ಆನೆಕಾಲು ರೋಗ, ನಿರ್ಲಕ್ಷ್ಯ ಬೇಡ: ಡಿ.ಸಿ ಮನವಿ

ಬಾಗಲಕೋಟೆ: ‘ಸಾಮೂಹಿಕವಾಗಿ ಮಾತ್ರೆ ಸೇವನೆ ಮೂಲಕ ಬಾಗಲಕೋಟೆಯನ್ನು ಆನೆಕಾಲು ರೋಗ ಮುಕ್ತ ಜಿಲ್ಲೆಯಾಗಿಸಲು’ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸಾರ್ವಜನಿಕರಿಗೆ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಆನೆಕಾಲು ರೋಗ ನಿರ್ಮೂಲನೆ ಕುರಿತು ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯ ಹುನಗುಂದ ಮತ್ತು ಬಾದಾಮಿ ತಾಲ್ಲೂಕುಗಳಲ್ಲಿ ಸೆಪ್ಟೆಂಬರ್ 24 ರಿಂದ ಆನೆ ಕಾಲು ರೋಗದ ವಿರುದ್ಧ ಮೂರನೇ ಸುತ್ತಿನ ಸಾಮೂಹಿಕವಾಗಿ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡುವ ಡಿಇಸಿ ಮಾತ್ರೆಗಳನ್ನು ನುಂಗುವಂತೆ’ ಮನವಿ ಮಾಡಿದರು. 

‘ಮನೆ, ಮನೆ ಭೇಟಿ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಎದುರಿಗೆ ನಿಂತೇ ಆಯಾ ಮನೆಯವರಿಗೆ ಡಿ.ಇ.ಸಿ ಮಾತ್ರೆಗಳನ್ನು ನುಂಗಿಸಬೇಕು. ಜಂತುಹುಳು ನಿರ್ಮೂಲನೆಗೆ ಅಲ್ಬೆಂಡಾಜೋಲ್ ಮಾತ್ರೆ ನೀಡಬೇಕು. ಆಗ ಮಾತ್ರ ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಸಾಧ್ಯ’ ಎಂದರು.

ವೈದ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ, ‘ಕಳೆದ 15 ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಆನೆಕಾಲು ರೋಗ ನಿರ್ಮೂಲನೆಯಾಗಿಲ್ಲ. ಮಾತ್ರೆಗಳನ್ನು ಸೇವಿಸದೇ ಇರುವುದು ಇದಕ್ಕೆ ಕಾರಣ. ಆದ್ದರಿಂದ ರೋಗದ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

‘ಬಾದಾಮಿ ಮತ್ತು ಹುನಗುಂದ ತಾಲ್ಲೂಕುಗಳಲ್ಲಿ ಒಟ್ಟು 7,19,025 ಜನರ ಪೈಕಿ 6,61,461 ಜನರಿಗೆ ಮಾತ್ರೆಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ಕಾಗಿ 90 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಜಿಲ್ಲೆಯ ಕಾರ್ಯಕ್ರಮ ಅಧಿಕಾರಿಗಳು ಎರಡು ತಾಲ್ಲೂಕುಗಳಲ್ಲಿ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಆರೋಗ್ಯ ಕೇಂದ್ರ ಮಟ್ಟದಲ್ಲಿ ಹಾಗೂ ತುರ್ತು ಚಿಕಿತ್ಸಾ ತಂಡಗಳನ್ನು ರಚಿಸಲಾಗಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ಎನ್.ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಬಸವರಾಜ ಶಿರೂರ, ಡಾ. ಮುಕುಂದ ಗಲಗಲಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ಪಟ್ಟಣಶೆಟ್ಟಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ತೇಲಸಂಗ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿಗಳು