ಅತ್ಯಾಚಾರ ಆರೋಪ ಪ್ರಕರಣ: ರಾಘವೇಶ್ವರ ಶ್ರೀ ಮಧ್ಯಂತರ ಅರ್ಜಿ ತಿರಸ್ಕೃತ

ಬೆಂಗಳೂರು: ‘ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ತನಿಖಾಧಿಕಾರಿ ಸಂಗ್ರಹಿಸಿದ್ದ ಸಾಕಷ್ಟು ದಾಖಲೆಗಳನ್ನು ದೋಷಾರೋಪ ಪಟ್ಟಿ ಸಲ್ಲಿಕೆ ವೇಳೆ ನ್ಯಾಯಾಲಯಕ್ಕೆ ಒದಗಿಸಿಲ್ಲ’ ಎಂಬ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಆಕ್ಷೇಪಣೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

‘ಈ ಕುರಿತಂತೆ ಸಂಪೂರ್ಣ ಕೇಸ್‌ ಡೈರಿ, ಬಿ ರಿಪೋರ್ಟ್‌ ಮತ್ತು ಸಿಐಡಿ ಸಂಗ್ರಹಿಸಿರುವ ಎಲ್ಲ ಹೇಳಿಕೆಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಸ್ವಾಮೀಜಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

ಅತ್ಯಾಚಾರ ಆರೋಪ ಪ್ರಕರಣದಿಂದ ಸ್ವಾಮೀಜಿ ಅವರನ್ನು ಕೈಬಿಟ್ಟಿರುವ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಮತ್ತು ಸಂತ್ರಸ್ತೆ ಪ್ರತ್ಯೇಕವಾಗಿ ಸಲ್ಲಿಸಿರುವ ಪರಿಶೀಲನಾ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ ಸ್ವಾಮೀಜಿ ಪರ ಹಾಜರಿದ್ದ ಹಿರಿಯ ವಕೀಲ ರವಿ ಬಿ ನಾಯಕ್, ‘ಅರ್ಜಿದಾರರು ಸ್ವಾಮೀಜಿ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಆದ್ದರಿಂದ ತನಿಖಾಧಿಕಾರಿ ಸಂಗ್ರಹಿಸಿರುವ ದಾಖಲೆಗಳನ್ನು ನ್ಯಾಯಪೀಠಕ್ಕೆ ಹಾಜರುಪಡಿಸಲು ನಿರ್ದೇಶಿಸಬೇಕು. ಇಲ್ಲವಾದರೆ ಸ್ವಾಮೀಜಿಗೆ ಭರಿಸಲಾಗದ ನಷ್ಟವುಂಟಾಗುತ್ತದೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈಗಾಗಲೇ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಪ್ರಕರಣದಿಂದ ಕೈಬಿಟ್ಟಿದೆ. ಈಗ ಪುನಃ ದಾಖಲೆಗಳ ಪರಿಶೀಲನೆ ಕೋರಿಕೆ ನ್ಯಾಯಸಮ್ಮತವಲ್ಲ. ಸಂತ್ರಸ್ತೆ ಸಲ್ಲಿಸಿರುವ ಕ್ರಿಮಿನಲ್ ಪರಿಶೀಲನಾ ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆ’ ಎಂಬ ಅಭಿಪ್ರಾಯದೊಂದಿಗೆ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿತು.

ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್.ಪೊನ್ನಣ್ಣ ಹಾಜರಿದ್ದರು.

ಪ್ರಮುಖ ಸುದ್ದಿಗಳು