ಜಿಮ್ಸ್ ಆವರಣ: ಕುಡಿವ ನೀರಿನ ಬೇಡಿಕೆ 20 ಲಕ್ಷ ಲೀಟರ್; ಪೂರೈಕೆ 5.25 ಲಕ್ಷ ಲೀಟರ್!

ಕಲಬುರ್ಗಿ: ‘ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಆವರಣದಲ್ಲಿರುವ ವೈದ್ಯಕೀಯ ಸಂಸ್ಥೆಗಳಿಗೆ ಪ್ರತಿ ನಿತ್ಯ 20 ಲಕ್ಷ ಲೀಟರ್ ನೀರಿನ ಬೇಡಿಕೆ ಇದೆ. ಆದರೆ, ಸದ್ಯ ಎರಡು ದಿನಕ್ಕೊಮ್ಮೆ 5.25 ಲಕ್ಷ ಲೀಟರ್ ನೀರು ಮಾತ್ರ ಸರಬರಾಜು ಆಗುತ್ತಿದೆ’ ಎಂದು ಜಿಮ್ಸ್ ಅಧಿಕಾರಿಗಳು ಹೇಳಿದರು.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯ ಅನುದಾನದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

‘ಮುಂಬರುವ ದಿನಗಳಲ್ಲಿ ಜಿಮ್ಸ್‌ 1,300 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆ ಹೊಂದಲಿದೆ. ಆಗ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಜಿಮ್ಸ್ ಆವರಣದಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು’ ಎಂದು ಮನವಿ ಮಾಡಿದರು.

ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ ಯಾದವ್ ಮಾತನಾಡಿ, ‘ಜಿಮ್ಸ್ ಆವರಣದಲ್ಲಿ ಹೊಸದಾಗಿ ನೀರಿನ ಟ್ಯಾಂಕ್ ನಿರ್ಮಿಸಲು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹಾಗೂ ಜಿಮ್ಸ್ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಮತ್ತು ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ 200 ಆಸನ ಸಾಮರ್ಥ್ಯದ ಸುಸಜ್ಜಿತ ಸಭಾಂಗಣ ನಿರ್ಮಿಸಲು ಮಂಡಳಿಯು 2016-17ರಲ್ಲಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದ್ದರಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ನೋಟಿಸ್ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರೊಬೇಷನರಿ ಐಎಎಸ್‌ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ಜಿಮ್ಸ್‌ ನಿರ್ದೇಶಕ ಡಾ.ಉಮೇಶ ಎಸ್.ಪಿ., ಕರ್ನಾಟಕ ಆರೋಗ್ಯ ವ್ಯವಸ್ಥೆ ಸುಧಾರಣಾ ಅಭಿವೃದ್ಧಿ ಯೋಜನೆ (ಕೆಎಚ್‌ಎಸ್‌ಆರ್‌ಡಿಪಿ) ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಷ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಸುಬ್ರಹ್ಮಣ್ಯ, ಪಾಲಿಕೆ ಕಾರ್ಯನಿವಾಹಕ ಎಂಜಿನಿಯರ್ ಆರ್.ಪಿ.ಜಾಧವ ಇದ್ದರು.

ಪ್ರಮುಖ ಸುದ್ದಿಗಳು