ಸಮರ್ಪಕ ವಿದ್ಯುತ್‌ ಸೌಕರ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಪಟ್ನಾ/ ಔರಂಗಾಬಾದ್‌ (ಪಿಟಿಐ): ಸಮರ್ಪಕ ವಿದ್ಯುತ್‌ ಸೌಕರ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರು, ಭಾರತೀಯ ರೈಲ್ವೆ ವಿದ್ಯುತ್‌ ಕಂಪನಿ ನಿಯಮಿತ ನೌಕರರು ಮತ್ತು ಅವರ ಕುಟುಂಬಸ್ಥರನ್ನು ಮುತ್ತಿಗೆ ಹಾಕಿರುವ ಪ್ರಸಂಗ ನಡೆದಿದೆ. 

150 ನೌಕರರನ್ನು ಸುಮಾರು 300 ಮಂದಿ ಗ್ರಾಮಸ್ಥರು ಭಾನುವಾರದಿಂದ ಸತತ ಮೂರನೇ ದಿನ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. 

ಸುರಾರ್ ಮತ್ತು ನೆರೆಹೊರೆಯ ಗ್ರಾಮಸ್ಥರು ಬಿಆರ್‌ಬಿಸಿಎಲ್‌ ಗೇಟ್‌ ಬಳಿ ಕಲ್ಲು ತೂರಾಟ, ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಗೇಟ್‌ ಒಳಗೆ ಮತ್ತು ಹೊರಗೆ ಪ್ರವೇಶವನ್ನು ಗ್ರಾಮಸ್ಥರು ನಿರ್ಬಂಧಿಸಿದ್ದರು. ಈ ಕಾರಣಕ್ಕೆ ಬಿಆರ್‌ಬಿಸಿಎಲ್‌ಗೆ ಆಡಳಿತ ಮಂಡಳಿ ಗ್ರಾಮಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

‘ಉಪ ವಿಭಾಗದ ಮ್ಯಾಜಿಸ್ಟ್ರೇಟ್‌ ಮತ್ತು ಉಪ ವಿಭಾಗದ ಪೊಲೀಸ್‌ ಅಧಿಕಾರಿ, ಗ್ರಾಮಸ್ಥರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆ ಯಶಸ್ವಿಯಾಗಿಲ್ಲ. ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ. ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ’ ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ರಾಹುಲ್ ರಂಜನ್ ಮಹೀವಾಲ್ ತಿಳಿಸಿದ್ದಾರೆ. 

ಎನ್‌ಟಿಪಿಸಿ ಮತ್ತು ರೈಲ್ವೆ ಸಹಭಾಗಿತ್ವದಲ್ಲಿ ಒಂದು ಸಾವಿರ ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಘಟಕವನ್ನು ಔರಂಗಬಾದ್‌ನಲ್ಲಿ ಸ್ಥಾಪಿಸಲಾಗಿದೆ. 

ಪ್ರಮುಖ ಸುದ್ದಿಗಳು