ನಾ ಬಿಜೆಪಿ ಸೇರಲ್ಲ; ಯತ್ನಾಳರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲ್ಲ!–ಎಂ.ಬಿ.ಪಾಟೀಲ

ವಿಜಯಪುರ: ‘ನಾ ಬಿಜೆಪಿಗೆ ಸೇರುವ ಮಾತೇ ಇಲ್ಲ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ಗೆ ಸೇರುತ್ತೇನೆ ಎಂದರೂ ಸೇರಿಸಿಕೊಳ್ಳಲ್ಲ’ ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ತಿಳಿಸಿದರು.

ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಸಹೋದರ ಸುನೀಲಗೌಡ ಬಿ.ಪಾಟೀಲ ಮಂಗಳವಾರ ಗೆಲುವು ಸಾಧಿಸಿದ ಬಳಿಕ, ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಎಂ.ಬಿ.ಪಾಟೀಲ ಪತ್ರಕರ್ತರೊಂದಿಗೆ ಮಾತನಾಡಿದರು.

‘ಯತ್ನಾಳರ ಎಲ್ಲಾ ಹೇಳಿಕೆಗಳಿಗೂ ಉತ್ತರ ನೀಡಲು ನಾನಿಲ್ಲ. ಬಿಜೆಪಿಗರೇ ಹೇಳಿಕೊಂಡಂತೆ ಇದು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಸಚಿವ ಸಂಪುಟ ವಿಸ್ತರಣೆ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು. ಉಪ ಚುನಾವಣೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ’ ಎಂದು ಇದೇ ಸಂದರ್ಭ ಸ್ಪಷ್ಟಪಡಿಸಿದರು.

‘ಅವಳಿ ಜಿಲ್ಲೆಯ ಕಾಂಗ್ರೆಸ್ಸಿಗರ ಸಾಂಘಿಕ ಯತ್ನದಿಂದಲೇ ಸುನೀಲಗೌಡ ಆಯ್ಕೆಯಾಗಿದ್ದಾರೆ. ರಾಜಕಾರಣ ಮನೆತನದಲ್ಲಿ ಹಾಸುಹೊಕ್ಕಿರುವುದರಿಂದ ಅವನಿಗೆ ಏನನ್ನೂ ಹೇಳುವ ಅಗತ್ಯವಿಲ್ಲ. ಅವಳಿ ಜಿಲ್ಲೆಯ ಮತದಾರರ ನೋವಿಗೆ ಸ್ಪಂದಿಸಿ ಕೆಲಸ ಮಾಡಲಿದ್ದಾನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಬಿಡಲ್ಲ

‘ಸಚಿವ ರಮೇಶ ಜಾರಕಿಹೊಳಿ, ಬಿಜೆಪಿ ಶಾಸಕ ಬಿ.ಶ್ರೀರಾಮುಲು ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಹಗಲುಗನಸು. ಸಮ್ಮಿಶ್ರ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ. ಜಾರಕಿಹೊಳಿ ಸಹೋದರರು ಕಾಂಗ್ರೆಸ್‌ ತೊರೆಯಲ್ಲ. ಅಂಥ ನಿರ್ಧಾರ ತೆಗೆದುಕೊಂಡಿದ್ದರೂ, ಅವರ ಮನವೊಲಿಸಲಿದ್ದೇವೆ’ ಎಂದು ಎಂ.ಬಿ.ಪಾಟೀಲ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಹಿಂದೊಮ್ಮೆ ನಾನು, ಬಿ.ಎಸ್‌.ಯಡಿಯೂರಪ್ಪ ಒಂದೇ ವಿಮಾನದಲ್ಲಿ ಪಯಣಿಸಿದ್ದೆವು. ಅದಕ್ಕೆ ಬೇರೆ ಅರ್ಥ ಕಲ್ಪಿಸಿದರೆ ಏನು ಮಾಡಲು ಸಾಧ್ಯ’ ಎಂದು ಹೇಳಿದರು.

 

ಪ್ರಮುಖ ಸುದ್ದಿಗಳು