ಬೆಳೆ ವಿಮೆ ತಾರತಮ್ಯ ಸರಿಪಡಿಸಲು ಆಗ್ರಹ

ಬಾಗಲಕೋಟೆ: ’ವಿಮಾ ಕಂಪೆನಿಯ ಉನ್ನತ ಅಧಿಕಾರಿಯನ್ನು 30 ದಿನಗಳೊಳಗಾಗಿ ಕರೆಸಿ ರೈತರೊಂದಿಗೆ ಸಭೆ ನಡೆಸುವುದಾಗಿ’ ಜಿಲ್ಲಾಡಳಿತ ನೀಡಿದ ಭರವಸೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಬೇವೂರು ಹಾಗೂ ಹಳ್ಳೂರ ಗ್ರಾಮಸ್ಥರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ನಡೆಸಿದ ಪ್ರತಿಭಟನೆ ಹಿಂದಕ್ಕೆ ಪಡೆದರು.

2016–17ನೇ ಸಾಲಿನಲ್ಲಿ ತೊಗರಿ, ಕಡಲೆ ಮತ್ತು ಜೋಳಕ್ಕೆ ಬೆಳೆ ವಿಮೆ ಪ್ರಿಮಿಯಮ್ ತುಂಬಿದ್ದೇವೆ. ಇದುವರೆಗೂ ವಿಮಾ ಮೊತ್ತ ಖಾತೆಗೆ ಜಮಾ ಆಗಿಲ್ಲ ಎಂದು ರೈತರು ಆರೋಪಿಸಿದರು. ವಿಮಾ ಕಂಪೆನಿಗೆ ಜಿಲ್ಲಾಡಳಿತ ನೀಡಿದ್ದ ಗಡುವಿನ ಅವಧಿ ಮುಗಿದಿದೆ. ಆದರೂ ಅನ್ಯಾಯ ಸರಿಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಮಾ ಕಂಪೆನಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಧರಣಿ ಕುಳಿತರು. ಕಾರ್ಯ ನಿಮಿತ್ತ ಜಿಲ್ಲಾಧಿಕಾರಿ ರಬಕವಿ–ಬನಹಟ್ಟಿಗೆ ತೆರಳಿದ್ದರು. ಹಾಗಾಗಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಸ್ಥಳಕ್ಕೆ ಬಂದು ರೈತರ ಮನವೊಲಿಕೆಗೆ ಮುಂದಾದರು.

ಲಿಖಿತವಾಗಿ ಬರೆದುಕೊಟ್ಟಿದ್ದರು: ’ಬೆಳೆ ವಿಮೆ ನೀಡಿಕೆಯಲ್ಲಿ ಆಗಿರುವ ತಾರತಮ್ಯದ ಬಗ್ಗೆ ದೂರನ್ನು ಪರಿಗಣಿಸಿದ್ದ ಜಿಲ್ಲಾಧಿಕಾರಿ ಆಗಸ್ಟ್ 18ರಂದು ವಿಮಾ ಕಂಪೆನಿ ಅಧಿಕಾರಿಯನ್ನು ಕರೆಸಿ ನಮ್ಮೊಂದಿಗೆ ಸಭೆ ನಡೆಸಿದ್ದರು. ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಆ ಅಧಿಕಾರಿ ಲಿಖಿತವಾಗಿ ಬರೆದುಕೊಟ್ಟಿದ್ದರು. ಆದರೆ ಗಡುವಿನ ಅವಧಿ ಮುಗಿದರೂ ಸಮಸ್ಯೆ ಪರಿಹರಿಸಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

’ಸಮಸ್ಯೆ ಪರಿಹರಿಸುವ ಬಗ್ಗೆ ಇಲ್ಲಿಯವರೆಗೂ ಗ್ರಾಮ ಪಂಚಾಯ್ತಿ, ಗ್ರಾಮ ಲೆಕ್ಕಾಧಿಕಾರಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗಾಗಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗಾಗಲಿ ಸಂಬಂಧಪಟ್ಟವರು ಮಾಹಿತಿ ನೀಡಿಲ್ಲ. ಹಾಗಾಗಿ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಡಳಿತದಿಂದ ಈ ಬಗ್ಗೆ ಲಿಖಿತ ಭರವಸೆ ದೊರೆಯುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಕುಳಿತರು. ಕೊನೆಗೆ ಡಿವೈಎಸ್‌ಪಿ ಎಸ್.ಬಿ.ಗಿರೀಶ ಹಾಗೂ ಶಂಕರಗೌಡ ಸೋಮನಾಳ ಸಂಧಾನ ನಡೆಸಿದರು. ಸಭೆ ಆಯೋಜಿಸುವ ಬಗ್ಗೆ ಹಿಂಬರಹ ನೀಡಿ ರೈತರನ್ನು ಶಾಂತಗೊಳಿಸಿದರು.  ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಭವನದ ಎದುರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

 

 

ಪ್ರಮುಖ ಸುದ್ದಿಗಳು