ಇನ್ನೂ ಸ್ವಚ್ಛವಾಗಿಲ್ಲ ‘ಸಿರಿಗೌರಿ’ ಕಲ್ಯಾಣಿ, ನಗರಸಭೆ ಮರೆತಂತಿದೆ

ರಾಮನಗರ: ಗೌರಿ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ. ಆದರೆ ‘ಸಿರಿಗೌರಿ’ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಗರಸಭೆ ಮರೆತಂತೆ ಇದೆ.

ನಗರದ ರಂಗರಾಯರ ದೊಡ್ಡಿ ಕೆರೆಗೆ ಹೊಂದಿಕೊಂಡಂತೆ ನಿರ್ಮಿಸಲಾದ ಸಿರಿಗೌರಿ ಕಲ್ಯಾಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಗಣೇಶ ಮೂರ್ತಿಗಳನ್ನು ವಿಸರ್ಜಿಸುತ್ತ ಬರಲಾಗಿದೆ. ಮೂರನೇ ವರ್ಷದ ಮೂರ್ತಿ ವಿಸರ್ಜನಾ ಕಾರ್ಯಕ್ರಮಕ್ಕೆ ಇನ್ನೂ ಸಿದ್ಧತೆಗಳು ನಡೆದಿಲ್ಲ.

ಕೆರೆಗಳಲ್ಲಿ ದೇವರ ಮೂರ್ತಿಗಳನ್ನು ವಿಸರ್ಜಿಸುವುದರಿಂದ ನೀರಿನ ಮೂಲಗಳು ಮಲಿನವಾಗುತ್ತವೆ. ರಾತ್ರಿ ಹೊತ್ತು ನೀರಿಗೆ ಇಳಿಯುವುದರಿಂದ ಅಪಾಯಗಳು ಸಂಭವಿಸುತ್ತವೆ ಎಂಬ ಕಾರಣಕ್ಕೆ ಈ ಕೆರೆಯ ಬಳಿ 2016ರಲ್ಲಿ ಈ ಕಲ್ಯಾಣಿಯನ್ನು ನಿರ್ಮಿಸಲಾಯಿತು. ರಾಮನಗರ–ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವು ಇದಕ್ಕೆ ತಗುಲುವ ವೆಚ್ಚ ಭರಿಸಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅತಿವೃಷ್ಟಿಯಿಂದಾಗಿ ಈ ಕೆರೆಯ ಕೋಡಿ ಒಡೆದು ಸುತ್ತಲಿನ ಪ್ರದೇಶಕ್ಕೆ ಹಾನಿಯಾಗಿತ್ತು. ಕಲ್ಯಾಣಿಗೆ ಹಾಕಲಾಗಿದ್ದ ಪೈಪ್‌ಗಳೂ ಕಿತ್ತು ಬಂದಿದ್ದವು. ಸದ್ಯ ಕಲ್ಯಾಣಿಗಳ ಮೇಲ್ಬಾಗವನ್ನು ಮಾತ್ರ ಸ್ವಚ್ಛ ಮಾಡಲಾಗಿದೆ. ಆದರೆ ಅದರೊಳಗಿನ ಕಳೆ, ಕೆಸರು ಹಾಗೆಯೇ ತುಂಬಿಕೊಂಡಿದೆ.

ಕೋಡಿ ಪ್ರದೇಶ ದುರಸ್ತಿ: ಸಣ್ಣ ನೀರಾವರಿ ಇಲಾಖೆಯು ವರ್ಷದ ನಂತರ ಕೆರೆ ಕೋಡಿ ಪ್ರದೇಶದ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ಕೊಚ್ಚಿ ಹೋದ ರಸ್ತೆ, ಕೆಳ ಸೇತುವೆ ಪುನರ್‌ ನಿರ್ಮಾಣ ಕಾಮಗಾರಿಯು ಸದ್ಯ ಪ್ರಗತಿಯಲ್ಲಿದೆ. ಕೋಡಿ ಬಿದ್ದ ನೀರು ಹರಿಯುವ ಕಡೆ ಕಲ್ಲುಗಳನ್ನು ಹಾಕಿ ರಸ್ತೆಗೆ ಹೆಚ್ಚು ಹಾನಿಯಾಗದಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಕೆರೆ ಕೋಡಿ ದುರಸ್ತಿಗೆ ಅಗತ್ಯವಾದ ಸುಮಾರು ₹80 ಲಕ್ಷ ಅನುದಾನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತವು ಈಚೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿತ್ತು.

ಪ್ರಮುಖ ಸುದ್ದಿಗಳು