ಹೊಸಪೇಟೆ: ಗೋಧಿಯಲ್ಲಿ ಅರಳಿದ ವಿಘ್ನ ನಿವಾರಕ

ಹೊಸಪೇಟೆ: ಈ ಸಲದ ಗಣೇಶ ಉತ್ಸವದಲ್ಲಿ ಇಲ್ಲಿನ ದೇವಾಂಗಪೇಟೆಯ ‘ಗೋಧಿ ಗಣಪ’ ಎಲ್ಲರನ್ನೂ ಆಕರ್ಷಿಸಲಿದೆ.

ಹೆಸರೇ ಹೇಳುವಂತೆ ಸಂಪೂರ್ಣವಾಗಿ ಗೋಧಿ ಕಾಳುಗಳಿಂದ ಗಣೇಶನ ಪ್ರತಿಮೆಯನ್ನು ತಯಾರಿಸಲಾಗಿದೆ. ಸ್ಥಳೀಯ ‘ಉದ್ಭವ ಯುವಕರ ಸಂಘ’ದ ಪದಾಧಿಕಾರಿಗಳು ಒಂದು ತಿಂಗಳಿಂದ ಬೆವರು ಹರಿಸಿ ಅದಕ್ಕೆ ರೂಪ ಕೊಟ್ಟಿದ್ದಾರೆ. ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದ್ದು, ಗುರುವಾರ ಬಡಾವಣೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

ಆರು ಅಡಿ ಎತ್ತರ, ಮೂರು ಅಡಿ ಅಗಲದ ಪ್ರತಿಮೆಯನ್ನು ಕೆಂಪು ಮಣ್ಣು, ಹುಲ್ಲು ಹಾಗೂ ಬಿದಿರು ಉಪಯೋಗಿಸಿ ತಯಾರಿಸಲಾಗಿದೆ. ಹೊರಭಾಗಕ್ಕೆ ಗೋಧಿಯ ಕಾಳುಗಳನ್ನು ಅಂಟಿಸಲಾಗಿದೆ. ಗಣಪನ ಕಿರೀಟಕ್ಕೆ ಪಾಲಿಶ್‌ ಮಾಡಿದ ಗೋಧಿ ಉಪಯೋಗಿಸಿದರೆ, ಸೊಂಡಿಲಿಗೆ ರಾಜಸ್ತಾನದ ಕಂದು ಬಣ್ಣದ ಗೋಧಿ ಬಳಸಲಾಗಿದೆ. ಸೊಂಟ ಹಾಗೂ ದೇಹದ ಇತರೆ ಭಾಗಕ್ಕೆ ಸಾಮಾನ್ಯ ಗೋಧಿಯ ಲೇಪನ ಮಾಡಲಾಗಿದೆ. ನೀರಿನಲ್ಲಿ ನೆನೆಯಿಟ್ಟು, ಒಣಗಿಸಿದ ನಂತರ ದಪ್ಪವಾದ ಗೋಧಿಯನ್ನು ಸೊಂಟದ ಸುತ್ತಲೂ ಅಂಟಿಸಲಾಗಿದೆ. ಸೊಂಟದ ಕೆಳಭಾಗದಲ್ಲಿ ಗೋಧಿ ಮಂಡಕ್ಕಿ, ಶಾಲನ್ನು ಹೋಳಿಗೆ ರವೆಯಿಂದ ಅಲಂಕರಿಸಲಾಗಿದೆ. ಕಣ್ಣಿಗೆ ಕಾಡಿಗೆ ಹಚ್ಚಲಾಗಿದೆ. ಕಾಡಿಗೆಯಿಂದಲೇ ಇಲಿಗೆ ಬಣ್ಣ ಬಳಿಯಲಾಗಿದೆ.

