ಹೊಸಪೇಟೆ: ಹಬ್ಬದ ಭರಾಟೆ, ಖರೀದಿ ಸಂಭ್ರಮ

ಹೊಸಪೇಟೆ: ಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬಕ್ಕೆ ಅಗತ್ಯ ಪೂಜಾ ವಸ್ತುಗಳನ್ನು ಸಾರ್ವಜನಿಕರು ಮಂಗಳವಾರ ಸಂಜೆ ನಗರದಲ್ಲಿ ಖರೀದಿಸಿದರು.

ಮಧ್ಯಾಹ್ನದಿಂದಲೇ ನಗರದ ಮಹಾತ್ಮ ಗಾಂಧಿ ವೃತ್ತ, ಮೇನ್‌ ಬಜಾರ್‌, ಸೋವಿ ಮಾರುಕಟ್ಟೆ, ವಾಲ್ಮೀಕಿ ವೃತ್ತದ ಬಳಿ ಹಬ್ಬದ ವಸ್ತುಗಳನ್ನು ಜನ ಖರೀದಿ ಮಾಡುತ್ತಿದ್ದರು. ಭಾಸ್ಕರ ಮರೆಯಾಗಿ ವಾತಾವರಣ ತಂಪಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಂಡು ಬಂತು.

ವಿವಿಧ ಕಡೆಗಳಿಂದ ಬಂದಿದ್ದ ಜನ ಹೂ, ಹಣ್ಣು, ಕಾಯಿ, ತರಕಾರಿ, ಅಲಂಕಾರಿಕ ವಸ್ತುಗಳು, ಬಾಳೆ ದಿಂಡುಗಳನ್ನು ಖರೀದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ವಾಹನಗಳಲ್ಲಿ ಬಂದದ್ದರಿಂದ ಮಾರುಕಟ್ಟೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಸಂಚಾರ ಪೊಲೀಸರು ದಿನವಿಡೀ ಬೆವರು ಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೂ, ಹಣ್ಣುಗಳ ಬೆಲೆ ಎಂದಿಗಿಂತ ಸ್ವಲ್ಪ ಜಾಸ್ತಿ ಬೆಲೆಯಲ್ಲಿ ಮಾರಾಟ ಮಾಡಲಾಯಿತು. ಇತರೆ ದಿನಗಳಲ್ಲಿ ಒಂದು ಮೊಳ ಮಲ್ಲಿಗೆ ಹೂ ₨10ಕ್ಕೆ ಮಾರಾಟ ಮಾಡಿದರೆ ಮಂಗಳವಾರ ₨20ಕ್ಕೆ ಮಾರಲಾಯಿತು. ಸೇವಂತಿ, ಕನಕಾಂಬರ, ಚೆಂಡು ಹೂ ಬೆಲೆ ಕೂಡ ತುಸು ಜಾಸ್ತಿಯಾಗಿತ್ತು. ಸೋಮವಾರದ ವರೆಗೆ ₨100ರಿಂದ ₨120 ಇದ್ದ ಕೆ.ಜಿ. ಸೇಬಿನ ಬೆಲೆ ₨140ರಿಂದ ₨150ಕ್ಕೆ ಹೆಚ್ಚಾಗಿತ್ತು. ಜನ ಚೌಕಾಸಿ ಮಾಡಿ, ಖರೀದಿಸುತ್ತಿರುವ ದೃಶ್ಯ ಕಂಡು ಬಂತು.

ಯಾವುದೇ ಕಾರಣಕ್ಕೂ ಹಬ್ಬದ ಸಂಭ್ರಮ ಕಳೆಗುಂದಬಾರದು ಎಂದು ನಿರ್ಧರಿಸಿದಂತಿದ್ದ ಜನ ಬೆಲೆ ಹೆಚ್ಚಾದರೂ ಅದನ್ನು ಲೆಕ್ಕಿಸದೆ ಅಗತ್ಯ ವಸ್ತುಗಳನ್ನು ಕೊಂಡೊಯ್ದರು.

ಪ್ರಮುಖ ಸುದ್ದಿಗಳು