ವಿಧಾನ ಪರಿಷತ್‌ನ ಉಪ ಚುನಾವಣೆ: ಸುನೀಲಗೌಡ ಬೆಂಬಲಿಗರ ವಿಜಯೋತ್ಸವ

ವಿಜಯಪುರ: ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ, ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಸುನೀಲಗೌಡ ಬಿ.ಪಾಟೀಲ ಗೆಲುವು ಸಾಧಿಸುತ್ತಿದ್ದಂತೆ, ಕಾಂಗ್ರೆಸ್‌ ಕಾರ್ಯಕರ್ತರು, ಬೆಂಬಲಿಗರು ಮಂಗಳವಾರ ವಿಜಯೋತ್ಸವ ಆಚರಿಸಿದರು.

ಮತ ಎಣಿಕೆ ನಡೆದ ದರಬಾರ ಪ್ರೌಢಶಾಲಾ ಮುಂಭಾಗ ಬೆಂಬಲಿಗರು ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸಿದರು. ಸೊಲ್ಲಾಪುರ ರಸ್ತೆಯಲ್ಲಿರುವ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ನಿವಾಸ, ವಿಜೇತ ಅಭ್ಯರ್ಥಿ ಸುನೀಲಗೌಡ ಬಿ.ಪಾಟೀಲ ನಿವಾಸದ ಬಳಿ ಸೇರಿದಂತೆ ಆಶ್ರಮ ರಸ್ತೆಯಲ್ಲಿ ಪಾಟೀಲ ಹೊಂಡಾ ಶೋ ರೂಂ ಬಳಿಯೂ ಗುಲಾಲ್‌ ಎರಚಿ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.

ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದ ಮುಂಭಾಗವೂ ಜಮಾಯಿಸಿದ ಸುನೀಲಗೌಡ ಬೆಂಬಲಿಗರು, ಕಾಂಗ್ರೆಸ್‌ ಕಾರ್ಯಕರ್ತರು ವಿಶೇಷ ಪೂಜೆಗೈದು, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಬಹುತೇಕರು ವಿಜೇತ ಅಭ್ಯರ್ಥಿಗೆ ಶುಭ ಕೋರಿದರು.

ಶೇ 50ಕ್ಕಿಂತ ಹೆಚ್ಚು ಮತ ಗಳಿಕೆ:

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ತಮ್ಮ ಸುನೀಲಗೌಡ ಬಿ.ಪಾಟೀಲ ಚಲಾವಣೆಗೊಂಡಿದ್ದ 8111 ಮತಗಳಲ್ಲಿ ಶೇ 50ಕ್ಕೂ ಹೆಚ್ಚಿನ (4819) ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಜಯಶಾಲಿಯಾದರು.

ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ 2779, ಪಕ್ಷೇತರ ಅಭ್ಯರ್ಥಿಗಳಾದ ಕಾಂತಪ್ಪ ಶಂಕ್ರಪ್ಪ ಇಂಚಗೇರಿ 19, ದುರ್ಗಪ್ಪ ಭರಮಪ್ಪ ಸಿದ್ದಾಪುರ 12, ಮಲ್ಲಿಕಾರ್ಜುನ ಕೆಂಗನಾಳ 4, ಜಾಮೀನ್ದಾರ ಮಾರುತಿ ಹಣಮಪ್ಪ 11, ಶರಣಪ್ಪ ವಿಶ್ವಾಸರಾಯ ಕನ್ನೊಳ್ಳಿ 13 ಮತಗಳನ್ನು ಪಡೆದಿದ್ದಾರೆ. 454 ಮತಗಳು ತಿರಸ್ಕೃತಗೊಂಡಿವೆ.

ಪ್ರಮುಖ ಸುದ್ದಿಗಳು