ದೋಷಪೂರಿತ ಮಾಸ್ಟರ್‌ ಪ್ಲಾನ್‌ಗೆ ಅನುಮೋದನೆ ಬೇಡ: ಜನಜಾಗೃತಿ ಅಭಿಯಾನ ಒತ್ತಾಯ

ಧಾರವಾಡ: ‘ಸಾಕಷ್ಟು ದೋಷದಿಂದ ಕೂಡಿರುವ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ) ದ ಪರಿಷ್ಕೃತ ಮಾಸ್ಟರ್ ಪ್ಲಾನ್‌ಗೆ ಸರ್ಕಾರ ಅನುಮೋದನೆ ನೀಡಬಾರದು’ ಎಂದು ಧಾರವಾಡ ಜನಜಾಗೃತಿ ಅಭಿಯಾನ ಒತ್ತಾಯಿಸಿದೆ.

‘ಸಾರ್ವಜನಿಕರ ತಕರಾರರು ಗಣನೆಗೆ ತೆಗೆದುಕೊಳ್ಳದೇ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕೃಷಿ ಜಮೀನನ್ನು ವಸತಿ ಪ್ರದೇಶವನ್ನಾಗಿ ಪರಿವರ್ತಿಸಿದ್ದಾರೆ. ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲೇ ಇದರ ಸಾಕಷ್ಟು ದೋಷಗಳನ್ನು ತೋರಿಸಿದ್ದರೂ, ಸರ್ಕಾರಕ್ಕೆ ಕಳುಹಿಸಿರುವ ಯೋಜನೆಯಲ್ಲಿ ಅವುಗಳನ್ನು ಸರಿಪಡಿಸಿಲ್ಲ. ಈ ಯೋಜನೆಗೆ ಅನುಮೋದನೆ ದೊರೆತಿದ್ದೇ ಆದಲ್ಲಿ, ಬಡಕುಟುಂಬಗಳ ಏಕೈಕ ಆಸರೆಯಾಗಿರುವ ಮನೆಗಳು ನೆಲಸಮಗೊಳ್ಳಲಿವೆ. ಸಾವಿರಾರು ಎಕರೆ ಜಮೀನು ಬಿಲ್ಡರ್‌ಗಳ ಪಾಲಾಗಲಿವೆ’ ಎಂದು ಅಭಿಯಾನದ ಡಾ. ಗೋಪಾಲ ದಾಬಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಸಿದ್ಧಪಡಿಸಿಲ್ಲ. ಇಲ್ಲಿಯವರೆಗೂ 1300 ಆಕ್ಷೇಪಣೆ ಹಾಗೂ ಸಲಹೆಗಳನ್ನು ಸ್ವೀಕರಿಸಲಾಗಿದೆ. ಆದರೆ ಅವುಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ಅಥವಾ ಸಲಹೆಗಳನ್ನು ಸ್ವೀಕರಿಸುವ ಯಾವುದೇ ಪ್ರಯತ್ನ ಹುಡಾ ಅಧಿಕಾರಿಗಳು ಮಾಡಿಲ್ಲ’ ಎಂದು ಆರೋಪಿಸಿದರು.

ಜತೆಗೆ ಅಧಿಕಾರಿಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟ ಅವರು, ‘ಸಾರ್ವಜನಿಕರಿಂದ ಬಂದ ಅಹವಾಲು ಕುರಿತು ಸಭೆ ಏಕೆ ಕರೆದಿಲ್ಲ? ಯೋಜನೆ ಕುರಿತಾದ ತಕರಾರುಗಳನ್ನು ವೈಜ್ಞಾನಿಕವಾಗಿ ಪರಿಗಣಿಸದೇ ಸಾರಾಸಗಟಾಗಿ ತಿರಸ್ಕರಿಸಿದ್ದು ಏಕೆ? ಯೋಜನೆ ಕುರಿತ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರ ಗಮನಕ್ಕೆ ಏಕೆ ತಂದಿಲ್ಲ? ಬಿಲ್ಡರ್‌ಗಳು ಹಾಗೂ ರಿಯಲ್ ಎಸ್ಟೇಟ್‌ ಉದ್ಯಮಿಗಳ ಒತ್ತಡಕ್ಕೆ ಅಧಿಕಾರಿಗಳು ಒಳಗಾಗಿದ್ದಾರೆಯೇ? ಮಾಸ್ಟರ್ ಪ್ಲಾನ್ ಕುರಿತು ವಿಸ್ತೃತವಾದ ಚರ್ಚೆ ನಡೆಸದೆ ಅವಸರದಲ್ಲಿ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದರ ಹಿಂದ ಸತ್ಯವೇನು? ಕೆಲ ರಾಜಕಾರಣಿಗಳು ಮಾಸ್ಟರ್ ಪ್ಲಾನ್ ಶೀಘ್ರ ಅನುಮೋದನೆಗೆ ಒತ್ತಾಯಿಸುತ್ತಿರುವುದು ಏಕೆ?’ ಎಂದು ಪ್ರಶ್ನಿಸಿದ್ದಾರೆ.

‘ವ್ಯವಸ್ಥಿತ ಮತ್ತು ವೈಜ್ಞಾನಿಕ ಮಾಸ್ಟರ್ ಪ್ಲಾನ್ ತಯಾರಿಸುವ ಅವಕಾಶವನ್ನು ಕೈಚೆಲ್ಲಿರುವ ಅಧಿಕಾರಿಗಳು, ಅವಳಿ ನಗರದ ಬೆಳವಣಿಗೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದಾರೆ. ಈ ಯೋಜನೆ ಮೂಲಕ ಜನಜೀವನ ಇನ್ನಷ್ಟು ಯಾತನಮಯವಾಗಲಿದೆ. ತರಾತುರಿಯಲ್ಲಿ ಮಾಸ್ಟರ್ ಪ್ಲಾನ್ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿರುವುದರ ಹಿಂದೆ ಅಧಿಕಾರಿಗಳ ಪ್ರಾಮಾಣಿಕತೆ ಕುರಿತು ಅನುಮಾನ ಮೂಡಿವೆ. ಶ್ರೀಮಂತರ ಹಾಗೂ ಬಿಲ್ಡರ್ ಪರವಾಗಿರುವ ಮಾಸ್ಟರ್ ಪ್ಲಾನ್‌ ಕುರಿತು ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳದಿಂದ ಸರ್ಕಾರ ಸಮಗ್ರ ತನಿಖೆ ನಡೆಸಬೇಕು’ ಎಂದು ಡಾ. ದಾಬಡೆ ಒತ್ತಾಯಿಸಿದರು.

ವಿ.ಆರ್.ಪಾಟೀಲ, ಗಂಗಾಧರ ಬಡಿಗೇರ, ರಾಜು ಹಿರೇಒಡೆಯರ್, ರಸೂಲ್ ನದಾಫ್, ಶ್ರೀಶೈಲ ಗೌಡ ಕಮತರ, ನಾಗಪ್ಪ ಹುಂಡಿ, ದಿವಾನ ಬಳ್ಳಾರಿ, ಮೋಹನ ಅರಕಸಾಲಿ ಇದ್ದರು.

ಪ್ರಮುಖ ಸುದ್ದಿಗಳು