ಎಲ್ಲಾ ಮಕ್ಕಳಿಗೂ ‘ಕಾಸರಗೋಡು’ ಸಿನಿಮಾ ತೋರಿಸುವಾಸೆ: ರಿಷಭ್‌ ಶೆಟ್ಟಿ

ಧಾರವಾಡ: ‘ಸರ್ಕಾರಿ ಕನ್ನಡ ಶಾಲೆ ಉಳಿವಿಗಾಗಿ ಕನ್ನಡ ಶಾಲೆ ಉಳಿಸಿ ತಂಡದೊಂದಿಗೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರವನ್ನು ರಾಜ್ಯದಾದ್ಯಂತ ಎಲ್ಲ ಶಾಲೆಗಳಲ್ಲಿ ತೋರಿಸುವ ಯೋಜನೆ ಹಾಕಿಕೊಳ್ಳಲಾಗುವುದು’ ಎಂದು ಚಿತ್ರದ ನಿರ್ದೇಶಕ ರಿಷಭ್‌ ಶೆಟ್ಟಿ ತಿಳಿಸಿದರು.

‘ಪ್ರಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಚಿತ್ರವನ್ನು ತೋರಿಸುವ ಯೋಜನೆ ಇದೆ. ನಂತರ ಅವರಿಂದ ಒಪ್ಪಿಗೆ ಪಡೆದು ರಾಜ್ಯದಾದ್ಯಂತ ಚಿತ್ರವನ್ನು ತೋರಿಸಿ ಮಕ್ಕಳಲ್ಲಿ ಕನ್ನಡ ಶಾಲೆಯ ಜಾಗೃತಿ ಮೂಡಿಸಲಾಗುವುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರವಾಗಿದೆ. ಚಿತ್ರ ನೋಡುವಾಗ ತಮ್ಮ ಬಾಲ್ಯ ಹಾಗೂ ಶಾಲೆಯ ದಿನಗಳನ್ನು ಕಲ್ಪನೆ ಮಾಡಿಕೊಳ್ಳುವುದರ ಜೊತೆಗೆ ಇಂದಿನ ಸರ್ಕಾರಿ ಶಾಲೆಗಗಳ ವಾಸ್ತವ ಸ್ಥಿತಿಯ ಕುರಿತು ಚಿಂತಿಸುವಂತೆ ಮಾಡುತ್ತದೆ. ಸರ್ಕಾರಿ ಶಾಲೆಯ ನೆಲಗಟ್ಟಿನಲ್ಲಿ ಕಾಸರಗೋಡು ಕನ್ನಡ ನಾಡಿನ ಒಂದು ಭಾಗ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂದು ತಿಳಿಸಿದರು.

‘ಸಿನಿಮಾ ಪ್ರೇಕ್ಷಕನ ಭಾವ ಆದಾಗ ಮಾತ್ರ ಅದು ನಮ್ಮ ಚಿತ್ರವಾಗುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ಪಾಟೀಲ ಪುಟ್ಟಪ್ಪ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ಕನ್ನಡ ಶಾಲೆಯೇ ಚಿತ್ರದ ಪ್ರಮುಖ ವಿಷಯವಾದರೂ, ಕಾಸರಗೋಡು ಕರ್ನಾಟಕದ್ದೇ ಭಾಗ ಎಂದು ತೋರಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಚಿತ್ರಕ್ಕೆ ₹2ಕೋಟಿ ಖರ್ಚಾಗಿದೆ. ಈಗಾಗಲೇ ಚಿತ್ರ ₹10ಕೋಟಿ ಗಳಿಸಿದೆ’ ಎಂದು ರಿಷಭ್‌ ಶೆಟ್ಟಿ ಮಾಹಿತಿ ನೀಡಿದರು.

ಗಿರೀಶ ಪೂಜಾರ, ಚಿತ್ರತಂಡದ ಪ್ರಮೋದ ಶೆಟ್ಟಿ, ರಾಜು ನಿನಾಸಂ ಇದ್ದರು.

ಪ್ರಮುಖ ಸುದ್ದಿಗಳು