ಚದುರಂಗದ ಚತುರ ಪೋರ

ಹೊಸಪೇಟೆ: ಈ ಪೋರನಿಗೆ ಈಗ 13 ವರ್ಷ. ಆದರೆ, ಚದುರಂಗದಲ್ಲಿ ಈತ ಬಲು ಚತುರ. ಎಂತಹವರನ್ನು ನಿಮಿಷಗಳಲ್ಲೇ ಸೋಲಿಸಿ ಬಿಡಬಲ್ಲ ಚತುರಮತಿ.

ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಬಿ. ಸುಹಾಸ್‌ಗೆ ಬಾಲ್ಯದಿಂದಲೂ ಚೆಸ್‌ ಆಟದ ಬಗ್ಗೆ ವಿಶೇಷ ಒಲವು. ಆದರೆ, ಈತನ ಊರಿನಲ್ಲಿ ಚದುರಂಗ ಆಡುವವರು ಇರಲಿಲ್ಲ. ಹೇಳಿಕೊಡುವವರು ಇರಲಿಲ್ಲ. ಆದರೆ, ಛಲದಂಕ ಮಲ್ಲನಂತೆ ತಾನೊಬ್ಬನೇ ಆಟವಾಡಲು ಶುರು ಮಾಡಿದ. ನಂತರ ತಂದೆಯ ಮೊಬೈಲ್‌ನಲ್ಲಿ ಆಟದ ನಿಯಮಗಳನ್ನು ತಿಳಿದುಕೊಂಡ.

ಹತ್ತು ವರ್ಷದವನಿದ್ದಾಗ ಶಾಲೆಯಲ್ಲಿ ಆಯೋಜಿಸಿದ್ದ ಚೆಸ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಮುಡಿಗೇರಿಸಿಕೊಂಡ. ಅಲ್ಲಿಂದ ವಿಜಯದುಂದುಬಿ ಮುಂದುವರಿಯಿತು. ವಲಯ, ತಾಲ್ಲೂಕು, ಜಿಲ್ಲಾ ಮಟ್ಟದ ಸ್ಪರ್ಧೆ ಹೀಗೆ ಒಂದೊಂದೇ ಮೆಟ್ಟಿಲುಗಳನ್ನು ದಾಟಿ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಅಲ್ಲಿ ಗೆಲುವಿನ ನಗೆ ಬೀರಿದ್ದಾನೆ.

ಎಲೈಟ್‌ ಚೆಸ್‌ ಅಕಾಡೆಮಿಯು ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ 13 ಹಾಗೂ 14 ವರ್ಷ ವಯಸ್ಸಿನವರ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ತೋರಿ ಪ್ರಶಸ್ತಿ ಜಯಿಸಿದ್ದಾನೆ. ಈಗ ಈತನ ಮುಂದಿನ ಗುರಿ ರೇಟೇಡ್‌ ಪ್ಲೇರ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧನೆ ಮಾಡುವುದು. ಇಷ್ಟು ದಿನ ತರಬೇತಿಯಿಲ್ಲದೆ ಸಾಧನೆಯ ಮೆಟ್ಟಿಲು ಏರಿರುವ ಸುಹಾಸ್‌ ಪ್ರಸಕ್ತ ಸಾಲಿನಿಂದ ತರಬೇತಿ ಪಡೆಯುತ್ತಿದ್ದಾನೆ. ಅದಕ್ಕೆ ಉತ್ತಮ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.

ಯುಟ್ಯೂಬ್‌ ನೋಡಿಕೊಂಡು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾನೆ. ಎಂಟನೇ ತರಗತಿಯಲ್ಲಿ ಓದುತ್ತಿರುವ ಈತ, ಆಟದ ಜತೆಗೆ ಓದಿನಲ್ಲೂ ಮುಂದು. ಸುಹಾಸ್‌ಗೆ ಅವರ ತಂದೆ ಬಸವರಾಜ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಮಗ ಚೆಸ್‌ನಲ್ಲಿ ಉತ್ತಮ ಸಾಧನೆ ಮಾಡಿ, ಊರಿಗೆ ಕೀರ್ತಿ ತರಬೇಕು ಎನ್ನುವುದು ಅವರ ಅಭಿಲಾಷೆ.

‘ಓದು ಮುಗಿದ ಬಳಿಕ ಬಿಡುವಿನ ಸಮಯದಲ್ಲಿ ಒಬ್ಬನೇ ಚೆಸ್‌ ಆಡುತ್ತಾನೆ. ಎರಡು ಕಾಯಿನ್‌ಗಳನ್ನು ಒಬ್ಬನೇ ಆಡುತ್ತಾನೆ. ಎಲ್ಲೇ ಚೆಸ್‌ ಸ್ಪರ್ಧೆ ಆಯೋಜಿಸಿದರೆ ಭಾಗವಹಿಸುತ್ತಾನೆ. ಅವನಲ್ಲಿರುವ ಉತ್ಸಾಹ ನೋಡಿ, ಆತನಿಗೆ ಎಲ್ಲ ರೀತಿಯ ಬೆಂಬಲ ಕೊಡುತ್ತಿದ್ದೇನೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇರುತ್ತದೆಯೋ ಅದರಲ್ಲಿ ಮುಂದುವರಿಯಲು ಬಿಡುವುದು ಒಳ್ಳೆಯದು ಎಂಬುದು ನನ್ನ ಭಾವನೆ’ ಎನ್ನುತ್ತಾರೆ ಬಸವರಾಜ.

‘ಮಗ ಚೆಸ್‌ ಆಡಲು ಶುರು ಮಾಡಿದ ನಂತರ ಓದಿನಲ್ಲಿ ಬಹಳ ಏಕಾಗ್ರತೆ ಬಂದಿದೆ. ಓದು ಇಲ್ಲವೋ ಚೆಸ್‌ ಆಡುವುದು ಆತನ ದಿನಚರಿ. ಮಾತು ಕಡಿಮೆ. ಮನೆಗೆ ಯಾರಾದರೂ ಬಂದರೆ ಅವರೊಂದಿಗೆ ಚೆಸ್‌ ಆಡಲು ಆರಂಭಿಸುತ್ತಾನೆ. ಅದೇ ಅವನಿಗೆ ಪ್ರಪಂಚವಾಗಿದೆ’ ಎಂದು ಹೇಳಿದರು.

ಪ್ರಮುಖ ಸುದ್ದಿಗಳು