ಮತ್ತೆ ಇಡೀ ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಬರ ಕೈಪಿಡಿ ಮಾನದಂಡಗಳ ಪ್ರಕಾರ ರಾಜ್ಯ ಸರ್ಕಾರ ಮಂಗಳವಾರ ರಾಜ್ಯದ 16 ಜಿಲ್ಲೆಗಳ 86 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಆ ಪೈಕಿ ಜಿಲ್ಲೆಯ ಆರು ತಾಲ್ಲೂಕುಗಳೂ ಬರಪೀಡಿತ ತಾಲ್ಲೂಕುಗಳ ಪಟ್ಟಿ ಸೇರಿವೆ.

ಜಿಲ್ಲೆಯಲ್ಲಿ 1.54 - ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶವಿದೆ. ಆ ಪೈಕಿ ಈ ಬಾರಿ ಮಳೆಯ ಜೂಜಾಟದಿಂದಾಗಿ ಶೇ 58 ರಷ್ಟು ಮಾತ್ರ ಬಿತ್ತನೆಯಾಗಿದೆ. ಮುಂಗಾರಿನ ಹೊಸ್ತಿಲಲ್ಲಿ ಆರ್ಭಟಿಸಿ ಮೇ ಮತ್ತು ಜೂನ್ ಮೊದಲ ವಾರದ ವರೆಗೆ ಚೆನ್ನಾಗಿ ಸುರಿದ ಮಳೆ ಬಳಿಕ ಇಲ್ಲಿಯವರೆಗೆ ‘ಕಣ್ಣು ಮುಚ್ಚಾಲೆ’ ಆಟ ಮುಂದುವರಿಸಿಕೊಂಡು ಬರುತ್ತಿದೆ.

ಈ ಹಿಂದಿನ ಐದು ವರ್ಷಗಳಲ್ಲಿ ಕಳೆದ ವರ್ಷ ಹೊರತುಪಡಿಸಿದಂತೆ ಅದರ ಹಿಂದಿನ ನಾಲ್ಕು ವರ್ಷಗಳು ಸತತವಾಗಿ ಜಿಲ್ಲೆ ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿತ್ತು. ಈ ಬಾರಿಯಾದರೂ ‘ಬರ’ ನೀಗಿತೆಂಬ ಆಸೆಯೊಂದಿಗೆ ಚಾತಕ ಪಕ್ಷಿಗಳಂತಾಗಿದ್ದ ರೈತರಿಗೆ ಇದೀಗ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ.

ಪ್ರಮುಖ ಸುದ್ದಿಗಳು