ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಸ್ಮಾರ್ಟ್‌ ಫೋನ್‌

ದಾವಣಗೆರೆ: ಗರ್ಭಿಣಿ, ಬಾಣಂತಿಯರ ಹಾಗೂ ಮಕ್ಕಳ ಆರೋಗ್ಯದ ವಿವಿರಗಳನ್ನು ದಾಖಲಿಸಲು ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ ನ್ಯಾಷನಲ್‌ ನ್ಯೂಟ್ರಿಷನ್‌ ಮಿಷನ್‌ನ ಪ್ರಧಾನಮಂತ್ರಿ ಪೋಷಣ್‌ ಅಭಿಯಾನದಡಿ ಶೀಘ್ರದಲ್ಲೇ ಸ್ಮಾರ್ಟ್‌ ಫೋನ್‌ಗಳನ್ನು ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ರಾಜ್ಯದ 19 ಜಿಲ್ಲೆಗಳನ್ನು ಪೋಷಣ್‌ ಅಭಿಯಾನಕ್ಕೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ದಾವಣಗೆರೆಯೂ ಒಂದಾಗಿದೆ. ಸೆ. 30ರವರೆಗೆ ಈ ಅಭಿಯಾನದ ಮೂಲಕ ಪೋಷಕಾಂಶದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ. ಗರ್ಭಿಣಿ, ಬಾಣಂತಿ ಹಾಗೂ ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ, ರಕ್ತ ತಪಾಸಣೆ, ಪೂರಕ ಪೋಷಕಾಂಶಗಳನ್ನು ಪರೀಕ್ಷೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿನ 2,112 ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ಕೊಡಲಾಗುತ್ತದೆ. ತೀವ್ರ ಹಾಗೂ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿ ಹಾಗೂ 6 ವರ್ಷದೊಳಗಿನ ಮಕ್ಕಳ ಪ್ರತ್ಯೇಕ ಮಾಹಿತಿಯ ಚಾರ್ಟ್‌ ಸ್ಮಾರ್ಟ್‌ ಫೋನ್‌ನಲ್ಲಿರುತ್ತದೆ. ಈ ಹಿಂದೆ ನೋಂದಣಿ ಪುಸ್ತಕದಲ್ಲಿ ದಾಖಲಿಸುತ್ತಿದ್ದ ಮಾಹಿತಿಯನ್ನು ಇನ್ನು ಮುಂದೆ ಸ್ಮಾರ್ಟ್‌ ಫೋನ್‌ ಮೂಲಕ ಆನ್‌ಲೈನ್‌ನಲ್ಲಿ ದಾಖಲಿಸಲಾಗುತ್ತದೆ. ಮಾಹಿತಿಯು ನೇರವಾಗಿ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಲಭಿಸುತ್ತದೆ’ ಎಂದು ಹೇಳಿದರು.

ಅಂಗನವಾಡಿ ಬೆಳಿಗ್ಗೆ ಬಂದ ಮಕ್ಕಳ, ಮಧ್ಯಾಹ್ನ ಊಟ ಮಾಡಿದ ಮಕ್ಕಳ ಹಾಗೂ ಮಾತೃಪೂರ್ಣ ಯೋಜನೆಯಲ್ಲಿ ಊಟ ಮಾಡಿದ ಫಲಾನುಭವಿಗಳ ಫೋಟೊಗಳನ್ನು ತೆಗೆದು ದಿನಾಲೂ ಅಪ್‌ಲೋಡ್‌ ಮಾಡಬೇಕು. ಅಂಗನವಾಡಿ ವ್ಯಾಪ್ತಿಯ ಫಲಾನುಭವಿಗಳ ವಿವರಗಳು ಸ್ಮಾರ್ಟ್‌ ಫೋನ್‌ನಲ್ಲಿ ಲಭ್ಯವಾಗುತ್ತದೆ. ಪ್ರತಿ ತಿಂಗಳು ತಪಾಸಣೆ ಮಾಡಿ ತೂಕದ ವಿವರ ನಮೂದಿಸುತ್ತಿದ್ದಂತೆ ಅವರ ವಯಸ್ಸು ಹಾಗೂ ಎತ್ತರದ ಆಧಾರದಲ್ಲಿ ಎಷ್ಟು ತೂಕ ಇರಬೇಕಿತ್ತು ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳು