ಕುಂದಾನಗರಿಯಲ್ಲಿ ಗೌರಿ ಮೂರ್ತಿಗಿಂತ ಕಳಸಕ್ಕೆ ಪೂಜೆ!

ಬೆಳಗಾವಿ: ಗಣೇಶ ಚತುರ್ಥಿ ಸಂದರ್ಭದಲ್ಲಿ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಗಣೇಶನೊಂದಿಗೆ ಗೌರಿಯ ಮೂರ್ತಿಗೂ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. 3, 5 ಅಥವಾ 11 ದಿನಗಳ ನಂತರ ಎರಡು ಮೂರ್ತಿಗಳನ್ನೂ ಶ್ರದ್ಧಾಭಕ್ತಿಯಿಂದ ವಿಸರ್ಜನೆ ಮಾಡಲಾಗುತ್ತದೆ. ಆದರೆ, ಕುಂದಾನಗರಿಯಲ್ಲಿ ಗೌರಿ ಮೂರ್ತಿ ಆರಾಧಿಸುವುದು ಕಡಿಮೆ.

ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಗರಗಳಲ್ಲಿ ಬೆಳಗಾವಿ ರಾಜ್ಯದಲ್ಲಿಯೇ ಹೆಸರು ಗಳಿಸಿದೆ. ಪ್ರತಿ ವರ್ಷ 350ಕ್ಕೂ ಹೆಚ್ಚು ಪೆಂಡಾಲ್‌ಗಳಲ್ಲಿ ಸಾರ್ವಜನಿಕರು ಆಕರ್ಷಕ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಈ ಪೆಂಡಾಲ್‌ಗಳಲ್ಲಿ ಹಿಂದಿನಿಂದಲೂ ತಾಯಿ ಗೌರಿಗಿಂತ ಪುತ್ರ ಗಣೇಶನಿಗಷ್ಟೇ ಅಗ್ರ ಪೂಜೆ ಸಲ್ಲಿಸಲಾಗುತ್ತದೆ.

ಹಿಂದಿನಿಂದಲೂ ಇಲ್ಲ

ಗೌರಿ ಹಬ್ಬ ಅಂಗವಾಗಿ ಮಹಿಳೆಯರು ಮನೆಗಳಲ್ಲಷ್ಟೇ ಗೌರಿಯನ್ನು ಪೂಜಿಸುತ್ತಾರೆ. ಇದಕ್ಕಾಗಿ ಬಹುತೇಕರು ಮೂರ್ತಿಗಳನ್ನು ತರುವುದಿಲ್ಲ. ವರಮಹಾಲಕ್ಷ್ಮಿ ಹಬ್ಬದ ಮಾದರಿಯಲ್ಲಿ ಕಳಸಕ್ಕೆ ಪೂಜೆ ಮಾಡುತ್ತಾರೆ. ಕಳಸದಲ್ಲಿ ತೆಂಗಿನಕಾಯಿ ಇಟ್ಟು ಅದಕ್ಕೆ ಗೌರಿಯ ಮುಖವಾಡವನ್ನು ಕಟ್ಟಿ ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸುತ್ತಾರೆ.

ಹೀಗಾಗಿ, ಇಲ್ಲಿನ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳಿಗಷ್ಟೇ ಬೇಡಿಕೆ ಕಂಡುಬಂದಿದೆ. ಒಂದಿಬ್ಬರು ಮೂರ್ತಿಕಾರರ ಬಳಿಯಷ್ಟೇ ಗೌರಿ ಮೂರ್ತಿಗಳು ಸಿಗುತ್ತವೆ. ಇದರಿಂದಾಗಿ, ಆಸಕ್ತರು ಗೌರಿ ಮೂರ್ತಿಗಳಿಗಾಗಿ ಪರದಾಡುವ ಸ್ಥಿತಿ ಇದೆ.