ಒಟ್ಟು 30 ಕೆ.ಜಿ. ಗೋಧಿ ಉಪಯೋಗಿಸಲಾಗಿದೆ. ಪ್ರತಿಮೆ ತಯಾರಿಸಲು ಒಟ್ಟು ₨20 ಸಾವಿರ ಖರ್ಚು ಬಂದಿದೆ. ‘ಉದ್ಭವ ಯುವಕರ ಸಂಘ’ದ ಪದಾಧಿಕಾರಿಗಳು ಪಾಳಿಯಲ್ಲಿ ಕೆಲಸ ನಿರ್ವಹಿಸಿ, ಅದಕ್ಕೆ ಆಕಾರ ನೀಡಿದ್ದಾರೆ. ಅಂದಹಾಗೆ ‘ಗೋಧಿ ಗಣಪ’ ತಯಾರಿಕೆಯ ಮುಖ್ಯ ಕೃರ್ತು ಬಿ. ಕೃಷ್ಣರಾಜು. ಅವರೊಬ್ಬ ಕಲಾವಿದ. ನಯಾ ಪೈಸೆ ತೆಗೆದುಕೊಳ್ಳದೆ ಪ್ರತಿಮೆ ಮಾಡಿಕೊಟ್ಟಿದ್ದಾರೆ. ಗೋಧಿ ಅಂಟಿಸುವುದು ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸವನ್ನು ಸಂಘದ ಯುವಕರೇ ಮಾಡಿದ್ದಾರೆ.

ಇದೇ ಮೊದಲಲ್ಲ. ಈ ಹಿಂದೆಯೂ ಭಿನ್ನ ರೀತಿಯ ಗಣೇಶನ ಪ್ರತಿಮೆಗಳನ್ನು ಕೃಷ್ಣರಾಜು ತಯಾರಿಸಿದ್ದಾರೆ. ಹೋದ ವರ್ಷ ಅಕ್ಕಿ ಗಣಪತಿ, ಅದಕ್ಕೂ ಮುಂಚೆ ಬೆಂಕಿ ಪೊಟ್ಟಣ ಗಣಪ, ಅರಿಶಿಣ–ಕುಂಕುಮ, ಹೃದಯ, ಅನಂತ ಪದ್ಮನಾಭ, ಕಲಶ ಗಣಪನ ಪ್ರತಿಮೆಗಳನ್ನು ಮಾಡಿದ್ದಾರೆ. ಹೀಗೆ ಪ್ರತಿ ವರ್ಷ ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಿಂದಲೇ ಜನ ತಪ್ಪದೆ ದೇವಾಂಗಪೇಟೆಗೆ ಹೋಗಿ, ಅಲ್ಲಿನ ಗಣಪನನ್ನು ಕಣ್ತುಂಬಿಕೊಳ್ಳುತ್ತಾರೆ.

‘ಗಣೇಶ ಉತ್ಸವದ ದಿನ ನೂರಾರು ಸಂಖ್ಯೆಯಲ್ಲಿ ಜನ ದರ್ಶನಕ್ಕೆ ಬರುತ್ತಾರೆ. ಪ್ರತಿ ವರ್ಷ ಏನಾದರೂ ಹೊಸತು ಮಾಡಿದರೆ ಜನ ಖುಷಿ ಪಡುತ್ತಾರೆ. ಕೇವಲ ಗಣಪನ ಪ್ರತಿಮೆ ಇಟ್ಟರೆ ಯಾರೂ ಬರುವುದಿಲ್ಲ. ಹಬ್ಬಕ್ಕೂ ಆರು ತಿಂಗಳು ಮುಂಚೆಯೇ ಯೋಚಿಸಿ, ಸಂಘದ ಯುವಕರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ. ಎಲ್ಲರೂ ಕೂಡಿಕೊಂಡೇ ಕೆಲಸ ಮಾಡುತ್ತೇವೆ. ಸುನೀಲ, ನಾಗರಾಜ, ಚೇತನ್‌, ಅಶೋಕ, ರಾಘು, ವಿವೇಕ, ಹನುಮೇಶ, ಮಂಜು ಸೇರಿದಂತೆ ಸ್ಥಳೀಯ ಯುವಕರು ಕೈಜೋಡಿಸಿದ ಕಾರಣ ಗೋಧಿ ಗಣಪ ಸಿದ್ಧವಾಗಿದೆ’ ಎಂದು ಕೃಷ್ಣರಾಜು ವಿವರಿಸಿದರು.

 

ಪ್ರಮುಖ ಸುದ್ದಿಗಳು