ಗೌರಿ ಗಣೇಶನಿಗೇನು ಇಷ್ಟ?

ಹಬ್ಬ ಎಂದರೆ ಎಲ್ಲರಿಗೂ ಸಂತೋಷ. ಅದರಲ್ಲೂ ಗೌರಿ ಗಣೇಶ ಹಬ್ಬ ಅಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಭಾರತೀಯ ಸಂಸ್ಕೃತಿಯಲ್ಲಿ ಇದೊಂದು ಪ್ರಮುಖ ಹಬ್ಬವಾಗಿ ಆಚರಿಸುತ್ತಾರೆ. ಆದರೆ, ಯಾವ ರೀತಿ ಅಲಂಕಾರ ಮಾಡಬೇಕು, ಯಾವ ವಸ್ತ್ರ ಶ್ರೇಷ್ಠ, ಯಾವ ಹೂವಿನಲ್ಲಿ ಅಲಂಕಾರ ಮಾಡಬೇಕು, ಯಾವ ನೈವೇದ್ಯ ಇಷ್ಟ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇಂದು ಗೌರಿ ವ್ರತ, ಗೌರಿ ಹೆಣ್ಣು ಮಕ್ಕಳಿಗೆ ಸಕಲ ಸೌಭಾಗ್ಯ ನೀಡುವಂತವಳು. ಗೌರಿಗೆ ತಾವರೆ, ಜಾಜಿ, ಮಲ್ಲಿಗೆ, ಗೌರಿ ಹೂ, ಕೇದಿಗೆ ಹೂ, ಬಿಲ್ವ ಪತ್ರೆ, ತುಳಸಿ, ದೊಡ್ಡ ಪತ್ರೆ, ದವನ ಅನೇಕ ಪತ್ರೆಗಳು ತುಂಬಾ ಶ್ರೇಷ್ಠವಾಗಿದ್ದು, ಇವುಗಳ ಮೂಲಕ ಗೌರಿಯನ್ನು ಅಲಂಕಾರ ಮಾಡುತ್ತಾರೆ. ಅನೇಕ ನೈವೇದ್ಯಗಳನ್ನು ಮಾಡಿ ಗೌರಿಯನ್ನು ಕೂರಿಸಿ ಮತ್ತೈದೆಯರಿಗೆ
ಬಾಗಿನ ಸಮರ್ಪಣೆ ಮಾಡುವುದು ಗೌರಿ ಹಬ್ಬದ ವಿಶೇಷ.

ಬಾಗಿನದಲ್ಲಿ ಏನೆಲ್ಲ ಇರಬೇಕು: ಗೌರಿ ಹಬ್ಬದಲ್ಲಿ ಬಾಗಿನ ಸಮರ್ಪಣೆಯೇ ಪ್ರಮುಖ ಕಾರ್ಯ. ತವರಿನಿಂದ ಹೆಣ್ಣು ಮಕ್ಕಳಿಗೆ ನೀಡುವ ಸಕಲ ಸಂಪತ್ತೇ ಬಾಗಿನ. ಇದರಲ್ಲಿ ಅರಿಶಿನ, ಸಿಂಧೂರ, ಕನ್ನಡಿ, ಚಾಚಣಿಕೆ, ಕಾಡಿಗೆ, ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಕಡಲೆಬೇಳೆ, ವೀಳ್ಯದ ಎಲೆ, ಅಡಿಕೆ, ತೆಂಗಿನಕಾಯಿ,‌ 5 ರೀತಿಯ ಹಣ್ಣು, ಬೆಲ್ಲ, ಬಳೆ, ವಸ್ತ್ರ ಇರಬೇಕು.

ವಿಘ್ನ ವಿನಾಶಕನ ಹಬ್ಬವನ್ನು ಎಲ್ಲೆಡೆಯೂ ಅದ್ಧೂರಿಯಿಂದ ಆಚರಿಸುತ್ತಾರೆ. ಗಣೇಶನಿಗೆ ಕೆಂಪು ವಸ್ತ್ರ, ಕೆಂಪು ಹೂ, ಗರಿಕೆ ಶ್ರೇಷ್ಠವಾದದ್ದು. ಎಕ್ಕದ ಹೂವಿನ ಹಾರ, ಬಿಲ್ವಪತ್ರೆ, ದೊಡ್ಡ ಪತ್ರೆ ಸೇರಿದಂತೆ ಹಲವು ಪತ್ರೆಗಳಿಂದ ಅಲಂಕರಿಸುತ್ತಾರೆ.  

ಗಣಪ ನೈವೇದ್ಯ ‌ಪ್ರಿಯ: ಕಡುಬು, ಪಂಕಕಜ್ಜಾಯ, ಮೋದಕ, ನೆಲಗಡಲೆ ಪ್ರಿಯ. ಚಕ್ಕಲಿ, ಕೊಡಬಳೆ, ನುಚ್ಚಿನುಂಡೆ, ಕಜ್ಜಾಯ ಜೊತೆಗೆ ಬೇಲದ ಹಣ್ಣು, ಸೀತಾಫಲ, ಸೇಬು, ಪೇರಳೆ ಹಣ್ಣು, ದಾಳಿಂಬೆಯನ್ನು ಇಟ್ಟು ಪೂಜಿಸುತ್ತಾರೆ.

ಪ್ರಮುಖ ಸುದ್ದಿಗಳು