‘ನಗರದಲ್ಲಿ ಹಿಂದಿನಿಂದಲೂ ಗಣೇಶ ಮೂರ್ತಿಗಳಿಗಷ್ಟೇ ಬೇಡಿಕೆ ಇರುತ್ತದೆ. ಹೀಗಾಗಿ, ಗೌರಿ ಮೂರ್ತಿಗಳನ್ನು ಸಿದ್ಧಪಡಿಸುವವರು ಕಡಿಮೆ. ಈ ಬಾರಿಯೂ ವೈವಿಧ್ಯ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಬಹಳಷ್ಟು ಮಂದಿ ಈಗಾಗಲೇ ಮುಂಗಡ ನೀಡಿ ಖರೀದಿಸಿದ್ದಾರೆ’ ಎಂದು ಮೂರ್ತಿಕಾರ ಮಾರುತಿ ಕುಂಬಾರ ಹೇಳುತ್ತಾರೆ.

ಹಣ್ಣಿಗೆ ಬೇಡಿಕೆ

ಗೌರಿ–ಗಣೇಶ ಹಬ್ಬಕ್ಕಾಗಿ ಹಣ್ಣು, ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಮಂಗಳವಾರ ಜನಜಂಗುಳಿ ಕಂಡುಬಂತು. ಗುಲಾಬಿಯ 2 ಅಡಿಯ ಹಾರ ₹ 150ರಿಂದ ₹ 200, ಮೂರಡಿ ಹಾರ ₹ 250ರಿಂದ ₹ 400, 5 ಅಡಿಯ ಹಾರದ ಬೆಲೆ ₹ 350ರಿಂದ 500ಕ್ಕೆ ಏರಿಕೆಯಾಗಿತ್ತು. ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿ ಜೋರಾಗಿತ್ತು.

ಮಲ್ಲಿಗೆ ಹೂ ಮೀಟರ್‌ಗೆ ₹ 100, ಕನಕಾಂಬರ ₹ 50, ಕಾಕಡ ₹ 40 ಇತ್ತು. ಸೇವಂತಿಗೆ ಒಂದು ಮಾರಿಗೆ ₹ 50ಕ್ಕೆ ಏರಿತ್ತು. ಕೆ.ಜಿ ಗುಲಾಬಿಗೆ ₹ 200, ಕಾಕಡಕ್ಕೆ ₹ 400, ಕನಕಾಂಬರಕ್ಕೆ ₹ 600 ಬೆಲೆ ಇತ್ತು. ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹ 80ರಿಂದ ₹ 100 ಇತ್ತು. ಕೆ.ಜಿ. ಶಿಮ್ಲಾ ಸೇಬು ₹ 100ರಿಂದ ₹ 120ಕ್ಕೆ ಹೆಚ್ಚಾಗಿತ್ತು.

‘ತರಕಾರಿಗಳ ಬೆಲೆಯಲ್ಲಿ ಅಂತಹ ಏರಿಕೆಯೇನೂ ಕಂಡುಬಂದಿಲ್ಲ. ಕೆ.ಜಿಗೆ ಸರಾಸರಿ ₹ 5 ಜಾಸ್ತಿಯಾಗಿದೆ. ಬದನೆಕಾಯಿ ₹ 25ರಿಂದ ₹ 30, ಹಸಿಮೆಣಸಿನಕಾಯಿ ₹ 35ರಿಂದ ₹ 40, ಟೊಮೆಟೊ ₹ 10ರಿಂದ 15, ಬೀನ್ಸ್‌ ₹ 40ರಿಂದ 45, ಕ್ಯಾರೆಟ್‌ ₹ 30ರಿಂದ ₹ 35ಕ್ಕೆ ಏರಿಕೆಯಾಗಿದೆ’ ಎಂದು ವ್ಯಾಪಾರಿ ಸೈಯದ್ ಹುದಲಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಮುಖ ಸುದ್ದಿಗಳು