷ್ಯನ್‌ ಕ್ರೀಡಾಕೂಟ ನಡೆಯುತ್ತಿದ್ದ ಕಾರಣ ಈ ಬಾರಿಯ ಸಮಾರಂಭವನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಲಾಗಿತ್ತು.

ಪ್ರಮುಖ ಸುದ್ದಿಗಳು